ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಸೋನು ಸೂದ್ ಕಾರು ಜಪ್ತಿ

Public TV
3 Min Read

ಚಂಡೀಗಢ: ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಾಲಿವುಡ್ ನಟ ಸೋನು ಸೂದ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪಂಜಾಬ್‍ನ ಮೋಗಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಅವರನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಅವರು ಮತಗಟ್ಟೆಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಅವರ ಕಾರನ್ನು ಜಪ್ತಿ ಮಾಡಲಾಗಿದೆ. ಚುನಾವಣಾ ವೀಕ್ಷಕರ ನಿರ್ದೇಶನದ ಮೇರೆಗೆ ಅವರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

ಮೊಗಾ ಜಿಲ್ಲೆಯ ಪಿಆರ್‍ಒ ಪ್ರದ್ಭದೀಪ್ ಸಿಂಗ್ ಪ್ರಕಾರ, ಸೋನು ಸೂದ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರ ಕಾರನ್ನು ಜಪ್ತಿ ಮಾಡಿ ಅವರನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು, ವಿಶೇಷವಾಗಿ ಅಕಾಲಿದಳದ ಜನರು ವಿವಿಧ ಬೂತ್‍ಗಳಲ್ಲಿ ಬೆದರಿಕೆ ಕರೆಗಳ ಬಗ್ಗೆ ನನಗೆ ತಿಳಿದಿತ್ತು. ಕೆಲವು ಬೂತ್‍ಗಳಲ್ಲಿ ಹಣ ಹಂಚಲಾಗುತ್ತಿದೆ. ಆದ್ದರಿಂದ ಪರಿಶೀಲಿಸಿ ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿಯೇ ನಾವು ಹೊರಗೆ ಹೋಗಿದ್ದೆವು. ಈಗ ನಾನು ಮನೆಯಲ್ಲಿದ್ದೇನೆ. ನ್ಯಾಯಯುತ ಚುನಾವಣೆ ನಡೆಯಬೇಕು ಎಂದರು.

ಚುನಾವಣೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಳವಿಕಾ ಸೂದ್, ಈ ಹಿಂದೆ ಪಂಜಾಬ್‍ನ ಮೋಗಾ ಕ್ಷೇತ್ರದಿಂದ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸುತ್ತಿರುವುದಾಗಿ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಹೊಂದಿದ್ದೇನೆ ಅಂತ ಹೇಳಿದ್ದರು. ನಾನು ಇಂದು ಸಕಾರಾತ್ಮಕ ಭಾವನೆ ಹೊಂದಿದ್ದೇನೆ. ವಿದೇಶದಿಂದ ಬಂದವರು ಸೇರಿದಂತೆ ಬಹಳಷ್ಟು ಜನರು ಕರೆ ಮಾಡುತ್ತಿದ್ದಾರೆ. ನನ್ನ ಬೆಂಬಲಕ್ಕಾಗಿ ಹುರಿದುಂಬಿಸುತ್ತಿದ್ದಾರೆ. ಅವರಲ್ಲಿ ಹಲವರು ಇಂದು ನನಗೆ ಮತ ಹಾಕುವಂತೆ ಭರವಸೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

ನಾನು ಜನರ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾವು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ. ಬೇರೆ ಯಾವುದೇ ಅಭ್ಯರ್ಥಿಗಳು ಇಷ್ಟು ಸಾಮಾಜಿಕ ಕೆಲಸ ಮಾಡಿದ್ದಾರೆ ಅಂತ ನಾನು ಭಾವಿಸುವುದಿಲ್ಲ ಎಂದರು.

ಈ ವರ್ಷದ ಜನವರಿ 10 ರಂದು ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಪಂಜಾಬ್‍ನ ಮೊಗಾದಲ್ಲಿ ಕಾಂಗ್ರೆಸ್‍ಗೆ ಸೇರಿದರು. ರಾಜ್ಯದ 2.14 ಕೋಟಿ ಮತದಾರರು ಭಾನುವಾರ 117 ಕ್ಷೇತ್ರಗಳಿಂದ ಕಣದಲ್ಲಿರುವ 1304 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

ರಾಜ್ಯದ 117 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. ಪಂಜಾಬ್ ಈ ಬಾರಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷದ ಮೈತ್ರಿ, ಮತ್ತು ಭಾರತೀಯ ಜನತಾ ಪಾರ್ಟಿ-ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಒಕ್ಕೂಟದೊಂದಿಗೆ ಸ್ಪರ್ಧೆಗೆ ಸಾಕ್ಷಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *