ಚೆನ್ನೈ: ತಮಿಳುನಾಡಿನ (Tamil Nadu) ಶಿವಗಂಗಾ ಜಿಲ್ಲೆಯಲ್ಲಿ ನಡೆದ ದೇವಾಲಯದ ಸೆಕ್ಯುರಿಟಿ ಗಾರ್ಡ್ ಅಜಿತ್ ಲಾಕಪ್ ಡೆತ್ ಪ್ರಕರಣ (Custodial Death) ತಮಿಳುನಾಡಿನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಪ್ರಕರಣ ಸಂಬಂಧ ತಡರಾತ್ರಿ ಐವರು ಪೊಲೀಸರನ್ನು ಬಂಧಿಸಲಾಗಿದ್ದು, 6 ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮದ್ರಾಸ್ ಹೈಕೋರ್ಟ್‍ನ ಮಧುರೈ ಪೀಠ ಸೂಚಿಸಿತ್ತು. ಇನ್ನೂ ಕೊಲೆಗಾರರು ಹೀಗೆ ಹಲ್ಲೆ ಮಾಡಲ್ಲ ಎಂದು ಕೋರ್ಟ್ ಛೀಮಾರಿ ಹಾಕಿತ್ತು. ಇದರ ಬೆನ್ನಲ್ಲೇ ಪೊಲೀಸರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: I Love You ಅನ್ನೋದ್ರಲ್ಲಿ ಲೈಂಗಿಕ ಉದ್ದೇಶವಿಲ್ಲ – ಬಾಂಬೆ ಹೈಕೋರ್ಟ್
ಜೂ.27ರಂದು ತಿರುಪುವನಂ ಮಾದಾಪುರಂ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ತಮ್ಮ ಕಾರಿನಿಂದ 10 ಗ್ರಾಂ. ಚಿನ್ನ ಕಾಣೆಯಾಗಿದೆ ಎಂದು ತಾಯಿ-ಮಗಳು ದೂರು ನೀಡಿದ್ದರು. ಪ್ರಕರಣದ ತನಿಖೆಗೆ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ, ದೇವಸ್ಥಾನ ಭದ್ರತಾ ಸಿಬ್ಬಂದಿ ಅಜಿತ್‍ನನ್ನು ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟಿದ್ದರು. ಬಾಯಿಗೆ ಖಾರದ ಪುಡಿ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿದ್ದರು. ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.
ತೀವ್ರವಾದ ಹಲ್ಲೆಯಿಂದ ಅಜಿತ್ ಮೃತಪಟ್ಟಿದ್ದ. ಇದು ಲಾಕಪ್ ಡೆತ್ ಅಂತ ಆರೋಪಿ ಕುಟುಂಬಸ್ಥರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಅಜಿತ್ ದೇಹದ ಮೇಲೆ 20ರಿಂದ30 ಗಾಯ ಹಾಗೂ ದೇಹದೊಳಗೆ ಗಂಭೀರವಾದ ಗಾಯಗಳು ಪತ್ತೆಯಾಗಿವೆ. ಕಸ್ಟಡಿ ಚಿತ್ರಹಿಂಸೆ ಮತ್ತು ಸಾವಿನ ಬಗ್ಗೆ ಸಬ್-ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುತ್ತಿದ್ದು, ಮೃತನ ಸಹೋದರ ಪೊಲೀಸರ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ.
ಬಂಧಿತ ಐವರು ಪೊಲೀಸರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅಜಿತ್ ಲಾಕಪ್ ಡೆತ್ ತಮಿಳುನಾಡಿನಲ್ಲಿ ರಾಜಕೀಯ ಫೈಟ್‍ಗೂ ಕಾರಣವಾಗಿದೆ. ಪ್ರತಿಪಕ್ಷಗಳು ಘಟನೆಯನ್ನು ಖಂಡಿಸಿ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಇದನ್ನೂ ಓದಿ: ವಾಲ್ಮೀಕಿ ಹಗರಣ| ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ – ಎಸ್‌ಐಟಿ ರದ್ದು, ಸಿಬಿಐ ತನಿಖೆಗೆ ಆದೇಶ