ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ – ಸೋನಿಯಾ ಗಾಂಧಿ ಅಸಮಾಧಾನ?

Public TV
2 Min Read

ನವದೆಹಲಿ: ಮಂಗಳವಾರ ಬಿಡುಗಡೆಯಾಗಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಮುಖಪುಟವನ್ನು ನೋಡಿ ಸೋನಿಯಾ ಗಾಂಧಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಪ್ರಣಾಳಿಕೆಯ ಮುಖಪುಟದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯೊಂದಿಗೆ ರಾಹುಲ್ ಗಾಂಧಿಯ ಫೋಟೋವನ್ನು ಕೂಡ ನೀಡಲಾಗಿದ್ದು, ಈ ಕುರಿತಂತೆ ಸೋನಿಯಾ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ವೇದಿಕೆಗೆ ತೆರಳುವ ಮುನ್ನ ಸೋನಿಯಾ ಅವರಿಗೆ ಪ್ರಣಾಳಿಕೆಯ ಪ್ರತಿಯನ್ನ ಎಐಸಿಸಿ ಸಂಶೋಧನಾ ತಂಡ ಮುಖ್ಯಸ್ಥ ರಾಜೀವ್ ಗೌಡ ಅವರು ನೀಡಿದ್ದು, ಈ ವೇಳೆಯೇ ಸೋನಿಯಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ರಾಜೀವ್ ಗೌಡ ವಿವರಣೆ ನೀಡಿ ಸಮರ್ಥನೆ ನೀಡಿದ್ದರೂ ಕೂಡ ಸೋನಿಯಾ ಅಸಮಾಧಾನ ದೂರ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಮುಖಪುಟದಲ್ಲಿ ಜನ ಸಾಗರದ ದೃಶ್ಯದೊಂದಿಗೆ ಪಕ್ಷದ ಚಿಹ್ನೆ ಪಕ್ಕದಲ್ಲೇ ರಾಹುಲ್ ಗಾಂಧಿ ಫೋಟೋ ನೀಡಲಾಗಿತ್ತು.

ಅಸಮಾಧಾನಕ್ಕೆ ಕಾರಣವೇನು?
ಸೋನಿಯಾ ಗಾಂಧಿ ಅಸಮಾಧಾನಗೊಳ್ಳಲು ಪ್ರಮುಖ ಕಾರಣ ಮುಖ ಪುಟದ ವಿನ್ಯಾಸ ರಚನೆ ಎನ್ನಲಾಗಿದೆ. ಭಾರೀ ಸಂಖ್ಯೆಯಲ್ಲಿ ಸೇರಿದ ಜನಸ್ತೋಮದ ಫೋಟೋವನ್ನು ನೋಡಿ ಸೋನಿಯಾ ಗಾಂಧಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಘೋಷವಾಕ್ಯವನ್ನು ದೊಡ್ಡ ಅಕ್ಷರಗಳಲ್ಲಿ ಮುದ್ರಣ ಮಾಡಿ ಅದರ ಕೆಳಗಡೆ ಸಣ್ಣ ವಿನ್ಯಾಸದಲ್ಲಿ ಪಕ್ಷದ ಚಿಹ್ನೆ ಹಾಗೂ ರಾಹುಲ್ ಗಾಂಧಿ ಫೋಟೋ ಪ್ರಕಟಿಸಿದ್ದಕ್ಕೆ ಸೋನಿಯಾ ಗಾಂಧಿ ಗರಂ ಆಗಿದ್ದಾರೆ ಎನ್ನಲಾಗಿದೆ.

ಪ್ರಣಾಳಿಕೆ ಬಿಡುಗಡೆ ಸಮಾರಂಭದ ಆರಂಭದಿಂದಲೂ ಸೋನಿಯಾಗಾಂಧಿ ಸಿಟ್ಟಾದಂತೆ ಕಂಡು ಬಂದಿದ್ದರು. ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಮಾತನಾಡಲಿಲ್ಲ. ಅಷ್ಟೇ ಅಲ್ಲದೇ ಸಭಿಕರ ಪ್ರಶ್ನೆಯನ್ನು ಸಹ ಸೋನಿಯಾ ಗಾಂಧಿ ತೆಗೆದುಕೊಂಡಿರಲಿಲ್ಲ. ಪಕ್ಷದ ಹಿರಿಯ ನಾಯಕರಾದ ಮನಮೋಹನ್ ಸಿಂಗ್ ಮತ್ತು ಚಿದಂಬರಂ ಅವರು ಮೈಕ್ ನಲ್ಲಿ ಮಾತನಾಡಿದ್ದರು.

2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದೆ ಎಂದು ವಿವರಿಸಿದ್ದರು. ಉದ್ಯಮ, ಉದ್ಯೋಗ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಹೊಸ ಸಚಿವಾಲಯ, 2020 ಮಾರ್ಚ್ ರೊಳಗೆ ಕೇಂದ್ರ, ಸಾರ್ವಜನಿಕ ಸೇವಾ ವಲಯ ಸೇರಿದಂತೆ ಸರ್ಕಾರದಲ್ಲಿರುವ ಖಾಲಿ ಇರುವ 4 ಲಕ್ಷ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳವುದು, ಸರ್ಕಾರಿ ಹುದ್ದೆಗಳಿಗೆ ಉಚಿತವಾಗಿ ಪರೀಕ್ಷೆ ಸೇರಿದಂತೆ ಯುವ ಜನತೆಯನ್ನು ದೃಷ್ಟಿಯಲ್ಲಿಟ್ಟು ಹಲವು ಅಶ್ವಾಸನೆಗಳನ್ನು ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *