ರಹಾನೆ, ಶುಭಮನ್ ಏಕದಿನಕ್ಕೆ ಆಯ್ಕೆ ಆಗದ್ದು ಅಶ್ಚರ್ಯ ತಂದಿದೆ – ಗಂಗೂಲಿ

Public TV
3 Min Read

ನವದೆಹಲಿ: ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತದ ತಂಡದಲ್ಲಿ ಅಜಿಂಕ್ಯ ರಹಾನೆ ಮತ್ತು ಶುಭಮನ್ ಗಿಲ್ ಆಯ್ಕೆ ಆಗದ್ದಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 2 ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಮೂರು ಮಾದರಿಯ ಸರಣಿಯನ್ನು ಆಡಲು ತೆರಳಲಿದ್ದು, ಆಗಲೇ ಎಂಎಸ್‍ಕೆ ಪ್ರಸಾದ್ ಅವರ ನೇತೃತ್ವದ ಆಯ್ಕೆ ಸಮಿತಿಯೂ ಆಟಗಾರರನ್ನು ಕಳೆದ ಭಾನುವಾರ ಆಯ್ಕೆ ಮಾಡಿದೆ.

ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಏಕದಿನ ತಂಡದಲ್ಲಿ ಅಜಿಂಕ್ಯ ರಹಾನೆ ಮತ್ತು ಯುವ ಆಟಗಾರ ಶುಭಮನ್ ಗಿಲ್ ಇಲ್ಲದಿರವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ “ಎಲ್ಲಾ ಮಾದರಿಯಲ್ಲೂ ಆಡಬಲ್ಲ ಅನೇಕ ಆಟಗಾರರು ತಂಡದಲ್ಲಿ ಇದ್ದಾರೆ. ಆದರೆ ಅಜಿಂಕ್ಯ ರಹಾನೆ ಮತ್ತು ಶುಭಮನ್ ಗಿಲ್ ಏಕದಿನ ತಂಡದಲ್ಲಿ ಇಲ್ಲದಿರುವುದು ಆಶ್ಚರ್ಯ” ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಬಿಸಿಸಿಐನ್ನು ಟ್ಯಾಗ್ ಮಾಡಿ ಇನ್ನೊಂದು ಟ್ವೀಟ್ ಮಾಡಿದ್ದು, ಭಾರತದ ಆಯ್ಕೆ ಸಮಿತಿಯೂ ಆಟಗಾರರ ಲಯ ಮತ್ತು ಆತ್ಮವಿಶ್ವಾಸ ನೋಡಿಕೊಂಡು ಎಲ್ಲಾ ಮಾದರಿಯ ಪಂದ್ಯಗಳಿಗೂ ಒಂದೇ ಆಟಗಾರರನ್ನು ಆಯ್ಕೆ ಮಾಡುವ ಸಮಯ ಬಂದಿದೆ. ಭಾರತದಲ್ಲಿ ಕೆಲ ಆಟಗಾರರು ಮಾತ್ರ ಎಲ್ಲಾ ಸ್ವರೂಪಗಳಲ್ಲಿ ಆಡುತ್ತಿದ್ದಾರೆ. ದೊಡ್ಡ ದೊಡ್ಡ ತಂಡಗಳು ಸ್ಥಿರ ಆಟಗಾರರನ್ನು ಹೊಂದಿರಬೇಕು. ಈ ಆಯ್ಕೆ ಎಲ್ಲರನ್ನು ಸಂತೋಷಪಡಿಸುವುದರ ಬದಲು ದೇಶಕ್ಕಾಗಿ ಮತ್ತು ಸ್ಥಿರ ಪ್ರದರ್ಶನಕ್ಕಾಗಿ ಇರಬೇಕು ಎಂದು ಬರೆದುಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟಿ-20, ಏಕದಿನ ಮತ್ತು ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡಗಳನ್ನು ಭಾನುವಾರ ಪ್ರಕಟಿಸಿದೆ. ಆದರೆ ಭಾರತ ಎ ಮತ್ತು ವೆಸ್ಟ್ ಇಂಡೀಸ್ ಎ ನಡುವೆ ಇತ್ತೀಚೆಗೆ ಮುಕ್ತಾಯಗೊಂಡ ಐದು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶುಭಮನ್ ಗಿಲ್ ಅವರನ್ನು ಏಕದಿನ ತಂಡದಿಂದ ಕೈಬಿಟ್ಟ ಬಗ್ಗೆ ಅನೇಕ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಜೊತೆ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯಾವ ಆಟಗಾರರ ಆಡಬೇಕು ಎಂಬ ಗೊಂದಲದ ನಡುವೇ ಬಿಸಿಸಿಐನ ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ಏಕದಿನ ತಂಡದಲ್ಲಿ 4ನೇ ಕ್ರಮಾಂಕಕ್ಕೆ ಅಜಿಂಕ್ಯ ರಹಾನೆ ಅವರು ಸೂಕ್ತ ಎಂದು ಹೇಳಿದ್ದರು.

ಈ ಎಲ್ಲಾ ಗೊಂದಲಗಳ ನಡುವೇ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ಪ್ರಕಟಗೊಂಡಿದ್ದು ತಂಡಗಳು ಇಂತಿವೆ.

ಟೆಸ್ಟ್ ತಂಡ:
ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕೆ. ಎಲ್.ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್.

ಏಕದಿನ ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ.

ಟಿ-20 ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ.

Share This Article
Leave a Comment

Leave a Reply

Your email address will not be published. Required fields are marked *