ಋಣ ತೀರಿಸಲು 100 ವರ್ಷ ಪೂರೈಸಿದ ತಾಯಿಗೆ ಬೆಳ್ಳಿ ಕಿರೀಟ ತೊಡಿಸಿದ ಮಗ

Public TV
2 Min Read

ಧಾರವಾಡ: ಸಾಮ್ರಾಜ್ಯ ಗೆದ್ದ ಮಕ್ಕಳಿಗೆ ತಾಯಿಯೇ ಎದುರು ನಿಂತು ಕಿರೀಟ ಹಾಕಿ ಪಟ್ಟಾಭಿಷೇಕ ಮಾಡಿರುವುದು ಚರಿತ್ರೆಯ ಪುಟಗಳಲ್ಲಿ ನಾವು ಓದಿದ್ದೇವೆ. ಆದರೆ ಧಾರವಾಡದಲ್ಲಿ ರೈತರೊಬ್ಬರು ತಮ್ಮ ತಾಯಿಯ ಶತಮಾನೋತ್ಸವಕ್ಕೆ ಬೆಳ್ಳಿ ಕಿರೀಟ ತೊಡಿಸಿ ಸಾವಿರಾರು ಜನರ ಮಧ್ಯೆ ಅಭಿನಂದಿಸಿದ್ದಾರೆ.

ಡಾಕ್ಟರ್, ಇಂಜಿನಿಯರ್ ಓದಿ ಕೆಲಸ ಸಿಕ್ಕ ಬಳಿಕ ವಿದೇಶದಲ್ಲಿ ಸುಖ ಜೀವನ ನಡೆಸುವ ಕೆಲ ಮಕ್ಕಳು ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ ಸೇರಿಸುವ ಕಾಲವಿದು. ಇಂಥಹ ಕಾಲದಲ್ಲಿ ಧಾರವಾಡ ಜಿಲ್ಲೆಯ ಹೊಲ್ತಿಕೋಟಿ ಗ್ರಾಮದ ರೈತ ಮಹದೇವಪ್ಪ ಕೋರಿ ಅವರು ತಾಯಿಯನ್ನು ದೇವರೆಂದು ತಿಳಿಯಬೇಕು, ಎಲ್ಲಾ ಮಕ್ಕಳು ತಮ್ಮ ತಂದೆ, ತಾಯಿಯರನ್ನು ಕೊನೆವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಸಂದೇಶ ಸಾರುವುದಕ್ಕೆ ಜನರ ಮಧ್ಯೆ ತಾಯಿಗೆ ಬೆಳ್ಳಿ ಕಿರೀಟ ತೊಡಿಸಿ, ಶತಮಾನೋತ್ಸವ ಆಚರಿಸಿದ್ದಾರೆ.

ಮಹದೇವಪ್ಪ ತಮ್ಮ ತಾಯಿ ಮಲ್ಲಮ್ಮ ಅವರಿಗೆ ಶತಮಾನೋತ್ಸವ ಮಾಡಿ ಕಿರೀಟ ತೊಡಿಸಿದ್ದು, ಈ ಕಾರ್ಯಕ್ರಮಕ್ಕೆ ಐವರು ಹಿರಿಯ ಸ್ವಾಮೀಜಿಗಳಾದ ಮಲ್ಲಿಕಾರ್ಜುನ ಶ್ರೀಗಳು, ಬಸವಾನಂದ ಶ್ರೀಗಳು, ಶಿರಹಟ್ಟಿ ಫಕ್ಕಿರೇಶ್ವರ ಶ್ರೀಗಳು, ಇಂಗಳಗಿ ಶ್ರೀಗಳು ಹಾಗೂ ದೇವರಹುಬ್ಬಳ್ಳಿ ಸಿದ್ಧ ಶಿವಯೋಗಿ ಶ್ರೀಗಳನ್ನ ಕರೆಸಿ ಮಹದೇವಪ್ಪ ತಮ್ಮ ತಾಯಿಯ ತುಲಾಭಾರ ಸೇವೆ ಮಾಡಿಸಿದರು. ಈ ಮೂಲಕ ತಮ್ಮ ತಾಯಿಯ ಮಾದರಿ ಬದುಕು ಇತರರಿಗೂ ತಿಳಿಯುವಂತೆ ಮಾಡಿದ್ದಾರೆ.

ಮಹದೇವಪ್ಪ ಅವರು ಬಹಳ ಕಷ್ಟ ಪಟ್ಟು ದುಡಿದು 47 ಎಕ್ರೆಯಷ್ಟು ಜಮೀನು ಸಂಪಾದಿಸಿದ್ದಾರೆ. ಈ ಜಮೀನು ಖರೀದಿಸುವುದಕ್ಕೆ ಅವರ ತಾಯಿ ಮಲ್ಲಮ್ಮ ಕಾರಣ. ಹೀಗಾಗಿ ತಾಯಿಯೇ ದೇವರು ಎಂದು ತಿಳಿದಿರುವ ಮಹದೇವಪ್ಪ ಅವರು ಅಮ್ಮನಿಗೆ ಅಷ್ಟೇ ಅಲ್ಲದೇ ತನ್ನ ಅಕ್ಕ ಪಕ್ಕದ ಗ್ರಾಮದ ನೂರು ವರ್ಷ ವಯಸ್ಸು ತುಂಬಲು ಬಂದ ದಲಿತರು, ಮುಸ್ಲಿಂ ಸೇರಿ ಎಲ್ಲಾ ವರ್ಗದ ಹಿರಿಯ ನಾಗರಿಕರನ್ನು ಸನ್ಮಾನಿಸಿದ್ದಾರೆ.

ಮಗನ ಆರೈಕೆಯಿಂದಲೇ ತಾಯಿ ಇಷ್ಟು ಗಟ್ಟುಮುಟ್ಟಾಗಿ ಇದ್ದಾರೆ. ತಾಯಿ ಕೂಲಿ ಮಾಡಿ ಬೆಳೆಸಿದ್ದಕ್ಕೆ ಮಗ ಎತ್ತರಕ್ಕೆ ಬೆಳೆದ. ಈಗ ಮಗ ತಾಯಿಯ ಋಣ ತೀರಿಸುವ ಕೆಲಸ ಮಾಡುತ್ತಿದ್ದಾನೆ. ಈ ಮೂಲಕ ಮಗ ತಾಯಿಯ ಋಣ ತೀರಿಸಲು ಆಗತ್ತೊ ಇಲ್ಲವೊ ಗೊತ್ತಿಲ್ಲ. ಆದರೆ ಇಡಿ ಗ್ರಾಮದ ಎದುರು ಮಗ ತನ್ನ ತಾಯಿಗೆ ತೊರಿಸಿದ ಪ್ರೀತಿಯಂತೂ ಇತರರಿಗೆ ಮಾದರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *