ಬೆಂಗಳೂರು: ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಕೊತ್ತನೂರು (Kottanuru) ಬಳಿಯ ಬೈರತಿ ಬಂಡೆ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್‌ವೊಂದರಲ್ಲಿ ನಡೆದಿದೆ.
ದೊಡ್ಡಗುಬ್ಬಿಯ ಶ್ರೀಧರ್ ಎಂಬುವವರಿಗೆ ಸೇರಿದ್ದ ಅಪಾರ್ಟ್ಮೆಂಟ್ ಇದಾಗಿದೆ. ಶುಕ್ರವಾರ (ಅ.3) ಸಂಜೆ ಕಟ್ಟಡ ಕಾರ್ಮಿಕರು ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಕ್ಲೀನ್ ಮಾಡುತ್ತಿದ್ದಾಗ ಅಸ್ಥಿಪಂಜರ ಪತ್ತೆಯಾಗಿದೆ. ಸುಮಾರು 6-8 ತಿಂಗಳ ಹಿಂದೆ ಮೃತಪಟ್ಟಿರಬಹುದು ಎನ್ನಲಾಗಿದ್ದು, ಪ್ಯಾಂಟ್ ಹಾಗೂ ಶರ್ಟ್ ಧರಿಸಿ ಮಲಗಿದ್ದ ಸ್ಥಿತಿಯಲ್ಲಿದೆ. ಹೀಗಾಗಿ ಮೇಲ್ನೋಟಕ್ಕೆ 35 ರಿಂದ 40 ವರ್ಷದ ಗಂಡಸಿನ ಅಸ್ಥಿಪಂಜರವಿರಬಹುದು ಎಂದು ಅಂದಾಜಿಸಲಾಗಿದೆ.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲೇ ರೌಡಿಶೀಟರ್ ಭರ್ಜರಿ ಬರ್ತ್ಡೇ ಪಾರ್ಟಿ
ಈ ಕುರಿತು ಅಪಾರ್ಟ್ಮೆಂಟ್‌ನ ಸೆಕ್ಯುರಿಟಿ ಗಾರ್ಡ್ ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಸ್ಥಿಪಂಜರವನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ.
ಕೆಲವು ತಿಂಗಳುಗಳಿಂದ ಅಪಾರ್ಟ್ಮೆಂಟ್‌ನಲ್ಲಿ ನಿರ್ಮಾಣ ಹಂತದ ಕೆಲಸ ನಿಂತು ಹೋಗಿತ್ತು. ಕಳೆದ ಎರಡು ತಿಂಗಳಿಂದ ಮತ್ತೆ ಕೆಲಸ ಆರಂಭವಾಗಿದೆ. ಈ ವೇಳೆ ಕ್ಲೀನ್ ಮಾಡುವಾಗ ಅಸ್ಥಿಪಂಜರ ಪತ್ತೆಯಾಗಿದೆ. ಇನ್ನೂ ಬಾಡಿ ಮೇಲೆ ಚೀಲ ಹಾಗೂ ಮಣ್ಣನ್ನ ಹಾಕಿ ಮುಚ್ಚಲಾಗಿತ್ತು. ಮಣ್ಣು ಹಾಗೂ ಚೀಲ ತೆಗೆದು ನೋಡಿದಾಗ ಅಸ್ಥಿಪಂಜರ ಇರುವುದು ಗೊತ್ತಾಗಿದೆ.
ಇನ್ನೂ ಸ್ಥಳಕ್ಕೆ ಸೋಕೋ ಮತ್ತು ಎಫ್‌ಎಸ್‌ಎಲ್ (FSL) ತಜ್ಞರು ಭೇಟಿ ನೀಡಿ, ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೊತ್ತನೂರು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ (UDR) ದಾಖಲಾಗಿದೆ. ಮೃತ ವ್ಯಕ್ತಿಯ ಗುರುತು, ವಿಳಾಸ ಹಾಗೂ ಇತರ ಮಾಹಿತಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ: ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ; ಭಾರತದ ಉದ್ಯಮಿ, ಪತ್ನಿ ಸ್ಥಳದಲ್ಲೇ ಸಾವು