Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

Public TV
4 Min Read

– ʻಬಾ ನಲ್ಲೆ ಮಧುಚಂದ್ರಕೆʼ ಸಿನಿಮಾ ಸ್ಟೈಲ್‌ನಲ್ಲಿ ಪತ್ನಿಯಿಂದ ಕೊಲೆ
– ತನಿಖೆಯ ದಿಕ್ಕನ್ನೇ ಬದಲಿಸಿದ ಟೂರಿಸ್ಟ್‌ ಗೈಡ್‌ ಹೇಳಿಕೆ
– ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ

ಶಿಲ್ಲಾಂಗ್‌: ಕಳೆದ ಮೇ 23ರಂದು ಹನಿಮೂನ್ ಸಲುವಾಗಿ ಮೇಘಾಲಯದ (Meghalaya) ಚಿರಾಪುಂಜಿಗೆ ಪ್ರಯಾಣ ಬೆಳೆಸಿದ್ದ ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ (Raja Raghuvanshi Murder) ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಆತನ ಪತ್ನಿಯೇ ಸುಪಾರಿ ಕೊಟ್ಟು ಬಾಡಿಗೆ ಕೊಲೆಗಾರರ ಸಹಾಯದಿಂದ ಪತಿಯನ್ನ ಕೊಲೆ ಮಾಡಿದ್ದಾಳೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಕಳೆದ ವಾರ ರಾಜಾ ರಘುವಂಶಿ ಅವರ ಮೃತದೇಹ ಮೇಘಾಲಯದಲ್ಲಿ ಕಂದಕದಲ್ಲಿ ಪತ್ತೆಯಾಗಿತ್ತು. ಟ್ಯಾಟೂ ಗುರುತಿನಿಂದ ರಘುವಂಶಿ ಗುರುತನ್ನು ಪತ್ತೆ ಮಾಡಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಪತಿಯ ಕೊಲೆಗೆ ಸಂಬಂಧಿಸಿ ಪತ್ನಿ ಸೋನಮ್‌ಳನ್ನ (Sonam Raghuvanshi) ಉತ್ತರ ಪ್ರದೇಶದ ಘಾಜಿಪುರದಲ್ಲಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಪತ್ನಿಯೇ ಸುಪಾರಿ ಕೊಟ್ಟು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಸೋನಮ್‌ ಸಂಪರ್ಕವನ್ನು ಪೊಲೀಸರು ಪರಿಶೀಲಿಸಲು ಮುಂದಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮೇಘಾಲಯ ಪೊಲೀಸ್ ಮಹಾನಿರ್ದೇಶಕಿ ಇದಶಿಶಾ ನೊಂಗ್ರಾಂಗ್, ಸೋನಮ್ ತನ್ನ ಪತಿಯ ಕೊಲೆಯ ಪಿತೂರಿಯಲ್ಲಿ ಭಾಗಿಯಾಗಿದ್ದಾಳೆ ಮತ್ತು ಕೊಲೆಗೆ ಬಾಡಿಗೆ ಹಂತಕರನ್ನು ನೇಮಿಸಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಸೋನಮ್ ಮತ್ತು ಮಧ್ಯಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹನಿಮೂನ್‌ನಲ್ಲೇ ಹತ್ಯೆ – ಏನಿದು ದ್ವೇಷ?
ಇಂದೋರ್ (Indore) ಮೂಲದ ರಾಜಾ ರಘುವಂಶಿ ಮತ್ತು ಸೋನಮ್‌ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

ಪತ್ನಿಗೆ ಚಟ್ಟಕಟ್ಟಿದ್ದೇಕೆ?
ಸೋನಮ್‌ಗೆ ಘಾಜಿಪುರದ ನಂದಗಂಜ್‌ನಲ್ಲಿರುವ ರಾಜ್ ಕುಶ್ವಾಹ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆಕೆ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ ವೇಳೆ ಸೊಹ್ರಾ ಪ್ರದೇಶದಲ್ಲಿ ಪತಿಯನ್ನ ಕೊಲೆ ಮಾಡಲು ಆಕೆ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿದ್ದಳು.

ಟೂರಿಸ್ಟ್‌ ಗೈಟ್‌ ಸ್ಫೋಟಕ ಹೇಳಿಕೆಯಿಂದ ಸಿಕ್ಕ ಸುಳಿವು
ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಈ ಮೊದಲು ಕೂಡ ಟೂರಿಸ್ಟ್‌ಗಳು ನಾಪತ್ತೆಯಾಗಿದ್ದರು. ಇದರಿಂದಾಗಿ ರಾಜಾ ರಘುವಂಶಿ ದಂಪತಿ ನಾಪತ್ತೆ ಪ್ರಕರಣ ಮೇಘಾಲಯದಲ್ಲಿ ಭಾರೀ ಸುದ್ದಿಯಾಗಿತ್ತು. ರಾಜಾ ರಘುವಂಶಿ ಮೃತದೇಹ ಪತ್ತೆ ಬಳಿಕ ಪ್ರಕರಣದ ಹಿಂದಿನ ಪಿತೂರಿ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇದೇ ವೇಳೆ ಸ್ಥಳೀಯ ಟೂರಿಸ್ಟ್ ಗೈಡ್ ಒಬ್ಬರು ಸ್ಫೋಟಕ ಮಾಹಿತಿ ನೀಡಿದ್ದರು.

ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮಾವ್ಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‌ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು. ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪೊಲೀಸ್ ತನಿಖೆಯ ದಿಕ್ಕನ್ನೇ ಬದಲಿಸಿತ್ತು.

ಆದರೆ ಸೋನಮ್ ತಂದೆ ತನ್ನ ಮಗಳು ರಾಜಾ ರಘುವಂಶಿ ಕೊಲೆ ಮಾಡಿದ್ದಾಳೆ ಎಂಬ ಆರೋಪವನ್ನು ತಿರಸ್ಕರಿಸಿದ್ದಾರೆ. ಮೇಘಾಲಯ ಪೊಲೀಸರು ಕಥೆ ಕಟ್ಟುತ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಸದ್ಯ ಈ ಕೊಲೆಯ ಮೂಲವನ್ನು ಪೊಲೀಸರು ಬೇಧಿಸಿದ್ದು ರಾಜಾ ರಘುವಂಶಿ ಕುಟುಂಬಸ್ಥರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.

ತನಿಖೆಗೆ ಎಸ್‌ಐಟಿ ರಚನೆ
ಇನ್ನೂ ಈ ಪ್ರಕರಣದ ತನಿಖೆ ನಡೆಸಲು ಮೇಘಾಲಯ ಪೊಲೀಸರು ವಿಶೇಷ ತನಿಖಾ ತಂಡವನ್ನ ರಚಿಸಿದ್ದು, ಈವರೆಗೆ ಮೂವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿದ್ದು, ಸೋನಮ್‌ ಬಗೆಗಿನ ಸ್ಫೋಟಕ ರಹಸ್ಯಗಳನ್ನೂ ಬಯಲಿಗೆಳೆಯುತ್ತಿದ್ದಾರೆ.

Share This Article