ಚಾಮರಾಜನಗರ: ಬರ್ತ್ ಸರ್ಟಿಫಿಕೇಟ್ ಇಲ್ಲದೇ ಆಧಾರ್ ಕಾರ್ಡ್ ಸಿಗದ ಕಾರಣ, ಶಕ್ತಿ ಯೋಜನೆಯಡಿ ಬಸ್‌ನಲ್ಲಿ ಉಚಿತ ಪ್ರಯಾಣದಿಂದ ಸೋಲಿಗ ಬಾಲಕಿಯೊಬ್ಬಳು ವಂಚಿತಳಾಗಿದ್ದಾಳೆ. ಆಕೆ ನಿತ್ಯ 30 ರೂ. ಬಸ್ ಚಾರ್ಜ್ ಕೊಟ್ಟು ಓಡಾಡುವಂತಹ ದುಸ್ಥಿತಿ ಎದುರಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌಳೇಹಳ್ಳ ಡ್ಯಾಂ ನಿವಾಸಿ ಎಸ್.ಚೈತ್ರಾ ಎಂಬಾಕೆಯ ದುಸ್ಥಿತಿಯಾಗಿದೆ. ಬಾಲಕಿ ಚೈತ್ರಾ ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನಿತ್ಯವೂ ಕೂಡ ಶಾಲೆಗೆ ಕೌಳೇಹಳ್ಳದಿಂದ ಲೊಕ್ಕನಹಳ್ಳಿಗೆ ಸಂಚರಿಸಬೇಕಿದೆ. ಇದಕ್ಕಾಗಿ ನಿತ್ಯ 30 ರೂ. ಖರ್ಚು ಮಾಡುವ ಪರಿಸ್ಥಿತಿ ಇದೆ. ಪುಟ್ಟ ಹೆಣ್ಣು ಮಗುವಿನಿಂದ ಹಿಡಿದು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಇದೆ. ಆದರೆ, ಈ ಸೋಲಿಗ ಬಾಲಕಿಗೆ ಮಾತ್ರ ಉಚಿತ ಪ್ರಯಾಣದ ಭಾಗ್ಯವಿಲ್ಲ. ಪ್ರತಿ ದಿನ 30 ರೂಪಾಯಿ ಬಸ್ ಚಾರ್ಜ್ ತೆತ್ತು ಶಾಲೆಗೆ ಹೋಗಿ ಬರುವ ಪರಿಸ್ಥಿತಿ ಇದೆ. ಮೊದಲೇ ಬಡ ವಿದ್ಯಾರ್ಥಿ, ಉಚಿತ ಸೌಲಭ್ಯದಿಂದ ವಂಚಿತವಾಗಿದ್ದೇನೆ ಅಂತಾ ಅಳಲು ತೋಡಿಕೊಳ್ಳುತ್ತಿದ್ದಾರೆ.
ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆ, ಬಸ್ ಪ್ರಯಾಣ ಎಲ್ಲದಕ್ಕೂ ಆಧಾರ್ ಕಾರ್ಡ್ ಬೇಕೇಬೇಕು. ಆದರೆ, ಆಧಾರ್ ಕಾರ್ಡ್ ಇಲ್ಲದೆ ಎಲ್ಲ ಸೌಲಭ್ಯಗಳಿಂದ ವಂಚಿತಳಾಗಿದ್ದಾಳೆ. ಮನೆಯಲ್ಲೇ ಜನಿಸಿದ್ದರಿಂದ ಬರ್ತ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಬರ್ತ್ ಸರ್ಟಿಫಿಕೇಟ್ ಇಲ್ಲದೆ ಆಧಾರ್ ಕಾರ್ಡ್ ಕೊಡ್ತಿಲ್ಲ. ತಂದೆ ಇಲ್ಲ, ತಾಯಿ ಮಹದೇವಮ್ಮ ಕೂಲಿ ಕೆಲಸ ಮಾಡ್ತಿದ್ದಾಳೆ. ನಿತ್ಯ ಕೂಲಿ ಮಾಡಿ ಮಗಳಿಗೆ ಬಸ್ ಚಾರ್ಜ್ ಕೊಟ್ಟು ಕಳಿಸಬೇಕಾಗಿದೆ. ಕೂಡಲೇ ಆಧಾರ್ ಕಾರ್ಡ್ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.