ತಾಯಿ ಸಾವಿನಿಂದ ಮನನೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಗ

Public TV
2 Min Read

ಮೈಸೂರು: ತಾಯಿಯ ಸಾವಿನಿಂದ ಮನನೊಂದು ಮಗ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ವಾಜಮಂಗಲದಲ್ಲಿ ನಡೆದಿದೆ.

ವಾಜಮಂಗಲದ ರತ್ನಮ್ಮ(55) ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ತಾಯಿ ಮೃತಪಡುವುದು ಸ್ಪಷ್ಟವಾಗುತ್ತಿದ್ದಂತೆ ಮಗ ಸತೀಶ್ ಆತ್ಮಹತ್ಯೆ ನಿರ್ಧಾರ ಮಾಡಿ ಸೆಲ್ಫಿ ವಿಡಿಯೋ ಮಾಡಿದ್ದಾನೆ. ಇನ್ನೂ ಕೆಲವೇ ಕ್ಷಣಗಳಲ್ಲಿ ನನ್ನ ತಾಯಿ ಸಾಯುತ್ತಾರೆ. ಹೀಗಾಗಿ ನಾನು ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ತಾಯಿಯ ಸಾವಿನ ಸುದ್ದಿ ಅಧಿಕೃತವಾಗುತ್ತಿದ್ದಂತೆ ಸತೀಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಡಿಯೋದಲ್ಲೇನಿದೆ?: ಎಲ್ಲಾ ನನ್ನ ಸ್ನೇಹಿತರಿಗೆ ನನ್ನ ಕಡೆಯ ನಮಸ್ಕಾರಗಳು. ನಮ್ಮ ತಾಯಿ ಬೆಳಗ್ಗೆ ತೀರಿಕೊಳ್ಳುತ್ತಿದ್ದಾರೆ. ಅದಕ್ಕೆ ನನಗೆ ನನ್ನ ತಾಯಿಯನ್ನು ಬಿಟ್ಟು ಬದುಕಲು ಆಗಲ್ಲ. ಹಾಗಾಗಿ ನಾನು ನನ್ನ ತಾಯಿ ಜೊತೆ ಹೋಗಬೇಕು ಎಂದು ನಿರ್ಧರಿಸಿದ್ದೇನೆ. ನಾನು ಏಕೆ ಈ ವಿಡಿಯೋ ಮಾಡುತ್ತಿದ್ದೀನಿ ಎಂದರೆ ನನ್ನ ಸ್ನೇಹಿತರು ಹಾಗೂ ನನ್ನ ಸಂಬಂಧಿಕರು ಎಲ್ಲರನ್ನೂ ನಾನು ಪ್ರೀತಿಯಿಂದ ಮೋಸ ಮಾಡುತ್ತಿದ್ದೀನಿ. ಏಕೆಂದರೆ ನನ್ನ ತಾಯಿ ತೀರಿಕೊಳ್ಳತ್ತಿದ್ದಾರೆ. ನನ್ನ ಪ್ರೀತಿಸೋ ಎಲ್ಲ ಸ್ನೇಹಿತರಿಗೂ ನನ್ನ ಕಡೆಯ ನಮಸ್ಕಾರಗಳು ಹಾಗೂ ನನ್ನ ಪ್ರೀತಿಯ ಕುಮಾರಣ್ಣನಿಗೆ, ಸತೀಶ್ ಅಣ್ಣ, ವೀರೂ, ಜಿದ್ದು, ವಿನೋದ್, ಯೋಗೇಶ್ ಹಾಗೂ ನನ್ನ ಇತರ ಆತ್ಮೀಯ ಸ್ನೇಹಿತರಿಗೆ ನನ್ನ ಕಡೆಯ ನಮಸ್ಕಾರ. ದಯವಿಟ್ಟು ನನ್ನ ಕ್ಷಮಿಸಿ. ನಾನು ಕೆಲವರಿಗೆ ಮೋಸ ಮಾಡಿ ಹೋಗುತ್ತಿದ್ದೀನಿ. ಯಾಕೆ ಎಂದು ಹೇಳೋಕೆ ಆಗಲ್ಲ. ನನ್ನ ತಾಯಿ ಚೆನ್ನಾಗಿ ಇದಿದ್ದರೆ ನಾನು ಯಾರಿಗೂ ಮೋಸ ಮಾಡುತ್ತಿರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ಎಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸತೀಶ್ ತನ್ನ ತಾಯಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ. ಹೀಗಾಗಿ ತಾಯಿಯ ಸಾವಿನ ಬೆನ್ನಲ್ಲೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ವರ್ಷಗಳ ಹಿಂದಷ್ಟೇ ಸತೀಶ್ ತಂದೆಯೂ ತೀರಿಕೊಂಡಿದ್ದರು. ನಾಲ್ಕು ಜನರ ಕುಟುಂಬದಲ್ಲಿ ಈಗ ಒಬ್ಬ ಮಗಳಷ್ಟೇ ಬದುಕುಳಿದಿದ್ದಾಳೆ. ಕುಟುಂಬದ ಮೂವರನ್ನ ಕಳೆದುಕೊಂಡ ಮನೆ ಮಗಳ ಗೋಳು ಮುಗಿಲು ಮುಟ್ಟಿದೆ.

ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *