13 ಸಾವಿರ ಅಡಿ ಎತ್ತರದಲ್ಲಿ ಮಂಗ್ಳೂರು ಯುವಕನಿಂದ ದುಬೈನಲ್ಲಿ ಸ್ಕೈ ಡೈವಿಂಗ್

Public TV
1 Min Read

– ಸ್ಕೈಡೈವ್‍ನಿಂದ ನೆಲಕ್ಕಿಳಿದ ಕೂಡಲೇ ಅಣ್ಣಾಮಲೈಗೆ ಸೆಲ್ಯೂಟ್

ಮಂಗಳೂರು: ವಿಮಾನದಲ್ಲಿ ಪ್ರಯಾಣಿಸುತ್ತಾ ಹೊರಗೆ ಇಣುಕಿ ನೋಡುವುದಕ್ಕೇ ಭಯವಾಗುತ್ತದೆ. ಅಂತಹದ್ದರಲ್ಲಿ ಮಂಗಳೂರಿನ ಯುವಕರೊಬ್ಬರು ದೂರದ ದುಬೈನಲ್ಲಿ ವಿಮಾನದಿಂದಲೇ ಹೊರಕ್ಕೆ ಹಾರಿ ಸಾಹಸ ಪ್ರದರ್ಶಿಸಿದ್ದಾರೆ. ವಿಮಾನದಿಂದ ಹೊರಗೆ 13 ಸಾವಿರ ಅಡಿ ಎತ್ತರದಲ್ಲಿ ಸ್ಕೈ ಡೈವಿಂಗ್ ಮಾಡುತ್ತಾ ದುಬೈನ ಪಾಮ್ ಜುಮೈರಾ ನಗರದ ಸೌಂದರ್ಯ ಸವಿದಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೋಡಪದವು ನಿವಾಸಿಯಾಗಿರಿವ ಸಫ್ವಾನ್ ಶಾ ಈ ಸಾಹಸ ಮಾಡಿದ ಯುವಕ. ಬಹರೈನಲ್ಲಿ ಉದ್ಯೋಗದಲ್ಲಿರುವ ಸಫ್ವಾನ್ ಶಾ ಅವರಿಗೆ ಸಾಹಸ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದು ಹವ್ಯಾಸ. ದುಬೈನ ಖ್ಯಾತ ನಗರಿ ಪಾಮ್ ಜುಮೈರಾದಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ಇದೀಗ ಸ್ಕೈ ಡೈವಿಂಗ್ ಮಾಡಿದ್ದು ಎಲ್ಲರ ಹುಬ್ಬೆರಿಸಿದ್ದಾರೆ.

ವೃತ್ತಿಪರ ಸ್ಕೈ ಡೈವರ್ ಜೊತೆಗೆ ಹಾರುವ ಈ ಪ್ರದರ್ಶನಕ್ಕೆ 50 ಸಾವಿರ ರೂ. ವೆಚ್ಚ ತಗಲುವುದು. ವಿಮಾನದಿಂದ ಹೊರಗೆ ಹಾರಿದ ಬಳಿಕ 30 ನಿಮಿಷ ಕಾಲ ಪ್ಯಾರಾಚೂಟ್ ಆಧಾರದಲ್ಲಿ ಆಕಾಶದಲ್ಲಿ ವಿಹರಿಸಿ, ಆ ನಂತರ ನಿಧಾನಕ್ಕೆ ನೆಲಕ್ಕೆ ಇಳಿಯುತ್ತಾರೆ. ಸಫ್ವಾನ್, ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅಭಿಮಾನಿಯಾಗಿದ್ದು, ಸ್ಕೈ ಡೈವ್ ನಿಂದ ನೆಲಕ್ಕಿಳಿದ ಕೂಡಲೇ ಅಣ್ಣಾಮಲೈಗೆ ಸೆಲ್ಯೂಟ್ ಹೊಡೆದಿದ್ದಾರೆ.

ಯುವಕನ ಸಾಹಸದ ವಿಡಿಯೋ ನೋಡಿದ ಜನ ಅವರ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *