ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ ಭರ್ಜರಿ ಬ್ಯಾಟಿಂಗ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ

Public TV
4 Min Read

ರಾಂಚಿ: ಶ್ರೇಯಸ್‌ ಅಯ್ಯರ್‌ (Shreyas Iyer), ಇಶಾನ್‌ ಕಿಶನ್‌ (Ishan Kishan) ಅವರ ಭರ್ಜರಿ ಬ್ಯಾಟಿಂಗ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಬೌಲಿಂಗ್‌ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ  7 ವಿಕೆಟ್‌ಗಳ ಜಯ ಸಾಧಿಸಿದೆ.

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಭಾರತ (Team India) ಮತ್ತು ದಕ್ಷಿಣ ಆಫ್ರಿಕಾ (SouthAfrica) ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಭಾರತದ ಪ್ರಬಲ ಬೌಲಿಂಗ್ ದಾಳಿಗೆ 300ರ ಗಡಿ ಮುಟ್ಟಲು ಸಾಧ್ಯವಾಗದೇ 7 ವಿಕೆಟ್ ನಷ್ಟಕ್ಕೆ 278ರನ್ ಕಲೆಹಾಕಿತು. 279 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ ನಿಗದಿತ 45.5 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 282 ರನ್‌ ಪೇರಿಸಿ ಗೆಲುವು ಸಾಧಿಸಿತು. ಈ ಮೂಲಕ 1-1 ಅಂತರದಲ್ಲಿ ಸರಣಿ ಸಮಬಲ ಸಾಧಿಸಿದೆ.

279 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಪವರ್‌ ಪ್ಲೇ ಮುಗಿಯುವಷ್ಟರಲ್ಲೇ ಆರಂಭಿಕರಾದ ಶುಭಮನ್‌ ಗಿಲ್‌ (Shubman Gill) ಹಾಗೂ ಶಿಖರ್‌ ಧವನ್‌ (Shikhar Dhawan) ಜೋಡಿ ವಿಕೆಟ್‌ ಒಪ್ಪಿಸಿತು. ಈ ವೇಳೆ ಶಿಖರ್‌ ಧವನ್‌ 20 ಎಸೆತಗಳಲ್ಲಿ ಕೇವಲ 13 ರನ್‌ಗಳಿಸಿದರೆ, ಗಿಲ್‌ 26 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 28 ರನ್‌ಗಳಿಸಿ ನಿರ್ಗಮಿಸಿದರು.

ನಂತರ ಕಣಕ್ಕಿಳಿದ ಶ್ರೇಯಸ್‌ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌ ಜೋಡಿ ಭರ್ಜರಿ ಬ್ಯಾಟಿಂಗ್‌ ಮಾಡಿದರು. 155 ಎಸೆತಗಳಲ್ಲಿ 161 ರನ್‌ಗಳ ಜೊತೆಯಾಟವಾಡಿದರು. ಸಿಕ್ಸರ್‌, ಬೌಂಡರಿಗಳ ಜೊತೆಯಾಟದಲ್ಲಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಇಶಾನ್‌ ಕಿಶನ್‌ ಶತಕದ ಸನಿಹದಲ್ಲಿರುವಾಗಲೇ ಔಟಾದರು. ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ ಇಶಾನ್‌ ಕಿಶನ್‌ 84 ಎಸೆತಗಳಲ್ಲಿ 93 ರನ್‌ (7 ಸಿಕ್ಸರ್‌, 4 ಬೌಂಡರಿ) ಗಳಿಸಿ ಔಟಾದರು. ಆ ನಂತರವೂ ತಮ್ಮ ಅಬ್ಬರ ಮುಂದುವರಿಸಿದ ಶ್ರೇಯಸ್‌ ಅಯ್ಯರ್‌ ಶತಕ ಸಿಡಿಸಿ ಮಿಂಚಿದರು.

ಮಿಂಚಿದ ಶ್ರೇಯಸ್‌ ಅಯ್ಯರ್‌:
ದಕ್ಷಿಣಾ ಆಫ್ರಿಕಾ ಬೌಲರ್‌ಗಳ ಬೆವರಿಳಿಸಿದ ಶ್ರೇಯಸ್‌ ಅಯ್ಯರ್‌ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ನೆರವಾದರು. 111 ಎಸೆತಗಳನ್ನು ಎದುರಿಸಿದ ಶ್ರೇಯಸ್‌ ಅಯ್ಯರ್‌ 113 ರನ್‌ (15 ಬೌಂಡರಿ) ಸಿಡಿಸಿ ಅಜೇಯರಾಗುಳಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬಂದ ಸಂಜು ಸ್ಯಾಮ್ಸನ್‌ (Sanju Samson) 36 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್‌ನೊಂದಿಗೆ 29 ರನ್‌ಗಳನ್ನು ಗಳಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು.

