ನೀರು ಬರುತ್ತಿದ್ದಂತೆ ಅಪ್ಪ, ಅಮ್ಮ ರೋಡಿಗೆ ಓಡಿದ್ರು- ಚಿತ್ರ ಬಿಡಿಸಿ ಸಚಿವೆಗೆ ವಿವರಿಸಿದ ಬಾಲಕ

Public TV
2 Min Read

ಮಡಿಕೇರಿ: ಇಲ್ಲಿನ ಮೈತ್ರಿ ಕೇಂದ್ರದಲ್ಲಿ ಗುಡ್ಡ ಕುಸಿತ ಹಾಗೂ ಪ್ರವಾಹದ ಪರಿಸ್ಥಿತಿಯನ್ನು ಶಾಲಾ ಬಾಲಕನೋರ್ವ ಚಿತ್ರ ಬಿಡಿಸಿದ್ದು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಿಸಿದ ರೀತಿ ಮನಕಲಕುವಂತಿತ್ತು.

ಬಾಲಕ ನವನೀಶ್ ತಾನು ಬಿಡಿಸಿದ ಪ್ರವಾಹ ಚಿತ್ರವನ್ನು ಸಚಿವೆ ಹಾಗೂ ಪಬ್ಲಿಕ್ ಟಿವಿಗೂ ವಿವರಿಸಿದ್ದಾನೆ. ಸದ್ಯ ಬಾಲಕ ವಿವರಣೆ ಅಲ್ಲಿದ್ದವರನ್ನು ಕಣ್ಣೀರು ತರುಸುವಂತಿದ್ದು, ಮನಕಲಕುವಂತಿದೆ.

ಬಾಲಕ ಹೇಳಿದ್ದು ಹೀಗೆ:
ಬೆಟ್ಟದಿಂದ ನೀರು ಕೆಳಗೆ ಬರುತ್ತಿದೆ. ಇದು ನಮ್ಮ ಮನೆ. ನೀರು ರಭಸವಾಗಿ ಬಂದು ನಮ್ಮ ಮನೆಯನ್ನು ಕೊಚ್ಚಿಕೊಂಡು ಹೋಗಿದೆ. ಈಗ ಅಲ್ಲಿ ಯಾರೂ ಕೂಡ ಇಲ್ಲ. ನಮ್ಮ ಮನೆ ಮತ್ತು ಬೇರೆ ಮನೆ ಮಾತ್ರ ಅಲ್ಲಿ ಇರೋದು. ಅಂದು ನಮ್ಮ ಅಜ್ಜಿಯನ್ನು ನೀರು ಕೊಚ್ಚಿಕೊಂಡು ಹೋಯಿತು. ಅದನ್ನು ಪೇಪರಿಗೆ ಹಾಕಿಬಿಟ್ಟಿದ್ದಾರೆ. ಘಟನೆಯ ಬಳಿಕ ನಾವು ಅಲ್ಲಿಂದ ಪರಿಹಾರ ಕೇಂದ್ರಕ್ಕೆ ಓಡಿಕೊಂಡು ಬಂದ್ವಿ. ಅಪ್ಪ-ಅಮ್ಮ ರೋಡಿಗೆ ಹೋಗಿದ್ರು. ನೀರು ಮೇಲೆ ಹೋಗ್ಬಿಟ್ಟು ಕೆಳಗಡೆ ಬಂತು. ನೀರು ಬಂದಾಗ ಅಪ್ಪ- ಅಮ್ಮ ಓಡಿ ಬಂದ್ರು. ಆಗ ಅಮ್ಮ ಎಲ್ಲಾ ಪ್ಯಾಕ್ ಮಾಡು, ಬಿಟ್ಟು ಓಡಿ ಹೋಗುವ ಅಂತ ಹೇಳಿದ್ರು. ಆಗ ನಾವು ಕುಶಾಲನಗರದಲ್ಲಿರುವ ನೆಂಟರ ಮನೆಗೆ ಹೋಗ್ಬಿಟ್ವಿ. ಅಲ್ಲಿ ಟಿವಿಯಲ್ಲಿ ನೋಡಿ ಭಯ ಆಯ್ತು. ನಂತರ ನಾವು ಪರಿಹಾರ ಕೇಂದ್ರಕ್ಕೆ ಬಂದೆವು ಅಂತ ಬಾಲಕ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಕಣ್ಣಾರೆ ಕಂಡ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ.

ನಮ್ಮ ಮನೆಯ ಮೇಲೆ ಒಂದು ಮನೆ ಇತ್ತು. ಆ ಮನೆ ಒಡೆದು ಹೋಗಿದೆ. ಅದನ್ನು ನಾನು ನನ್ನ ಅಪ್ಪನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದೇನೆ. ಆವಾಗ ಅಲ್ಲೇ ಇದ್ದ ಅಜ್ಜಿ ನನ್ನನ್ನು ಬಾ ಬಾ ಅಂತ ಕರೆದ್ರು. ನಾನು ಬರುವಷ್ಟರಲ್ಲಿ ನೀರು ಅಲ್ಲಿದ್ದ ಅಜ್ಜಿಯನ್ನು ಕೊಚ್ಚಿಕೊಂಡು ಹೋಯಿತು. ಮೊನ್ನೆ ಅವರು ಮನೆಯವರಿಗೆ ಸಿಕ್ಕಿದ್ರು ಅಂತ ಬಾಲಕ ನೈಜತೆಯನ್ನು ತಿಳಿಸಿದ್ದು, ಬಾಲಕನ ವಿವರಣೆ ಕರುಳುಕಿತ್ತು ಬರುವಂತಿತ್ತು.

ಹೆಬ್ಬಟ್ಟಗೇರಿ ಗ್ರಾಮದ ಜನಾರ್ದನ ಹಾಗೂ ಶಾರದಾ ದಂಪತಿ ಪುತ್ರ 7 ವರ್ಷದ ನವಿನಾಶ್ ಸ್ಥಳೀಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದು, ಮುಂದೆ ಎಂಜಿನಿಯರ್ ಆಗೋ ಕನಸು ಹೊಂದಿದ್ದಾನೆ. ಕೊಡಗಿನ ಪ್ರವಾಹ ಪೀಡಿ ಪ್ರದೇಶಗಳಿಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನಿಡಿದ್ದರು. ಈ ವೇಳೆ ಮೈತ್ರಿಯಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಪುಟ್ಟ ಬಾಲಕ ಪ್ರವಾಹ ಬಂದ ದಿನದಂದು ಕಣ್ಣಾರೆ ಕಂಡ ಘಟನೆಯನ್ನು ಚಿತ್ರೀಕರಿಸಿದ್ದಾನೆ. ಅಲ್ಲದೇ ಸಚಿವೆಗೆ ವಿವರಿಸಿದ್ದು, ಅಲ್ಲಿದ್ದವರಲ್ಲಿ ಕಣ್ಣೀರು ತರಿಸಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *