ರಸ್ತೆ ಅಪಘಾತ, ದೇವನಕಟ್ಟಿಯ ಯೋಧ ಮುಂಬೈನಲ್ಲಿ ಸಾವು- ಸ್ವಗ್ರಾಮದಲ್ಲಿ ಅಂತಿಮ ನಮನ

Public TV
1 Min Read

– ಸೇವೆಗೆ ಹೊರಟಿರುವಾಗಲೇ ಅಪಘಾತ
– ಸರ್ಕಾರಿ ಗೌರವದೊಂದಿಗೆ ಯೋಧನಿಗೆ ಅಂತಿಮ ನಮನ

ಚಿಕ್ಕೋಡಿ: ಸೇವೆಗೆ ಹಾಜರಾಗಲು ಹೊರಟಿರುವಾಗ ಸೆಪ್ಟೆಂಬರ್ 1ರಂದು ಮಾರ್ಗಮಧ್ಯೆ ಮುಂಬಯಿ ನಗರದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಾಯಭಾಗ ತಾಲೂಕಿನ ಯೋಧ ಯಲ್ಲಪ್ಪಾ ಬಾಲಪ್ಪಾ ನಾಯಿಕ ಅವರ ಅಂತ್ಯಸಂಸ್ಕಾರವನ್ನು ತಾಲೂಕಿನ ದೇವನಕಟ್ಟಿಯಲ್ಲಿ ಗುರುವಾರ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ರಾಯಭಾಗ ತಾಲೂಕು ದೇವನಕಟ್ಟಿ ನಿವಾಸಿಯಾದ ಯಲ್ಲಪ್ಪಾ ಅವರು, ಕಳೆದ 9 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ರಾತ್ರಿ ಸೇವೆಗೆ ಹಾಜರಾಗಲು ಸ್ವಗ್ರಾಮದಿಂದ ಜಮ್ಮು-ಕಾಶ್ಮೀರಕ್ಕೆ ಹೊರಟಿರುವಾಗ ಮಾರ್ಗಮಧ್ಯೆ ರಸ್ತೆಯ ಅಪಘಾತದಿಂದ ಸಾವನ್ನಪ್ಪಿದ್ದರು. ಯಲ್ಲಪ್ಪ ಅವರ ಪಾರ್ಥಿವ ಶರೀರವು ಗುರುವಾರ ಬೆಳಗ್ಗೆ 6ಗಂಟೆ ಸುಮಾರಿಗೆ ಬೆಳಗಾವಿಗೆ ಆಗಮಿಸಿತ್ತು. ಮಧ್ಯಾಹ್ನ ರಸ್ತೆಯ ಮೂಲಕ ಬೆಳಗಾವಿಯಿಂದ ಸ್ವಗ್ರಾಮಕ್ಕೆ ತರಲಾಯಿತು. ಮಾಜಿ ಸೈನಿಕರು, ಮತ್ತಿತರರು ಸ್ಥಳಕ್ಕೆ ಬಂದು ಹೂ ಮಾಲೆಗಳನ್ನು ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ತಲೆ ಎತ್ತಿರುವ ಅಕ್ರಮ ಕ್ಯಾಸಿನೋ ಅಡ್ಡೆಗಳನ್ನು ಕೂಡಲೇ ನಿಲ್ಲಿಸಿ – ಕೆಜೆ ಜಾರ್ಜ್ ಪತ್ರ

ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ವತಿಯಿಂದ ಯೋಧನಿಗೆ ಗೌರವ ಸಲ್ಲಿಸಿದ ಬಳಿಕ ಅಲಂಕೃತ ವಾಹನದಲ್ಲಿ ಬೂದಿಹಾಳ ಕ್ರಾಸ್‍ನಿಂದ ದೇವನಕಟ್ಟೆಯವರೆಗೆ ಮೆರವಣಿಗೆ ಮಾಡಲಾಯಿತು. ಬಳಿಕ ಅದೇ ವಾಹನದಲ್ಲಿ ಶರೀರವನ್ನು ದೇವನಕಟ್ಟೆಗೆ ಒಯ್ದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಿ, ಬಳಿಕ ಸರ್ಕಾರಕ್ಕೆ ಸೇರಿದ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಯೋಧ ಯಲ್ಲಪ್ಪನ ಪ್ರಾರ್ಥಿವ ಶರೀರ ಗುರು ರೂಪಿಸಿವಾರ ದೇವನಕಟ್ಟಿಗೆ ಬಂದಾಗ ಸುತ್ತಲಿನ ಗ್ರಾಮಸ್ಥರು, ಜನಪ್ರತಿನಿಧಿಗಳು ಕಂಬನಿ ಗೈದರು.

ಯೋಧನ ಮಡದಿ, ತಾಯಿ ಬಂಧುಗಳು ಅಂತಿಮ ನಮನ ಸಲ್ಲಿಸಿದರು. ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಸಂದರ್ಭದಲ್ಲಿ ಮೃತ ಯೋಧನ ಮಗ ಬಾಲಚಂದ್ರ ನನ್ನಪ್ಪನನ್ನು ಮಲಗಿಸಿ ಬೆಂಕಿ ಹಚ್ಚುತ್ತಿದ್ದೀರಿ ಅವರಿಗೆ ನೋವಾಗುತೆ ಎಂದಾಗ ನೆರೆದಿದ್ದವರಲ್ಲಿ ದುಃಖ ಉಮ್ಮಳಿಸಿತ್ತು. ತಹಶೀಲ್ದಾರ್ ರಿಯಾಜುದ್ದಿನ ಬಾಗವಾನ, ಸಿಪಿಐ ಎಚ್.ಡಿ.ಮುಲ್ಲಾ, ಕಂದಾಯ ನಿರೀಕ್ಷಕ ವಿಜಯ ಜೋರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಡವಳಿ, ಇಓ ಡಾ.ಸುರೇಶ ಕದ್ದು ಇತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *