ಗಾಂಧಿನಗರ: ಅಪ್ರಾಪ್ತ ಪ್ರೇಮಿಗಳಿಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡು ನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್ ರಾಜ್ಯದ ತಾಪಿ ಜಿಲ್ಲೆಯ ಡೋಲಾವಾನ್ ಗ್ರಾಮದಲ್ಲಿ ನಡೆದಿದೆ.
ಕೌಶಲ್ ಕುಮಾರ್ ಚೌಧರಿ ಮತ್ತು ಗೀತಾ ಬೆನ್ ಸಾವನ್ನಪ್ಪಿದ ಅಪ್ರಾಪ್ತ ಜೋಡಿ. ಗೀತಾ ಅದೇ ಗ್ರಾಮದಲ್ಲಿ 10ನೇ ತರಗತಿಯಲ್ಲಿ ಅಭ್ಯಾಸ ಮಾಡ್ತಿದ್ದು, ಕೌಶಲ್ 11ನೇ ತರಗತಿಯಲ್ಲಿ ಓದುತ್ತಿದ್ದನು. ಇಬ್ಬರೂ ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಬೇರೆ ಬೇರೆ ಬಡವಾಣೆಯಲ್ಲಿ ವಾಸಿಸುತ್ತಿದ್ದರು. ಒಂದೇ ಗ್ರಾಮದವರು ಆಗಿದ್ದರಿಂದ ಇಬ್ಬರ ನಡುವೆ ಪ್ರೇಮಾಂಕುರ ಆಗಿತ್ತು.
ಮೇ 20ರಂದು ಗೀತಾ ಡಾರ್ಕ್ವಾಡಿಯಲ್ಲಿರುವ ತನ್ನ ಮಾವನ ಮನೆಗೆ ಹೋಗುತ್ತೆನೆಂದು ತಿಳಿಸಿ ಗೆಳತಿಯರೊಂದಿಗೆ ತೆರಳಿದ್ದಳು. ಆದ್ರೆ ಅಂದು ಸಂಜೆ ಗೀತಾ ತನ್ನ ಗೆಳೆಯ ಕೌಶಲ್ ಜೊತೆ ಬೈಕಿನಲ್ಲಿ ತೆರಳಿದ್ದಾಳೆ. ಹೊರ ಹೋದ ಗೀತಾ ರಾತ್ರಿಯಾದ್ರೂ ಮನೆಗೆ ಹಿಂದಿರುಗದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಕೊನಗೆ ಗೀತಾ ನಾಪತ್ತೆಯಾಗಿದ್ದಾಳೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.
ಇತ್ತ ಕೌಶಲ್ ಸಹ ಕಾಣೆಯಾಗಿದ್ದರಿಂದ ಆತನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ದೂರು ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದಾಗ ಮೇ 23ರಂದು ಇಬ್ಬರ ಶವವೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೌಶಲ್ ಮತ್ತು ಗೀತಾ ಇಬ್ಬರೂ ಮೇ 20ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರು ದಿನಗಳವರಗೆ ಇಬ್ಬರ ಶವವೂ ಮರದಲ್ಲಿ ನೇತಾಡುತ್ತಿತ್ತು. ಆತ್ಮಹತ್ಯೆಗೂ ಮುನ್ನ ಇಬ್ಬರೂ ಸೆಲ್ಫಿ ಕ್ಲಿಕ್ಕಿಸಿಕೊಂಡು ತಮ್ಮ ಎಲ್ಲ ಸ್ನೇಹಿತರಿಗೂ ಕಳುಹಿಸಿದ್ದಾರೆ.
ಇಬ್ಬರ ಮೃತದೇಹಗಳನ್ನು ಮರದಿಂದ ಇಳಿಸಿ, ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಗಳ ವಶಕ್ಕೆ ಪೊಲೀಸರು ನೀಡಿದ್ದಾರೆ. ಆದ್ರೆ ಇಬ್ಬರ ಸಾವಿಗೂ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.