ಟೆಂಬಾ ಬವುಮಾ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸಿದ ಕೇಶವ್ ಮಹಾರಾಜ ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಿರ್ಧಾರಕ್ಕೆ ಟಾಪ್ ಆರ್ಡರ್ ಬ್ಯಾಟರ್‌ಗಳು ನೀರಸ ಪ್ರತಿಕ್ರಿಯೆ ತೋರಿದರು. ಮೊದಲಿಗೆ ಇನ್‌ಫಾರ್ಮ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಕೇವಲ 5 ರನ್‌ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆರಂಭಿಕ ಹಿನ್ನಡೆ ಅನುಭವಿಸಿದರು.

ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶಹಬಾಜ್ ಅಹಮದ್ 10 ಓವರ್ ಬೌಲಿಂಗ್‌ ಮಾಡಿ 54ರನ್ ನೀಡಿ 1 ಪ್ರಮುಖ ವಿಕೆಟ್ ಪಡೆದರು. ಓಪನಿಂಗ್ ಬ್ಯಾಟರ್ ಜನ್ನೆಮನ್ ಮಲನ್‌ರನ್ನ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು. ಅಂಪೈರ್ ತೀರ್ಪನ್ನು ನಾಟೌಟ್ ನೀಡಿದಾಗ, ರಿವ್ಯೂ ತೆಗೆದುಕೊಂಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ದಕ್ಷಿಣ ಆಫಿಕಾ ಆರಂಭದಲ್ಲೇ 40 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಈ ವೇಳೆ ರೀಜಾ ಹೆಂಡ್ರಿಕ್ಸ್ ಮತ್ತು ಏಡೆನ್ ಮಕ್ರಾಮ್ ತಂಡಕ್ಕೆ ಆಸರೆಯಾದರು. 3ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ವೈಯಕ್ತಿಕ ಅರ್ಧಶತಕ ದಾಖಲಿಸಿ ತಂಡದ ರನ್‌ ಮೊತ್ತವನ್ನು 150ರ ಗಡಿ ದಾಟಿಸಿತು. ಈ ವೇಳೆ 76 ಎಸೆತಗಳಲ್ಲಿ 74 ರನ್‌ (1 ಸಿಕ್ಸರ್‌, 9 ಬೌಂಡರಿ) ಸಿಡಿಸಿ, ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದ ರೀಜಾ ಹೆಂಡ್ರಿಕ್ಸ್‌ ಅವರನ್ನು ಔಟ್‌ ಮಾಡಿಸಿದ ಮೊಹಮ್ಮದ್‌ ಸಿರಾಜ್‌ ಪೆವಿಲಿಯನ್‌ ದಾರಿ ತೋರಿದರು. ಈ ಮೂಲಕ ಆರಂಭಿಕ ವಿಕೆಟ್ ಪಡೆದಿದ್ದ ಸಿರಾಜ್ ಕಠಿಣವಾಗಿದ್ದ ಜೋಡಿಯನ್ನ ಬೇರ್ಪಡಿಸಿದರು.

ಹೆಂಡ್ರಿಕ್ಸ್ ಔಟಾದ ಬಳಿಕ ಹೆನ್ರಿಚ್ ಕ್ಲಾಸ್ 30 ರನ್‌ ಗಳಿಸಿ ಉತ್ತಮವಾಗೇ ಆಡುತ್ತಿದ್ದ ವೇಳೆ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ರು. 89 ಎಸೆತಗಳಲ್ಲಿ 79ರನ್ ಕಲೆಹಾಕಿದ್ದ ಏಡೆನ್ ಮಕ್ರಾಮ್ ಇನ್ನಿಂಗ್ಸ್‌ಗೆ ವಾಷಿಂಗ್ಟನ್ ಸುಂದರ್ ತೆರೆ ಎಳೆದರು. ವೇಯ್ನೆ ಪರ್ನೆಲ್ 16ರನ್‌ಗಳಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಔಟಾದರು. ಅಂತಿಮ ಓವರ್‌ನಲ್ಲಿ ಕೇವಲ 3 ರನ್ ನೀಡಿ ಕೇಶವ್ ಮಹಾರಾಜ್ ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಭಾರತದ ಪರ ಹೀರೋ ಆಗಿ ಮಿಂಚಿದರು.

ಸಿರಾಜ್‌ ಬೊಂಬಾಟ್‌ ಬೌಲಿಂಗ್‌:
ಟೀಂ ಇಂಡಿಯಾ ಪರ ಬೊಂಬಾಟ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ (Mohammed Siraj) 10 ಓವರ್‌ಗಳಲ್ಲಿ 1 ಮೇಡನ್ ಸಹಿತ 38ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಇನ್ನುಳಿದಂತೆ ಶಾರ್ದೂಲ್ ಠಾಕೂರ್, ಶಹಬಾಜ್ ಅಹಮದ್, ವಾಷಿಂಗ್ಟನ್ ಸುಂದರ್ ಮತ್ತು ಕುಲ್‌ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ 7 ವಿಕೆಟ್‌ ನಷ್ಟಕ್ಕೆ 278ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *