ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ

Public TV
2 Min Read

ಮಂಡ್ಯ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಡ್ಯ ನಗರದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಜೊತೆಗೆ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಮಸೂದೆ ತಿದ್ದುಪಡಿ ಮಾಡಬಾರದು ಎಂದು ಆಗ್ರಹಿಸಿದರು.

ಪೌರತ್ವ ಮಸೂದೆ ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ದೇಶದ ಜಾತ್ಯಾತೀತ ತತ್ವವನ್ನು ನಾಶ ಮಾಡುವ ಮಸೂದೆಯನ್ನು ಯಾರು ಬೆಂಬಲಿಸುವುದಿಲ್ಲ. ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಮಸೂದೆಗೆ ನಮ್ಮ ವಿರೋಧ ಇದೆ. ಕೂಡಲೇ ಮಸೂದೆ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶನಿವಾರ ಬಿಎಸ್‍ಪಿ ಜಿಲ್ಲಾ ಶಾಖೆಯಿಂದ ಪಕ್ಷದ ಪದಾಧಿಕಾರಿಗಳಿಗೆ ಸಾಮಾಜಿಕ ಪರಿವರ್ತನಾ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಎಂ.ಕೃಷ್ಣಮೂರ್ತಿ ಅವರು, ವಿವಾದಿತ ಪೌರತ್ವ ಮಸೂದೆ ತಿದ್ದುಪಡಿ ಭಾರತೀಯರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಅದ್ಯಾವ ಪುರುಷಾರ್ಥಕೆ ಕೇಂದ್ರ ಸರ್ಕಾರ ಮಸೂದೆ ತಿದ್ದುಪಡಿ ಮಾಡಿದೆ ಎಂದು ಪ್ರಶ್ನಿಸಿದರು.

ಪೌರತ್ವ ತಿದ್ದುಪಡಿ ಮಸೂದೆ ಜಾರಿ ಮಾಡಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಷಡ್ಯಂತ್ರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಮೂಲಕ ದೇಶದ ಆರ್ಥಿಕ ಪ್ರಗತಿ ಕುಂಠಿತ, ಗ್ಯಾಂಗ್‍ರೇಪ್, ಹಣ ವಂಚಿತ ಕಾರ್ಪೊರೇಟ್‍ಗಳ ರಕ್ಷಣೆಗಾಗಿ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 6 ವರ್ಷದಿಂದ ಆಡಳಿತ ನಡೆಸುತ್ತಿದ್ದರೂ ಕನಿಷ್ಠ ಕೋಟಿ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಆದರೆ ಮತ್ತಷ್ಟು ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದರು ದೂರಿದರು.

ಸರ್ಕಾರಿ ಸಂಸ್ಥೆಗಳ ಆರ್ಥಿಕತೆ ಕುಸಿದಿದೆ. ದಿನನಿತ್ಯ ಬಳಕೆಯ ಆಹಾರ ಪದಾರ್ಥ, ಗೃಹಪಯೋಗಿ ವಸ್ತು ಬೆಲೆ ದುಬಾರಿಯಾಗಿದೆ. ಆದರೂ ಕೇಂದ್ರ ಸರ್ಕಾರ ಈ ವಿಚಾರವಾಗಿ ಗಮನ ಹರಿಸುತ್ತಿಲ್ಲ. ಸಂಸತ್ ಕಲಾಪದಲ್ಲಿ ಮತ್ತು ಹೊರಗೆ ನರೇಂದ್ರ ಮೋದಿ ಅವರ ಸರ್ಕಾರದ ಯೋಜನೆಗಳ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದರೂ, ಸೂಕ್ತ ಉತ್ತರ ಸಿಗುತ್ತಿಲ್ಲ. ಬದಲಿಗೆ ಜನರ ಭಾವನೆಗಳನ್ನು ಕೆರಳಿಸುವ ಯೋಜನೆ-ಕಾಯ್ದೆ ಜಾರಿ ಮಾಡುತ್ತಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *