ಗ್ರಹಣದ ಎಫೆಕ್ಟ್ – ನಿನ್ನೆಯಿಂದ್ಲೇ ದೊಡ್ಡ ಗಣಪತಿ ದೇವಾಲಯ ಬಂದ್

Public TV
1 Min Read

ಬೆಂಗಳೂರು: ಕೇತುಗ್ರಸ್ಥ ಸೂರ್ಯಗ್ರಹಣದ ಹಿನ್ನೆಲೆ ದೊಡ್ಡ ಗಣಪತಿ ದೇವಾಲಯವನ್ನ ಬುಧವಾರ ರಾತ್ರಿಯೇ ಬಂದ್ ಮಾಡಲಾಗಿದೆ. ಬುಧವಾರ ರಾತ್ರಿಯೇ ವಿಶೇಷ ಪೂಜೆ ಮುಗಿಸಿ ಬಸವನಗುಡಿಯ ದೊಡ್ಡಗಣಪತಿ ದೇಗುಲದ ಆವರಣದ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗಿದೆ.

ಗ್ರಹಣ ಮುಗಿಯೋವರೆಗೂ ದೇವಾಲಯ ಬಂದ್ ಆಗಿರುತ್ತೆ. ಗ್ರಹಣ ಮುಗಿದ ನಂತರ ದೊಡ್ಡ ಗಣಪತಿ ದೇವಾಲಯದ ಶುಚಿ ಕಾರ್ಯ ನಡೆಯಲಿದೆ. ಮೊದಲು ಗಣಪತಿ ಪೂಜೆ, ಪುಣ್ಯಾಃ, ಪಂಚಗವ್ಯ, ಬಿಂಬಶುದ್ಧಿ, ರುದ್ರಾಭೀಷೇಕ, ಸರ್ಪ ಸೂಕ್ತ ಪಾರಾಯಣ ಮಾಡಿ ಮಹಾಮಂಗಳಾರತಿ ಮಾಡಲಾಗುತ್ತದೆ.

ಕೇತುಗ್ರಸ್ಥ ಸೂರ್ಯಗ್ರಹಣ ಹಿನ್ನೆಲೆ ಕೇತುವಿಗೆ ವಿಶೇಷ ಭಕ್ಷ್ಯಗಳಿಂದ ನೈವೇದ್ಯ ಮಾಡಲಾಗುತ್ತೆ. ನಂತರ ಮಹಾಮಂಗಳಾರತಿ, ಕೇತು ಶಾಂತಿ ಯಾಗ ನಡೆಯಲಿದೆ. ಇಂದು ಎಂಟು ಗಂಟೆಗೆ ಗ್ರಹಣ ಶುರುವಾದ ವೇಳೆಗೆ ರಸ್ತೆಗಳಲ್ಲಿ ಜನರ ಓಡಾಟ ಬಹುತೇಕ ಕಡಿಮೆಯಾಗಿದೆ. ವಾಹನಗಳು ಬಿಟ್ಟರೆ ಜನ ಓಡಾಡೋದು ವಿರಳವಾಗಿದೆ. ಸದಾ ಜನಜಂಗುಳಿಯಿಂದ ಇರುತ್ತಿದ್ದ ಗಾಂಧಿಬಜಾರ್ ಇಂದು ಬಿಕೋ ಎನ್ನುತ್ತಿದೆ. ಕೆಲವೇ ಕೆಲವು ಹೂವಿನ ಅಂಗಡಿಗಳು ಬಿಟ್ಟು ಎಲ್ಲವೂ ಬಂದ್ ಮಾಡಲಾಗಿದೆ. ಹಣ್ಣು ಹೂವಿನ ವ್ಯಾಪಾರಿಗಳು ಬೆಳಗ್ಗೆ ಆರು ಗಂಟೆಗೆ ಅಂಗಡಿ ತೆಗೆದಿದ್ದರೂ ಒಬ್ಬರೂ ಖರೀದಿಗೆ ಬಂದಿಲ್ಲ ಎನ್ನುತ್ತಿದ್ದಾರೆ.

ಹಣ್ಣುಗಳನ್ನ ಯಾಕೆ ಗ್ರಹಣ ಕಾಲದಲ್ಲಿ ತಗೊಬೇಕು ಅಂತ ಜನ ಬರೋದೆ ನಿಲ್ಲಿಸಿದ್ದಾರೆ ಎಂದು ವ್ಯಾಪಾರಿಗಳು ಹೇಳಿದರು. ಮಾಮೂಲಿ ದಿನಕ್ಕೆ ಹೋಲಿಸಿದರೆ ಇಂದು ಶೇ. 10ರಷ್ಟು ಕೂಡ ಜನ ಓಡಾಡುತ್ತಿಲ್ಲ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸೂರ್ಯ ಗ್ರಹಣ ಮೋಡದಲ್ಲಿ ಮರೆಯಾದಂತೆ ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *