ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ

Public TV
2 Min Read

ದಾವಣಗೆರೆ: ಆಸ್ತಿಯ ಸಲುವಾಗಿ ಜಗಳವಾಡಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಕೊನೆಗೆ ಅಳಿಯ ಅತ್ತೆಯನ್ನು ಕೊಲೆ ಮಾಡಿದ್ದ. ಈಗ ಅವನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿದೆ.

ದಾವಣಗೆರೆ ನಗರದ ಹೊಂಡದ ಸರ್ಕಲ್‍ನ ಅಭಿರಾಜ್ ಶಿಕ್ಷೆಗೆ ಒಳಗಾದ ಯುವಕ. ಅತ್ತೆ ಭಾಗ್ಯಮ್ಮ ಕೊಲೆಯಾಗಿದ್ದ ಮಹಿಳೆ. 2019 ರ ಜುಲೈ 18 ರಂದು ಭಾಗ್ಯಮ್ಮಳನ್ನು ಆಸ್ತಿ ಆಸೆಗೆ ಅಭಿರಾಜ್ ಕೊಲೆ ಮಾಡಿದ್ದನು. ಈ ಪ್ರಕರಣ ಇನ್ನೂ ನ್ಯಾಯಾಲಯದ ಮುಂದೆ ಇತ್ತು. ಅಭಿರಾಜ್‍ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಕೊಟ್ಟಿದ್ದು, ಈ ಕೇಸ್‍ಗೆ ಮುಕ್ತಿ ಸಿಕ್ಕಿದೆ. ಇದನ್ನೂ ಓದಿ: ಇಂದು ರಾಜ್ಯದ ಮೊದಲ ಕೋಕಾ ಕೇಸ್‍ನ ತೀರ್ಪು ಪ್ರಕಟ- ಪಾತಕಿ ಬನ್ನಂಜೆ ರಾಜಾ ಸೇರಿ 13 ಪಾತಕಿಗಳ ಭವಿಷ್ಯ ನಿರ್ಧಾರ

ಪ್ರಕರಣದ ಹಿನ್ನೆಲೆ: ಈಗಿನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದದ ಹನುಮಂತಪ್ಪ ಅವರ ಪುತ್ರಿ ಭಾಗ್ಯಮ್ಮ ಅವರು 14 ವರ್ಷಗಳ ಹಿಂದೆ ದಾವಣಗೆರೆಯ ಶಿವಕುಮಾರ್ ಅವರನ್ನು ಮದುವೆಯಾಗಿದ್ದರು.

ಈ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಮದ್ಯವ್ಯಸನ ಚಟದಿಂದಾಗಿ ಶಿವಕುಮಾರ್ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದ. ಭಾಗ್ಯಮ್ಮ ಮಗಳನ್ನು ಅಕ್ಕನ ಮನೆಯಲ್ಲಿ ಬಿಟ್ಟು, ಗಂಡನ ಸ್ವಂತ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದಳು. ಶಿವಕುಮಾರ್ ಅಕ್ಕನ ಮಗನಾದ ಅಭಿರಾಜ್, ಭಾಗ್ಯಮ್ಮ ಅವರ ಹಿಂದಿನ ಮನೆಯಲ್ಲೇ ವಾಸವಾಗಿದ್ದ. ಭಾಗ್ಯಮ್ಮ ವಾಸವಿರುವ ಮನೆಯನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಅವರ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದ.

ಮಚ್ಚಿನಿಂದ ಕೊಚ್ಚಿದ
ಭಾಗ್ಯಮ್ಮ ಮನೆಗೆ ಬೇರೆ-ಬೇರೆ ಗಂಡಸರು ಬಂದು ಹೋಗುತ್ತಿದ್ದಾರೆ ಎಂದು ಆಕೆಯ ತಾಯಿ ಹಾಗೂ ಅಣ್ಣನಿಗೆ ಚಾಡಿ ಹೇಳುತ್ತಿದ್ದ. 2019ರ ಜುಲೈ 18 ರಂದು ರಾತ್ರಿ ಅಭಿರಾಜ್ ಮನೆಗೆ ಬಂದಾಗ ತನ್ನ ಬಗ್ಗೆ ಚಾಡಿ ಹೇಳುತ್ತಿರುವುದನ್ನು ಭಾಗ್ಯಮ್ಮ ಪ್ರಶ್ನಿಸಿದ್ದಾರೆ. ಈಕೆಯನ್ನು ಸುಮ್ಮನೆ ಬಿಟ್ಟರೆ ತನಗೆ ಆಸ್ತಿ ಸಿಗುವುದಿಲ್ಲ ಎಂದು ಅಭಿರಾಜ್ ಮಚ್ಚಿನಿಂದ ಭಾಗ್ಯಮ್ಮ ಅವರನ್ನು ಕೊಲೆ ಮಾಡಿದ್ದ. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

ಈ ಪರಿಣಾಮ ಅಂದಿನ ಸಿಪಿಐ ಉಮೇಶ್ ಜಿ.ಬಿ.ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ.ವಿಜಯಾನಂದ ಅವರು ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *