ಹೇಮಾವತಿ ನದಿ ಮೂಲಕ್ಕೆ ಸಂಚಕಾರ – ಮಣ್ಣು ಮಾಫಿಯಾಕ್ಕೆ ನದಿ ಮೂಲ ಬಲಿಯಾಗುತ್ತಾ?

1 Min Read

ಚಿಕ್ಕಮಗಳೂರು: ಬೆಂಗಳೂರು, ಹಾಸನ, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕಕ್ಕೆ ನೀರಿನ ಸೌಲಭ್ಯ ಕಲ್ಪಿಸುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೇಮಾವತಿ ನದಿ ಉಗಮ ಸ್ಥಾನಕ್ಕೆ ಸಂಚಕಾರ ಎದುರಾಗಿದೆ.

ಜಾವಳಿ ಸಮೀಪ ಹುಟ್ಟುವ ಹೇಮಾವತಿ ನದಿ ಮೂಲದಲ್ಲೇ ಅಕ್ರಮ ಮಣ್ಣು ಮಾಫಿಯಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ದಕ್ಷಿಣ ಕರ್ನಾಟಕದ ಜೀವನಾಡಿಯಾಗಿರುವ ಹೇಮಾವತಿ ನದಿಯ ಮೂಲ ಪ್ರದೇಶದಲ್ಲೇ ಅಕ್ರಮ ಮಣ್ಣು ಗಣಿಗಾರಿಕೆ ದಂಧೆ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಾವಳಿ ಬಳಿ ಹುಟ್ಟಿ ಗೊರೂರು ಡ್ಯಾಂ ಮೂಲಕ ಕೆ.ಆರ್.ಎಸ್. ಸೇರಿ ಬೆಂಗಳೂರು, ಹಾಸನ, ಮೈಸೂರು ಭಾಗಗಳ ನೀರಿನ ದಾಹ ನೀಗಿಸುವ ಹೇಮಾವತಿ ನದಿ ಬುಡಕ್ಕೆ ಮಣ್ಣು ಮಾಫಿಯಾದ ಕಣ್ಣು ಬಿದ್ದಿದೆ. ಇದನ್ನೂ ಓದಿ: ಭದ್ರಾ ಜಲಾಶಯದಿಂದ ತುಂಗ ಭದ್ರಾ ನದಿಗೆ ನೀರು – ಸಾರ್ವಜನಿಕರಿಗೆ ಎಚ್ಚರಿಕೆ

ನದಿಯ ಮೂಲ ಪ್ರದೇಶದಲ್ಲೇ ಜೆಸಿಬಿ ಮತ್ತು ಟಿಪ್ಪರ್‌ಗಳ ಮೂಲಕ ಹಗಲು ವೇಳೆಯೇ ಮಣ್ಣು ಸಾಗಿಸಲಾಗುತ್ತಿದೆ. ಟಿಪ್ಪರ್‌ಗೆ ಇಷ್ಟು ಹಣ ಎಂದು ವಸೂಲಿ ಮಾಡಿ ಮಣ್ಣು ತುಂಬಿ ಕಳಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ತಾಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರ ಹಾಗೂ ಅಧಿಕಾರಿಗಳ ಭಯವಿಲ್ಲದೇ ಅಕ್ರಮ ದಂಧೆ ನಡೆಯುತ್ತಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಜಾವಳಿ ಬಳಿ ಹನಿ–ಹನಿಯಾಗಿ ಹುಟ್ಟಿ ವರ್ಷಪೂರ್ತಿ ಹರಿದು ಕೋಟ್ಯಂತರ ಜೀವಿಗಳ ದಾಹ ನೀಗಿಸುವ ನೈಸರ್ಗಿಕ ಜಲಮೂಲವನ್ನು ನಾಶ ಮಾಡಿದರೆ, ಅದನ್ನು ಮತ್ತೆ ಸೃಷ್ಟಿಸಲು ಸಾಧ್ಯವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ. ಸಾವಿರಾರು ಎಕರೆ ಜಮೀನಿಗೆ ನೀರು ಒದಗಿಸುವ, ರೈತರು ಹಾಗೂ ದನಕರುಗಳಿಗೆ ವರವಾಗಿರುವ ಹೇಮಾವತಿ ನದಿಯನ್ನು ಉಳಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಕೂಡಲೇ ಅಕ್ರಮ ಮಣ್ಣು ಮಾಫಿಯಾದ ಮೇಲೆ ಬ್ರೇಕ್ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮೂಡಿಗೆರೆ ತಾಲೂಕಿನ ಸ್ಥಳೀಯರು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಲಕ್ಕುಂಡಿ ಉತ್ಕನನ – ಶಿವಲಿಂಗದ ಪಾಣಿಪೀಠವನ್ನು ಸಂಪೂರ್ಣ ಹೊರತೆಗೆದ ಪುರಾತತ್ವ ಇಲಾಖೆ

Share This Article