ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಪ್ರಕರಣಕ್ಕೆ (Dharmasthala Mass Burials) ಸಂಬಂಧಿಸಿದಂತೆ ಹಲವರ ವಿಚಾರಣೆ ತೀವ್ರಗೊಳ್ಳುತ್ತಿದೆ. ಆದರೆ ಚಿನ್ನಯ್ಯ (Mask Man Chinnaiah)ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗಳ ಬಂಧನ ಈವರೆಗೂ ಆಗದಿದ್ದು, ಎಸ್‌ಐಟಿ ತನಿಖೆ ನಿಗೂಢವಾಗಿದೆ. ಇತ್ತ ಬುರುಡೆ ಗ್ಯಾಂಗ್ ಜಾಲಿ ಮೂಡ್‌ನಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಈ ಪ್ರಕರಣದಲ್ಲಿ ಕೇವಲ ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾತ್ರ ಬಲಿ ಪಶು ಆಗುತ್ತಾನಾ ಎಂಬ ಅನುಮಾನ ದಟ್ಟವಾಗುತ್ತಿದೆ.
ದಿನಕ್ಕೊಂದು ಟ್ವಿಸ್ಟ್ ಪಡೆದಿರುವ ಧರ್ಮಸ್ಥಳ ಬುರುಡೆ ಪ್ರಕರಣ ಅದ್ಯಾಕೋ ಏನೋ ಈಗೀಗ ಮಂದಗತಿಯಲ್ಲಿ ಸಾಗುತ್ತಿದೆ. ಎಸ್‌ಐಟಿ ತನಿಖೆಯ ಹಾದಿಯೇ ವಿಚಿತ್ರವಾಗಿ ಗೋಚರಿಸುತ್ತಿದೆ. ಬುರುಡೆ ಗ್ಯಾಂಗ್ ವಿಚಾರಣೆ ತೀವ್ರಗೊಳಿಸಿರುವ ಎಸ್‌ಐಟಿ ಈವರೆಗೂ ಯಾರನ್ನೂ ಲಾಕ್ ಮಾಡಿಲ್ಲ. ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ, ವಿಠಲ ಗೌಡ, ಯೂಟ್ಯೂಬರ್ ಮನಾಫ್, ಅಭಿಷೇಕ್ ಪ್ರತಿದಿನ ಆರಾಮವಾಗಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿ, ನಿರ್ಭಿತಿಯಿಂದ ವಾಪಸ್ ಆಗುತ್ತಿದ್ದಾರೆ. ಬುರುಡೆ ಪ್ರಕರಣದ ಹಿಂದೆ ಇದೇ ಹೋರಾಟಗಾರರು ಇದ್ದಾರೆ ಅನ್ನೋ ವಿಚಾರ ತಿಳಿದಿದ್ದರೂ ಎಸ್‌ಐಟಿಗೆ ಬಂಧಿಸಲು ಸಾಧ್ಯವಾಗುತ್ತಿಲ್ಲ. ಪ್ರಬಲ ಸಾಕ್ಷ್ಯಗಳ ಹುಡುಕಾಟದಲ್ಲಿರೋ ಎಸ್‌ಐಟಿ ಬುರುಡೆ ಗ್ಯಾಂಗ್ ಮೊಬೈಲ್ ಹೊರತುಪಡಿಸಿದರೆ ಬೇರೆ ಯಾವುದೇ ಆಸರೆ ಇಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಮಾವ ವಿಠಲ ಗೌಡ: ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ
ಈ ನಡುವೆ ಬುರುಡೆ ಷಡ್ಯಂತ್ರದ ಆರೋಪ ಹೊತ್ತವರ ಬಂಧನಕ್ಕೆ ಮೊಬೈಲ್ ಕಾಲ್ ಡೇಟಾ ಬಿಟ್ರೆ ಎಸ್‌ಐಟಿ ಬಳಿ ಬೇರೇನೂ ಪ್ರಬಲ ಸಾಕ್ಷ್ಯಧಾರಗಳು ಇದ್ದಂತೆ ಕಾಣಿಸುತ್ತಿಲ್ಲ. ಇದೇ ಕಾರಣಕ್ಕೆ ಬುರುಡೆ ಟೀಂ ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಮಾಡಿದ ಎಸ್‌ಐಟಿ ಪೊಲೀಸರಿಗೆ ಶಾಕ್ ಎದುರಾಗಿದೆ. ಗಿರೀಶ್ ಮಟ್ಟಣ್ಣನವರ್ ಕಾಲ್ ಡೇಟಾ ಕೆದಕಿದ ಎಸ್‌ಐಟಿಗೆ ಸ್ಫೋಟಕ ಮಾಹಿತಿ ಲಭಿಸಿದೆ. ಅಸಲಿಗೆ ಗಿರೀಶ್ ಮಟ್ಟಣ್ಣನವರ್‌ಗೆ ಮೊದಲು ಮೊಬೈಲ್ ಕರೆ ಮಾಡಿದ್ದೇ ಚಿನ್ನಯ್ಯ ಅನ್ನೋ ಮಾಹಿತಿ ಲಭಿಸಿದೆ. ಇದೇ ಕಾರಣಕ್ಕೆ ಇಂದೂ ಕೂಡ ಬುರುಡೆ ಗ್ಯಾಂಗ್ ವಿಚಾರಣೆ ಮುಂದುವರೆದಿದೆ. ಇದನ್ನೂ ಓದಿ: ಸೌಜನ್ಯ ಕೇಸ್| ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಉದಯ್ ಜೈನ್ ಪತ್ರ
ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಬುರುಡೆ ಗ್ಯಾಂಗ್‌ನ ಸಿಆರ್‌ಪಿಸಿ 161 ಹೇಳಿಕೆ ದಾಖಲಿಸಲಾಗುತ್ತಿದೆ. ಇಂದು ವಿಚಾರಣೆಗೆ ಕೇರಳ ಯೂಟ್ಯೂಬರ್ ಮನಾಫ್, ಅಭಿಷೇಕ್, ಜಯಂತ್ ಟಿ, ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡ ಹಾಜರಾಗಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮನಾಫ್ ಎಸ್‌ಐಟಿ ವಿಚಾರಣೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸತ್ಯ ಹೊರಗಡೆ ಬರುತ್ತೆ ಎಂದಿದ್ದಾರೆ. ಸತ್ಯದ ಹೋರಾಟದಲ್ಲಿ ಸುಳ್ಳು ಹಾದಿ ಹಿಡಿಯೋದು ತಪ್ಪು ಎಂದ ಮನಾಫ್ ಹೇಳಿಕೆ ಕುತೂಹಲ ಕೆರಳಿಸಿದೆ. ಕಾಡಿನಲ್ಲಿ ಬುರುಡೆ ತೆಗೆಯೋ ವಿಡಿಯೋ ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದೆ. ಅದರ ಬಗ್ಗೆ ಎಸ್‌ಐಟಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮನಾಫ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ʻಬುರುಡೆʼ ಕೇಸ್ | ಮತ್ತೊಂದು ರಹಸ್ಯ ಸ್ಫೋಟ – ಕೇರಳದ ಯೂಟ್ಯೂಬರ್ ಮನಾಫ್‌ಗೆ SIT ನೋಟಿಸ್