ವಿದೇಶಗಳಲ್ಲಿ ಆಸ್ತಿ ಮಾಡಿದ್ರೆ ಸರ್ಕಾರಕ್ಕೆ ಬರೆದುಕೊಡುವೆ – ಇಡಿ ದಾಳಿಗೊಳಗಾಗಿದ್ದ ಶಾಸಕ ಸುಬ್ಬಾರೆಡ್ಡಿ ಸವಾಲ್‌

Public TV
2 Min Read

– ಜೀವನದಲ್ಲಿ ಒಮ್ಮೆಯೂ ಜರ್ಮನಿಗೆ ಹೋಗಿಲ್ಲ ಎಂದ ʻಕೈʼ ಶಾಸಕ

ಚಿಕ್ಕಬಳ್ಳಾಪುರ: ಮಲೇಷ್ಯಾ ಹಾಂಕಾಂಗ್ ಜರ್ಮನಿಯಲ್ಲಿ ಅಕ್ರಮವಾಗಿ ಆಸ್ತಿ (Property) ಮಾಡಿರುವ ಆರೋಪದ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್‌.ಎನ್ ಸುಬ್ಬಾರೆಡ್ಡಿ (SN Subba Reddy) ನಿವಾಸಗಳ ಮೇಲೆ ಇಡಿ ದಾಳಿ ಮಾಡಿತ್ತು. ಇಡಿ ದಾಳಿಗೆ ಸಂಬಂಧಿಸಿದಂತೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಕಲಿ ದಾಖಲೆಗಳನ್ನ ಸೃಷ್ಟಿಸಿ ರಾಜಕೀಯ ವಿರೋಧಿಗಳು ನನ್ನ ಮೇಲೆ ಕುತಂತ್ರ ಮಾಡಿದ್ದಾರೆ ಅಂತ ಸುಬ್ಬಾರೆಡ್ಡಿ ಸ್ಪಷ್ಟನೆ ನೀಡಿ ದಾಖಲೆಗಳನ್ನ ಬಿಡುಗಡೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ರು. ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ʻಪಬ್ಲಿಕ್ ಟಿವಿʼ (Public TV) ಜೊತೆ ಮಾತನಾಡಿದ ಸುಬ್ಬಾರೆಡ್ಡಿ, ನಾನು ವಿದೇಶಗಳಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ಯಾರದೋ ದೇಹಕ್ಕೆ ನನ್ನ ಮುಖದ ಫೋಟೋ ಅಂಟಿಸಿ ವಿದೇಶಗಳಲ್ಲಿ ಆಸ್ತಿ ಮಾಡಿರುವ ಹಾಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಇದೇ ದಾಖಲೆಗಳ ಆಧಾರದ ಮೇರೆಗೆ ಇಡಿಯವರು ನಮ್ಮ ಮನೆಗಳ ಮೇಲೆ ದಾಳಿ (ED Raid) ಮಾಡಿದ್ದಾರೆ. ನಾನು ನಯಾಪೈಸೆ ವಿದೇಶಗಳಲ್ಲಿ ಹೂಡಿಕೆ ಮಾಡಿದ್ರೆ ನನ್ನ ಆಸ್ತಿ ಎಲ್ಲಾ ಸರ್ಕಾರಕ್ಕೆ ಬರೆದುಕೊಡ್ತೇನೆ ಅಂತ ಸವಾಲು ಹಾಕಿದ್ದಾರೆ.

ಜೀವನದಲ್ಲೇ ಜರ್ಮನಿಗೆ ಹೋಗಿಲ್ಲ
ಇನ್ನೂ ನಾನು 15 ವರ್ಷಗಳಿಂದ ಜರ್ಮನಿ ಮಲೇಷ್ಯಾ ಹಾಂಕಾಂಗ್‌ಗೆ ಹೋಗೇ ಇಲ್ಲ. ಜೀವನದಲ್ಲಿ ಒಮ್ಮೆಯೂ ಸಹ ಜರ್ಮನಿಗೆ ಹೋಗಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನನ್ನ ಎದುರು ಪರಾಜಿತನಾದ ಅಭ್ಯರ್ಥಿ ನನಗೆ ತೊಂದರೆ ಕೊಡುವ ಉದ್ದೇಶದಿಂದ ಕುತಂತ್ರ ಮಾಡಿರುವ ಅನುಮಾನ ಇದೆ ಎಂದರು. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

ಫೋಟೋ ಎಡಿಟ್‌ ಮಾಡಿ ನಕಲಿ ದಾಖಲೆ ಸೃಷ್ಟಿ
ಶಾಸಕ ಸುಬ್ಬಾರೆಡ್ಡಿ ಹೇಳಿರುವ ಹಾಗೆ ರಾಮಸ್ವಾಮಿ ವೀರನ್ ಎಂಬುವವರ ಹೆಸರಿನಲ್ಲಿ ಇರುವ ಆಸ್ತಿಯನ್ನ ಶಾಸಕ ಸುಬ್ಬಾರೆಡ್ಡಿ ಖರೀದಿ ಮಾಡಿರುವ ಹಾಗೆ ಯಾರದೋ ಫೋಟೋಗೆ ತಮ್ಮ ಮುಖದ ಫೋಟೋ ಎಡಿಟ್ ಮಾಡುವ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರಂತೆ. ಇದೇ ದಾಖಲೆಗಳನ್ನು ಆಧರಿಸಿ ಇಡಿ ರೇಡ್ ಮಾಡಿದ್ದಾರೆ. ಈ ನಕಲಿ ದಾಖಲೆಗಳು ಮೊದಲೇ ನನಗೆ ಸಿಕ್ಕಿದ್ದು ಈ ಬಗ್ಗೆ ನಾನು ಸೈಬರ್ ಠಾಣೆಯಲ್ಲಿ ದೂರು ಸಹ ನೀಡಲು ಮುಂದಾಗಿದ್ದೆ ಆದ್ರೆ ದೂರು ಪಡೆದಿರಲಿಲ್ಲ. ಈಗ ನಾನು ಮತ್ತೆ ಈ ಬಗ್ಗೆ ದೂರು ನೀಡಲಿದ್ದೇನೆ ನ್ಯಾಯಾಲಯದಲ್ಲೂ ಸಹ ದಾವೆ ಹೂಡಲಿದ್ದೇನೆ ಎಂದು ತಿಳಿಸಿದ್ರು. ಇದನ್ನೂ ಓದಿ: ಬೆಂಗಳೂರಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ ಕೇಸ್ – ಲಾಯರ್ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ ಮತ್ತೋರ್ವ ಅರೆಸ್ಟ್

ಇನ್ನೂ ಇಡಿಯವರು ಸಂಪೂರ್ಣ ವಿಚಾರಣೆ ನಂತರ ಸೋಮವಾರ ಜುಲೈ 14ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದು ನಾನು ವಿಚಾರಣೆಗೆ ಹಾಜರಾಗುವೆ. ಆದ್ರೆ ರಾಜಕೀಯ ವಿರೋಧಿಗಳು ನನ್ನ ಮೇಲೆ ನಡೆಸಿದ ಷಡ್ಯಂತ್ರದಿಂದ ನಾನು ಹೆದರಲ್ಲ. ಇಡಿಯವರು ಏನ್ ಬೇಕಾದರೂ ತನಿಖೆ ಮಾಡಲಿ ನಾನು ಸಹಕಾರ ನೀಡುವೆ ಅಂತಲೂ ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ – ಜಮೀನಿನಲ್ಲಿ ಕುಸಿದು ಬಿದ್ದು ರೈತ ಸಾವು

Share This Article