ವೇಷಧರಿಸಿ 72 ಲಕ್ಷ ರೂ. ದಾನ ಮಾಡಿದ್ದ ರವಿ ಕಟಪಾಡಿ ಈ ಬಾರಿ ಡಾರ್ಕ್ ಅಲೈಟ್ ಲುಕ್‍ನಲ್ಲಿ ಪ್ರತ್ಯಕ್ಷ

Public TV
2 Min Read

ಉಡುಪಿ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಲಕ್ಷಾಂತರ ರೂಪಾಯಿ ಹಣ ಇರಬೇಕು ಎಂದೇನಿಲ್ಲ. ಒಳ್ಳೆಯ ಮನಸಿದ್ದರೆ ಸಾಕು. ಉಡುಪಿಯ ರವಿ ಕಟಪಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನ ವೇಷಹಾಕಿ ಕಳೆದ ಆರು ವರ್ಷದಲ್ಲಿ 72 ಲಕ್ಷ ರೂಪಾಯಿ ದಾನ ಮಾಡಿದ್ದಾರೆ. ಈ ಬಾರಿ ಹಾಲಿವುಡ್ ಸಿನಿಮಾದ ಡಾರ್ಕ್ ಅಲೈಟ್ ವೇಷದಲ್ಲಿ ರವಿ ಪ್ರತ್ಯಕ್ಷ ಆಗಲಿದ್ದಾರೆ.

ಸಾಂಕ್ರಾಮಿಕ ಕೊರೊನಾ ನಡುವೆಯೇ ಶ್ರೀಕೃಷ್ಣ ಜನ್ಮಾಷ್ಟಮಿ ಬಂದಿದೆ. ಅದ್ದೂರಿ ಅಷ್ಟಮಿ ಆಚರಣೆಗೆ ಉಡುಪಿ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ. ಅಷ್ಟಮಿ ದಿನ ಸಾವಿರಾರು ಜನ ವೇಷ ಧರಿಸುತ್ತಿದ್ದರು, ಆದರೆ ಈ ಬಾರಿಯೂ ಅದಕ್ಕೆ ಚಾನ್ಸ್ ಇಲ್ಲ. ನಮ್ಮ ಪಬ್ಲಿಕ್ ಹೀರೋ, ಸಮಾಜಸೇವಕ ಉಡುಪಿಯ ರವಿ ಕಟಪಾಡಿಗೆ ಸ್ಪೆಷಲ್ ಅವಕಾಶ ಕೊಡಲಾಗಿದೆ. ಹಾಲಿವುಡ್ ಸಿನಿಮಾದ ಫ್ಯಾಂಟಸಿ ವೇಷ ಡಾರ್ಕ್ ಅಲೈಟ್ ಆಗಿ ಎರಡು ದಿನ ರವಿ ಉಡುಪಿಯಲ್ಲಿ ಓಡಾಡಲಿದ್ದಾರೆ. ಇದನ್ನೂ ಓದಿ: ಬಿಗ್ ಬಿ ಮುಂದೆ ಕರೋಡ್ ಪತಿ ಸೀಟಲ್ಲಿ ಕುಳಿತ ಉಡುಪಿಯ ರವಿ ಕಟಪಾಡಿ!

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವಿ ಕಟಪಾಡಿ, ಕಳೆದ ಬಾರಿ ಧನಸಹಾಯ ಮಾಡಲು ಆಗಿರಲಿಲ್ಲ. ಮನಸ್ಸಿಗೆ ಬಹಳ ಬೇಸರವಾಗಿತ್ತು. ಈ ಬಾರಿ ಮತ್ತೆ ಶ್ರೀಕೃಷ್ಣಜನ್ಮಾಷ್ಟಮಿ ಬಂದಿದೆ. ನಾಲ್ಕು ಮಕ್ಕಳಿಗೆ ಸಹಾಯ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಆ ನಂತರ ಎರಡು ಕುಟುಂಬಗಳು ನಮ್ಮನ್ನು ಸಂಪರ್ಕ ಮಾಡಿದವು. ಅವರಿಗೂ ಸಹಾಯ ಮಾಡುತ್ತೇವೆ. ಕೊರೊನಾ ಕಾಲದಲ್ಲೂ ನಮಗೆ ಅವಕಾಶ ಕೊಟ್ಟ ಜಿಲ್ಲಾಡಳಿತಕ್ಕೆ ಧನ್ಯವಾದ. ಜನರ ಬಳಿಗೆ ಬರುತ್ತೇವೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ರವಿ ವಿನಂತಿ ಮಾಡಿಕೊಂಡರು.

ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುವ ರವಿ ಕಟಪಾಡಿ ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೇಷಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಾರೆ. ಕಳೆದ ಆರು ವರ್ಷದಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿಯನ್ನು ಸುಮಾರು 33 ಮಕ್ಕಳಿಗೆ ನೀಡಿದ್ದಾರೆ. ಬಿಗ್ ಬಿ ನಡೆಸುವ ಕರೋಡ್ ಪತಿಯಲ್ಲಿ ಬಂದ ಎಂಟು ಲಕ್ಷ ರೂಪಾಯಿಯನ್ನು ಪೂರ್ತಿಯಾಗಿ ಕಷ್ಟದಲ್ಲಿರುವವರಿಗೆ ಕೊಟ್ಟಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ವೆಬ್ ಸೈಟ್ ಗಳಲ್ಲಿ ಬಂದ ಹಣದಲ್ಲಿ ಒಂದು ರೂಪಾಯಿಯನ್ನು ರವಿ ಇಟ್ಟುಕೊಂಡಿಲ್ಲ. ಕಳೆದ ಬಾರಿ ಕೊರೊನಾ ಸಾಂಕ್ರಾಮಿಕ ವಿಪರೀತ ಇದ್ದ ಕಾರಣ ರವಿ ಜನಜಾಗೃತಿಗಾಗಿ ವೇಷ ಹಾಕಿದ್ದರು. ಧನಸಂಗ್ರಹ ಮಾಡಿರಲಿಲ್ಲ. ಈ ಬಾರಿ ಜಿಲ್ಲಾಡಳಿತ ರವಿ ಕಟಪಾಡಿ ಅವರಿಗೆ ಸ್ಪೆಷಲ್ ಪರ್ಮಿಷನ್ ಕೊಟ್ಟಿದೆ. ರವಿ ಫ್ರೆಂಡ್ಸ್ ಕಟಪಾಡಿ ಆರು ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ.

ರವಿ ಫ್ರೆಂಡ್ಸ್ ಸದಸ್ಯ ಕಾರ್ತಿಕ್ ಮಾತನಾಡಿ, ಆರು ವರ್ಷದಿಂದ ಈ ಸೇವೆಯನ್ನು ಮಾಡುತ್ತಿದ್ದೇವೆ. ರವಿ ಕಟಪಾಡಿ ಕೂಲಿ ಕೆಲಸ ಮಾಡಿ ಜೀವನ ಮಾಡುವವರು, ಅವರೂ ಕಷ್ಟದಲ್ಲಿದ್ದಾರೆ. ಆದರೆ ಇನ್ನೊಬ್ಬರ ಕಷ್ಟಕ್ಕೆ ಮಾಡುವ ಸಹಾಯದಿಂದ ಅವರು ಸಂತೃಪ್ತಿ ಪಡೆಯುತ್ತಾರೆ. ನಮಗೂ ಅದೇ ಖುಷಿ. ನಾಲ್ಕು ದಿನ ನಿರಂತರ ಶ್ರಮ ಪಡುತ್ತೇವೆ. ರವಿ ಆಹಾರ ಇಲ್ಲದೆ ಎರಡು ದಿನ ಉಪವಾಸವಿದ್ದು ವೇಷ ಹಾಕುತ್ತಾರೆ ಎಂದರು. ಇದನ್ನೂ ಓದಿ: ವರ್ಷಕ್ಕೊಮ್ಮೆ ವೇಷ ಬದಲಿಸೋ ರವಿ ಕಟಪಾಡಿ- ವೇಷ ಹಾಕಿ 35 ಲಕ್ಷ ಸಹಾಯ

ರವಿ ಫ್ರೆಂಡ್ಸ್ ತಂಡದ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲಾಗಿದೆ. ವ್ಯಾಕ್ಸಿನ್ ಪಡೆದವರಿಗೆ ಮಾತ್ರ ತಂಡದಲ್ಲಿ ಅವಕಾಶ ಕೊಡಲಾಗಿದೆ. ಆಗಸ್ಟ್ 30 ಮತ್ತು 31 ರಂದು ಉಡುಪಿ, ಕಾಪು-ಮಲ್ಪೆ ವ್ಯಾಪ್ತಿಯಲ್ಲಿ ಓಡಾಡಿ ಧನಸಂಗ್ರಹ ಮಾಡಲಿದ್ದಾರೆ. ಸಂಗ್ರಹವಾಗುವ ಒಂದೊಂದು ರೂಪಾಯಿ ಕಷ್ಟದಲ್ಲಿರುವ ಕುಟುಂಬಗಳ ಪಾಲಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *