ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ ಸ್ಕಂದಗಿರಿ – ಇಲ್ಲಿದೆ ಸಂಪೂರ್ಣ ಮಾಹಿತಿ

Public TV
2 Min Read

ಸ್ಕಂದಗಿರಿ (Skandagiri) ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಪ್ರಕೃತಿ ಮಡಿಲಿನಲ್ಲಿರುವ ಒಂದು ಐತಿಹಾಸಿಕ ಸ್ಥಳ, ಈ ಬೆಟ್ಟ ಸಮುದ್ರ ಮಟ್ಟದಿಂದ 4429 ಮೀಟರ್ ಎತ್ತರದಲ್ಲಿದೆ. ಇಲ್ಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಲು ನಿರ್ಮಿಸಿದ ಕೋಟೆ ಸಹ ಇದ್ದು, ಪ್ರಕೃತಿ ಪ್ರಿಯರು ಹಾಗೂ ಸ್ಮಾರಕಗಳ ಬಗ್ಗೆ ವಿಶೇಷ ಆಸಕ್ತಿ ಇರುವವರಿಗೆ ಈ ಜಾಗ ಖಂಡಿಯವಾಗಿಯೂ ಇಷ್ಟವಾಗುತ್ತದೆ.

ಈ ಬೆಟ್ಟಕ್ಕೆ ಕಲವರ ದುರ್ಗಾ ಎಂದೂ ಸಹ ಕರೆಯಲಾಗುತ್ತದೆ. ಸುಮಾರು ಎಂಟು ಕಿಮೀ ನಡೆದು ಸಾಗಬೇಕಾದ ದಾರಿಯಲ್ಲಿ ಚಾರಣಿಗನಿಗೆ ಆಯಾಸದ ಅರಿವೇ ಆಗದಂತೆ ಈ ಪರ್ವತ ಕೋಟೆಯ ಮೇಲೆ ಕರೆದೊಯ್ಯುತ್ತದೆ. ಈ ದಾರಿಯನ್ನು ಕ್ರಮಿಸಲು ನಾಲ್ಕು ಗಂಟೆಗಳ ಕಾಲ ಸಾಕಾಗುತ್ತದೆ. ಅಲ್ಲಿನ ಪ್ರಕೃತಿಯನ್ನು ಸವಿಯಲು ನಿಮಗೆ ಎಷ್ಟು ಸಮಯ ಇದ್ದರೂ ಸಾಲುವುದಿಲ್ಲ. ಬೆಟ್ಟದ ತುತ್ತತುದಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಲ್ಲಿನ ದೇವಸ್ಥಾನ ಸಹ ಇದೆ.

ಮುಂಜಾನೆ 4 ಅಥವಾ 5 ಗಂಟೆ ವೇಳೆಗೆ ಈ ಬೆಟ್ಟ ಏರಲು ಸೂಕ್ತ ಸಮಯ. ಈ ಸಮಯದಲ್ಲಿ ಏರಿದರೆ ಬಿಸಿಲು ಹೆಚ್ಚಾಗುವ ಮುನ್ನವೇ ವಾಪಸ್ ಆಗಲು ಸಾಧ್ಯವಾಗುತ್ತದೆ. ಈ ವೇಳೆ ಮಂಜು ಸಹ ಬೀಳುವುದರಿಂದ ತಂಪಾದ ವಾತವರಣ ಇರುತ್ತದೆ. ಮತ್ತೆ ತಡವಾದರೆ ಬಿಸಿಲಿನ ತಾಪಕ್ಕೆ ಸಿಕ್ಕು ಸಮಸ್ಯೆ ಎದುರಿಸಬೇಕಾಗಬಹುದು. ಅದಕ್ಕಾಗಿ ಮುಂಜಾನೆ ಬೇಗ ಬೆಟ್ಟ ಏರುವುದು ಉತ್ತಮ.

ಸ್ಕಂದಗಿರಿಯ ತಪ್ಪಲಿನಲ್ಲಿ ಪಾಪಾಗ್ನಿ ಮಠ ಸಹ ಇದ್ದು, ಇಲ್ಲಿ ಚಾರಣಿಗರು ಆಯಾಸ ನಿವಾರಿಸಿಕೊಳ್ಳಬಹುದು. ಇದನ್ನು ಹೊರತು ಪಡಿಸಿದರೆ ಇಲ್ಲಿ ಯಾವುದೇ ಅಂಗಡಿ ಇನ್ನಿತರೆ ಸೌಲಭ್ಯಗಳಿಲ್ಲ. ಅದಕ್ಕಾಗಿ ಪ್ರವಾಸಿಗರು ಸೂಕ್ತ ನೀರಿನ ವ್ಯವಸ್ಥೆ, ಆಹಾರದ ಪೊಟ್ಟಣಗಳನ್ನು ತರುವುದು ಒಳ್ಳೆಯದು.

ಸ್ಕಂದಗಿರಿ ಬೆಟ್ಟಕ್ಕೆ ಹೋಗುವುದು ಹೇಗೆ?
ಬೆಂಗಳೂರಿನಿಂದ (Bengaluru) ಚಿಕ್ಕಬಳ್ಳಾಪುರಕ್ಕೆ ಹೋಗುವ ಮಾರ್ಗದಲ್ಲಿ ನಂದಿ ಕ್ರಾಸ್‍ನಿಂದ ಎಡಕ್ಕೆ ತಿರುಗಿದರೆ ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಇತಿಹಾಸ ಪ್ರಸಿದ್ಧ ಭೋಗನಂದಿಶ್ವರ ದೇವಾಲಯದ ಸಿಗುತ್ತದೆ. ಅಲ್ಲಿಂದ ಪುನಃ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಸಾಗಿದರೆ ಕಳವಾರ ಎಂಬ ಗ್ರಾಮ ಸಿಗುತ್ತದೆ ಇಲ್ಲಿಂದ ಸ್ವಲ್ಪ ದೂರದಲ್ಲೇ ಸ್ಕಂದಗಿರಿ ಬೆಟ್ಟ ನಿಮಗೆ ಸಿಗುತ್ತದೆ. ಒಟ್ಟಾರೆ ಬೆಂಗಳೂರಿನಿಂದ ಸುಮಾರು 70 ಕಿಮೀ ದೂರದಲ್ಲಿ ಈ ಸ್ಥಳ ಇದೆ.

ಇಲ್ಲಿಗೆ ಚಾರಣಕ್ಕೆ ಬರಬೇಕಾದರೆ ಮುಂಚಿತವಾಗಿಯೇ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಬುಕ್ಕಿಂಗ್ ಮಾಡಿಸಿಕೊಂಡಿರಬೇಕು. ಪ್ರತಿಯೊಬ್ಬರಿಗೂ 300 ರೂ. ನಿಗದಿಪಡಿಸಲಾಗಿದೆ.

Share This Article