ಮೋದಿ ಸೌಂಡ್, ಲೈಟ್ ಥೆರಪಿ ಮಾಡ್ತಿದ್ದಾರೆ: ಆಯುರ್ವೇದ ವೈದ್ಯ ತನ್ಮಯ್ ಗೋಸ್ವಾಮಿ ವಿಶ್ಲೇಷಣೆ

Public TV
4 Min Read

-ಲೈಟ್ ಥೆರಪಿ ಬಗ್ಗೆ ಲೈಟ್ ಆಗಿ ಮಾತಾಡ್ಬೇಡಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಆಯುರ್ವೇದ ಟ್ರೀಟ್ ಮೆಂಟ್ ಕೊಡಲು ಹೊರಟಿದ್ದಾರೆ. ಸೌಂಡ್ ಮತ್ತು ಲೈಟ್ ಥೆರಪಿ ಮಾಡುತ್ತಿದ್ದಾರೆ ಎಂದು ಉಡುಪಿಯ ಖ್ಯಾತ ಆಯುರ್ವೇದ ಪಂಡಿತ ತನ್ಮಯ್ ಗೋಸ್ವಾಮಿ ಪ್ರಧಾನಿಗಳ ಇಂದಿನ ಭಾಷಣವನ್ನು ವಿಶ್ಲೇಷಣೆ ಮಾಡಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಕುಮಾರಸ್ವಾಮಿಯ ಚಿಕಿತ್ಸಕರಾಗಿರುವ ತನ್ಮಯ್, ಮೋದಿ ಕರೆಯನ್ನು ವಿರೋಧಿಸುವವರು ದೀಪ ಬೆಳಗುವುದರಿಂದ ಉಪಯೋಗ ಇಲ್ಲ ಎಂಬೂದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ. ವಿದೇಶದಲ್ಲಿ ಶುಚಿತ್ವಕ್ಕೆ ಮಹತ್ವ ಇದೆ. ನಮ್ಮ ದೇಶದಲ್ಲಿ ಶುಚಿತ್ವ ಮತ್ತು ಶುದ್ಧಿ ಎರಡೂ ಇದೆ. ಜ್ಯೋತಿ ಅಂತಃ ಶುದ್ಧಿಯ ಸಂಕೇತ ಎಂದರು. ದೀಪ ಬೆಳಗುವುದರಿಂದ ಮನೆಯೊಳಗೆ ಧನಾತ್ಮಕ ಶಕ್ತಿ ಅರಳಲು ಸಾಧ್ಯ ಎಂದು ತನ್ಮಯ್ ಗೋಸ್ವಾಮಿ ಹೇಳಿದರು.

ಧನಾತ್ಮಕ ಶಕ್ತಿ: ಜ್ಯೋತಿ ಪ್ರಜ್ವಲನೆಗೆ ಆಯುರ್ವೇದ ಶಾಸ್ತ್ರದಲ್ಲಿ ಬಹಳ ಮಹತ್ವ ಇದೆ. ಭಾರತೀಯರಿಗೆ ಕೆಮಿಕಲ್ ಚಿಕಿತ್ಸೆಗಿಂತ ಪ್ರಾಕೃತಿಕ ಚಿಕಿತ್ಸೆಯ ಉಪಯೋಗ ಹೆಚ್ಚು ಗೊತ್ತಿದೆ. ಮನುಷ್ಯನ ದೇಹ ಪ್ರಕೃತಿಗೆ ದೀಪ ಪ್ರಜ್ವಲನಕ್ಕೂ ಬಹಳಷ್ಟು ಸಾಮ್ಯತೆ ಇದೆ. ದೇವರ ಮುಂದೆ ಒಂದು ದೀಪ ಹಚ್ಚುವುದರಿಂದ ಆ ಮನೆಯ ಸಮಸ್ಯೆ ಬಗೆಹರಿಯುವುದಾದರೆ, ದೇಶದ ಕೋಟ್ಯಂತರ ಜನ ದೀಪ ಹಚ್ಚುವುದರಿಂದ ಧನಾತ್ಮಕ ಶಕ್ತಿ ಸೃಷ್ಟಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಕೊರೊನಾ ವಿರುದ್ಧ ಶುಚಿತ್ವವೇ ಅಸ್ತ್ರ: ಕೊರೊನಾ ವಿರುದ್ಧ ಹೋರಾಡಲು ಇಡೀ ವಿಶ್ವದಲ್ಲಿ ಶುಚಿತ್ವದ ಪಾಠವನ್ನು ಮಾಡುತ್ತಿದೆ. ದೇಹದ ಮತ್ತು ಪರಿಸರದ ಶುಚಿತ್ವ ಎಷ್ಟು ಮುಖ್ಯವೋ ದೇಹದ ಮತ್ತು ಮನಸ್ಸಿನ ಶುದ್ಧಿ ಅಷ್ಟೇ ಮುಖ್ಯ. ವಿದೇಶಿಗರಲ್ಲಿ ಬೇರೆ ಬೇರೆ ದೇಶಗಳಲ್ಲಿ ಕೊರೊನಾ ವಿರುದ್ಧ ಶುಚಿತ್ವವೇ ಅಸ್ತ್ರ ಎಂದು ಜನ ಮನಗಂಡಿದ್ದಾರೆ. ಶುಚಿತ್ವದಿಂದ ವೈರಸ್ ಹರಡುವುದಿಲ್ಲ ಎಂಬುದು ಸತ್ಯ. ಪರಿಸರ ಶುಚಿತ್ವವಾಗುವ ಜೊತೆ ಮನಸ್ಸು ಮತ್ತು ದೇಹ ಶುದ್ಧಿಯಾಗುವುದು ಅಷ್ಟೇ ಮುಖ್ಯ ಎಂದರು.

ಪಾಶ್ಚಾತ್ಯ ದೇಶದಲ್ಲಿ ರೋಗಗಳ ವಿರುದ್ಧ ಹೋರಾಡಲು ಆ್ಯಂಟಿ ಬಯೋಟಿಕ್ ಉಪಯೋಗ ಮಾಡುತ್ತಾರೆ. ಆದರೆ ವಿಶ್ವದಲ್ಲಿ ಭಾರತಕ್ಕೆ ಮಾತ್ರ ಆ್ಯಂಟಿ ವೈರಸ್ ತಯಾರಿಸುವಂಥ ಶಕ್ತಿಯಿದೆ. ದೇಹದಲ್ಲಿ ಶಕ್ತಿಯನ್ನು ವೃದ್ಧಿ ಮಾಡಿಸುವ ಮನಸ್ಸಿಗೆ ಧನಾತ್ಮಕ ಚಿಂತನೆ ಕೊಡುವ ಶಕ್ತಿ ಇರುವುದು ಭಾರತೀಯರಿಗೆ ಮಾತ್ರ. ಭಾರತದ ದೇವಸ್ಥಾನಗಳಲ್ಲಿ ದೀಪ ಬೆಳಗುವ ಹಿಂದಿನ ಆಲೋಚನೆಯೇ ಇದು ಅದು ಶುದ್ಧಿ ಮಾಡುತ್ತದೆ ಎಂದು ತನ್ಮಯ್ ಗೋಸ್ವಾಮಿ ಹೇಳಿದರು.

ದೊಡ್ಡ ಮಟ್ಟದ ಪೊಸಿಟಿವ್ ಎನರ್ಜಿ: ಪರಿಸರದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ಇದ್ದೇ ಇರುತ್ತದೆ. ಒಂದು ದೀಪ ಬೆಳಗಿದ ಕೂಡಲೇ ಕತ್ತಲು ದೂರವಾಗುತ್ತದೆ. ದೀಪ ಬೆಳಗುತ್ತಾ ನಮ್ಮ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಮೊಳಕೆಯೊಡೆಯಲು ಆರಂಭ ಆಗುತ್ತದೆ. ನಮ್ಮ ನಡುವೆ ಗುಡ್ ಮತ್ತು ಬ್ಯಾಡ್ ಅನ್ನೋದು ಇದ್ದದ್ದೇ ಆದರೆ ಧನಾತ್ಮಕ ಚಿಂತನೆಗಳು ನಮ್ಮ ದೇಶಕ್ಕೆ ನಮ್ಮ ದೇಹಕ್ಕೆ ಬೇಕೇ ಬೇಕು. 130 ಕೋಟಿ ಜನ ನಮ್ಮ ದೇಶದಲ್ಲಿದ್ದಾರೆ. ಆ ಪೈಕಿ 50 ರಿಂದ 60 ಕೋಟಿ ಜನ ದೀಪ ಬೆಳಗುವ ಪ್ರಯೋಗ ಮಾಡಿದರೆ ಅವರು ದೊಡ್ಡ ಮಟ್ಟದ ಪೊಸಿಟಿವ್ ಎನರ್ಜಿ ಅದು ದೇಶಕ್ಕೆ ಮತ್ತು ದೇಹಕ್ಕೆ ಸಿಗುತ್ತದೆ ಎಂದು ಹೇಳಿದರು.

ದೀಪ ಬೆಳಗುವುದನ್ನು, ಚಪ್ಪಾಳೆ ತಟ್ಟುವುದನ್ನು ಶಂಖನಾದ ಮೊಳಗಿಸುವುದನ್ನು ಮತ್ತು ಜಾಗಟೆ ಬಡಿಯುವುದನ್ನು ನಾವು ಆಯುರ್ವೇದಕ್ಕೆ ಚಿಕಿತ್ಸೆ ಎಂದು ಪರಿಭಾವಿಸಬೇಕು. ಪ್ರಧಾನಿ ನರೇಂದ್ರ ಮೋದಿ ವಾರದ ಹಿಂದೆ ಸೌಂಡ್ ಥೆರಪಿ ಮುಂದಿನ ಭಾನುವಾರ ಲೈಟ್ ಥೆರಪಿ ಯನ್ನು ಘೋಷಣೆ ಮಾಡಿದ್ದಾರೆ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ ಆಗಿರಬಹುದು, ಆದರೆ ವೈರಸ್ ನಂತಹ ಮಹಾಮಾರಿ ರೋಗಕ್ಕೆ ವೈದ್ಯನಾಗಿ ಬೇರೆ ಬೇರೆ ರೀತಿಯ ಚಿಕಿತ್ಸೆಗಳನ್ನು ಕೊಡಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವೈದ್ಯರಿಲ್ಲದಿದ್ದರೂ ಕೂಡ ಅವರು ಹಲವಾರು ವಿಷಯಗಳನ್ನು ಪಡೆದುಕೊಂಡು ಜನತೆಗೆ ಲೈಟ್ ಮತ್ತು ಸೌಂಡ್ ಥೆರಪಿಯನ್ನು ಕೊಡುತ್ತಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.

ಲೈಟ್ ಆಗಿ ಮಾತಾಡ್ಬೇಡಿ: ಮನುಷ್ಯನ ದೇಹಕ್ಕೆ ಆಹಾರ ಮಾತ್ರ ಸಾಕಾಗುವುದಿಲ್ಲ ಉತ್ತಮವಾದ ಬೆಳಕು, ಶಬ್ದ ಎರಡು ಬೇಕು. ದೀಪ ಉರಿದಾಗ ಫೋಟಾನ್ ಕ್ರಿಯೇಟ್ ಆಗುತ್ತದೆ. ದೇಹದಲ್ಲಿರುವ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗೆ ದೀಪದ ಬೆಳಕು ಒಂದು ಹೊಸ ಶಕ್ತಿಯನ್ನು ಕೊಡುತ್ತದೆ. ದೀಪದಿಂದ ದೀಪದ ಬೆಳಕಿನಿಂದ ಮನುಷ್ಯನಿಗೆ ಶಕ್ತಿ ಸಿಗುವುದಿಲ್ಲ ಎಂದು ಯಾರಾದರೂ ಸಾಬೀತು ಪಡಿಸಿ. ಸಾಬೀತು ಪಡಿಸದೆ ಲೈಟ್ ಥೆರಪಿ ಬಗ್ಗೆ ಲೈಟ್ ಆಗಿ ಮಾತನಾಡಬೇಡಿ. ಮೋದಿ ಹೇಳಿದ್ದನ್ನು ಅವೈಜ್ಞಾನಿಕ ಎಂದು ಹೇಳುವವರು ಅದನ್ನು ಅವೈಜ್ಞಾನಿಕ ಎಂದು ಸಾಬೀತುಪಡಿಸಿ. ಸಾವಿರಾರು ವರ್ಷದಿಂದ ನಮ್ಮ ಈ ದೇಶದಲ್ಲಿ ದೇವಸ್ಥಾನಗಳಲ್ಲಿ ದೀಪ ಹಚ್ಚಿದ್ದು ಸುಳ್ಳಲ್ಲ.. ಸುಮ್ಮನೆ ಅಲ್ಲ. ಯಾವುದೋ ಒಂದು ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವಾಗ ದೀಪ ಬೆಳಗುವುದು ನಾಟಕ ಅಲ್ಲ. ದೀಪದಿಂದ ಬರುವ ಬೆಳಕು ಒಂದು ಚೇತನ ವಿಜ್ಞಾನ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮತ್ತು ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖ ಇದೆ.

ಮನೆಯೊಳಗೆ ಕೂತು ಕತ್ತಲು ಆವರಿಸಿದೆ. ದೇಶದ ಜನಕ್ಕೆ ಧನಾತ್ಮಕ ಚಿಂತನೆಯ ಅಗತ್ಯ ಇದೆ. ಈ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಜಾಗೃತಗೊಳಿಸುವ ಉದ್ದೇಶದಿಂದ ಈ ಲೈಟ್ ಥೆರಪಿಯ ಟಾಸ್ಕ್ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *