ಸ್ವರ್ಗ ಕೊಟ್ರೂ ನನಗೆ ಬೇಡ: ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದ ಡಾ. ರವೀಂದ್ರನಾಥ ಶಾನುಭಾಗ್

Public TV
3 Min Read

ಉಡುಪಿ: ನಾನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಉಡುಪಿಯ ಸಮಾಜಸೇವಕ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

ಕಳೆದ ರಾತ್ರಿ ನನಗೆ ಅಧಿಕೃತವಾಗಿರಲಿಲ್ಲ. ಇಂದು ಅಧಿಕೃತವಾಗಿದೆ. ನನಗೆ ನನ್ನ ಸಮಾಜಸೇವೆ ತೃಪ್ತಿ ಆಗಿಲ್ಲ. ನೊಂದ ಜೀವಗಳ ಕಣ್ಣೀರು ಕಣ್ಣಮುಂದೆ ಸುರಿಯುತ್ತಿರುವಾಗ ನಾನು ಯಾವ ಪುರುಷಾರ್ಥಕ್ಕೆ ಪ್ರಶಸ್ತಿ ಸ್ವೀಕರಿಸಲಿ? ಎಂದು ಸರ್ಕಾರಕ್ಕೆ ಡಾ. ಶಾನುಭಾಗ್ ಪ್ರಶ್ನೆ ಮಾಡಿದ್ದಾರೆ.

ಕರಾವಳಿಯ ಮೂರು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ನೂರಾರು ಮಕ್ಕಳ ನೊಂದಣಿ ಕೂಡಾ ಆಗಿಲ್ಲ. ಉಡುಪಿ ಜಿಲ್ಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಡೇ ಕೇರ್ ಸೆಂಟರ್ ಕೂಡಾ ನಿರ್ಮಾಣವಾಗಿಲ್ಲ. ಎಂಡೋಸಲ್ಫಾನ್ ಪೀಡಿತರು ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವಾಗ ಹಾಗೂ ಹಿರಿಯ ನಾಗರೀಕರು ಪ್ರತಿನಿತ್ಯ ಕಣ್ಣೀರಿಡುತ್ತಿರುವಾಗ ನಾನು ಈ ಪ್ರಶಸ್ತಿ ಸ್ವೀಕರಿಸಿದರೆ ಅವರ ಮುಖದಲ್ಲಿ ನಗು ಕಾಣಲು ಹೇಗೆ ಸಾಧ್ಯ ಎಂದು ಉತ್ತರಿಸಲಾಗದ ಪ್ರಶ್ನೆ ಹಾಕಿದ್ದಾರೆ.

ಜನ ಹಗ್ಗ ತೆಗೆದುಕೊಳ್ಳುವಾಗ ನಾನು ಪ್ರಶಸ್ತಿ ತೆಗೆದುಕೊಳ್ಳಲೇ?: ನಾನು ಎಷ್ಟು ಸಮಾಜಸೇವೆ ಮಾಡಿದ್ದೇನೆ ಎಂಬುದು ಮುಖ್ಯವಲ್ಲ. ಹಿರಿಯ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ನನ್ನ ಬಳಿ ಬರುತ್ತಾ ಇದ್ದಾರೆ. ಕೈಹಿಡಿದು ಕಣ್ಣೀರಿಡುತ್ತಿದ್ದಾರೆ. ಯಾರಿಗಾಗಿ, ಏತಕ್ಕಾಗಿ ಈ ಪ್ರಶಸ್ತಿ ಸ್ವೀಕಾರ ಮಾಡಲಿ? ಅಸಂಖ್ಯ ಅರ್ಜಿಗಳು ಬರುತ್ತಿದೆ. ಈ ನಡುವೆ ಪ್ರಶಸ್ತಿ ನನಗೆ ಬೇಕಾ? ಸರ್ಕಾರ ಹಿರಿಯ ನಾಗರೀಕರ ಕಾನೂನನ್ನು ಪಾಲಿಸದೆ ಗಾಳಿಗೆ ತೂರಿದೆ. ಎಂಟು ಜನ ಹಿರಿಯ ನಾಗರೀಕರು ನ್ಯಾಯ ಸಿಗುವ ಮೊದಲೇ ಸತ್ತು ಹೋಗಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ನಾನು ಅವರ ಆತ್ಮಕ್ಕೆ ಅವಮಾನ ಮಾಡಬೇಕಾ ಎಂದು ಪ್ರಶ್ನೆ ಮಾಡಿದರು.

ಐಎಎಸ್ ಅಧಿಕಾರಿಗಳ ಉದ್ಧಟತನ: ರಾಜ್ಯದಲ್ಲಿ ಜಗದೀಶ್, ಡಾ. ವಿಶಾಲ್ ನಂತಹ ಉದ್ಧಟತನದ ಐಎಎಸ್ ಅಧಿಕಾರಿಗಳ ನಡುವೆ ನನಗೆ ಯಾವ ಪ್ರಶಸ್ತಿಯೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆ ಉಮಾಶ್ರೀ ನನ್ನ ಒಂದು ಪತ್ರಕ್ಕೂ ಉತ್ತರಿಸುವುದು ಬೇಡ. ನೊಂದ ಸಂತ್ರಸ್ಥರಿಗಾದರೂ ಉತ್ತರಿಸುವ ಕನಿಷ್ಟ ಸೌಜನ್ಯವನ್ನೂ ಇಟ್ಟುಕೊಂಡಿಲ್ಲವಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿನಿತ್ಯ ಹೆಣ್ಣುಮಕ್ಕಳ ಮಾನವಕಳ್ಳಸಾಗಣೆ ನಡೆಯುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರಗಳ ಸರಮಾಲೆ ಬರೆದು ವರ್ಷ ಕಳೆಯಿತು. ಉತ್ತರವೂ ಇಲ್ಲ, ಸಮಸ್ಯೆಯೂ ಪರಿಹಾರವಾಗಿಲ್ಲ. ಎಂಡೋಸಲ್ಫಾನ್ ವಿಚಾರದಲ್ಲಿ ಉಡುಪಿಯ ಡಿಸಿಯಾಗಿದ್ದ ಆರ್ ವಿಶಾಲ್ ನಿಮಗೆಲ್ಲ ಈ ಉಸಾಬರಿ ಯಾಕೆ ಎಂದು ಪ್ರಶ್ನೆ ಮಾಡಿದರು.

ಟೈಂ ವೇಸ್ಟ್ ಮಾಡಬೇಡಿ: ಯಾರೂ ನನ್ನ ಮನವೊಲಿಸಬೇಡಿ. ಸಂತ್ರಸ್ಥರ ಕಣ್ಣೀರು ಒರೆಸಲು ಸಾಧ್ಯವಾದ್ರೆ ಅದನ್ನು ಮಾಡಿ. ಮಾನವ ಕಳ್ಳಸಾಗಣೆ ನಿಲ್ಲಿಸಿ, ಎಂಡೋಸಲ್ಫಾನ್ ಸಂತ್ರಸ್ಥರ ಕಣ್ಣೀರು ಒರೆಸಿ, ಹಿರಿಯ ನಾಗರೀಕರನ್ನು ಸಾಯುವ ತನಕ ಬದುಕಲು ಬಿಡಿ. ಅಧಿಕಾರಿಗಳಿಗೆ, ಮಂತ್ರಿಗಳಿಗೆ ಕಾನೂನು ಪಾಲಿಸಲೂ ಗೊತ್ತಿಲ್ಲ. ಮಾನವೀಯತೆ ಅಂತೂ ಇಲ್ಲವೇ ಇಲ್ಲ. ನನ್ನದು ಉದ್ಧಟತನವೂ ಅಲ್ಲ, ಪ್ರಶಸ್ತಿಗೆ ಮಾಡುತ್ತಿರುವ ಅಗೌರವವೂ ಅಲ್ಲ. ಸಂತ್ರಸ್ಥರ ಕಣ್ಣೀರೊರೆಸುವ ಕೆಲಸದಲ್ಲೇ ನಾನು ಪ್ರಶಸ್ತಿಯ ಖುಷಿಯನ್ನು ಪಡೆಯುತ್ತೇನೆ ಎಂದು ಡಾ. ರವೀಂದ್ರನಾಥ ಶಾನುಭಾಗ್ ಸ್ಪಷ್ಟಪಡಿಸಿದರು.

ಸ್ವರ್ಗ ಕೊಟ್ಟರೂ ಬೇಡ: ಪ್ರಶಸ್ತಿ ಜೊತೆ ಒಂದು ಲಕ್ಷ, ಒಂದು ಕೋಟಿ, ಬಂಗಾರದ ಪದಕ ಬೇಡ. ನನಗೆ ಸ್ವರ್ಗ ಕೊಟ್ಟರೂ ಬೇಡ. ನನಗೆ ಒಂದು ನ್ಯಾಯ ಕೊಡಿ. ನನ್ನ ಸಮಾಜ ಸೇವೆ ಪೂರ್ತಿಯಾಗಿಲ್ಲ. ಪೂರ್ತಿಯಾಗಲು ಜನಪ್ರತಿನಿಧಿಗಳು ಬಿಡುವುದಿಲ್ಲ. ಓಟು ಬೇಡಿದವರ ಬಳಿ ಜನ ನ್ಯಾಯ ಬೇಡುತ್ತಿದ್ದಾರೆ. ಇಂತಹ ಪರಿಸ್ಥಿತಿ ದೇಶದಲ್ಲಿ, ರಾಜ್ಯದಲ್ಲಿ ಇದೆ ಅನ್ನೋದು ನಾಚಿಕೆಗೇಡಿನ ವಿಚಾರ ಎಂದು ಖೇದ ವ್ಯಕ್ತಪಡಿಸಿದ್ರು.

ಪ್ರಚಾರದ ಅಗತ್ಯವಿಲ್ಲ: ನನಗೆ ಪ್ರಶಸ್ತಿ ತಿರಸ್ಕಾರ ಮಾಡುವ ಮೂಲಕ ಭಾರೀ ಪ್ರಚಾರ ಸಿಗುತ್ತದೆ ಎಂಬ ಉದ್ದೇಶವಂತೂ ಇಲ್ಲವೇ ಇಲ್ಲ. ಹೆಸರು ಮಾಡಬೇಕೆಂದು ಹೀಗೆ ಮಾಡುತ್ತಿಲ್ಲ. ಈ ಮೂಲಕವಾದರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜ್ಞಾನೋದಯ ಆದ್ರೆ ಆಗಲಿ. ಜಾಗೃತಿ ಮೂಡಿದ್ರೆ ಮೂಡಲಿ. ಸಾಗರದಲ್ಲಿ ಒಂದೂವರೆ ಸಾವಿರ ಎಕ್ರೆ ಕಾಡನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ನಾಶ ಮಾಡುತ್ತಿದ್ದಾರೆ. ಇಂತದ್ದೆಲ್ಲ ಘಟನೆ ಕಣ್ಣಮುಂದೆ ನಡೆಯುತ್ತಿರುವಾಗ ನಾನು ಪ್ರಶಸ್ತಿ ಸ್ವೀಕರಿಸುವುದರಲ್ಲಿ ಏನು ಅರ್ಥವಿದೆ ಎಂದು ತನ್ನ ನಿಲುವನ್ನು ವ್ಯಕ್ತಪಡಿಸಿದರು.

https://www.youtube.com/watch?v=mUP-1N8wHHE

Share This Article
Leave a Comment

Leave a Reply

Your email address will not be published. Required fields are marked *