ಅನಾಮಿಕ ಹೇಳಿದ ಎಲ್ಲಾ ಕಡೆ ಭೂಮಿ ಅಗೆದ್ರೂ ಖಾಲಿ ಖಾಲಿ – ಉತ್ಖನನ ನಿಲ್ಲಿಸಲು ಎಸ್‌ಐಟಿ ನಿರ್ಧಾರ?

Public TV
2 Min Read

ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವ ಹೂತು ಹಾಕಿದ್ದೇನೆಂದು ಹೇಳಿದ್ದ ಅನಾಮಿಕ ದೂರುದಾರನ ಮಾತು ನಂಬಿದ ಎಸ್‌ಐಟಿ (SIT) ಅಧಿಕಾರಿಗಳೇ ಇದೀಗ ಟೆನ್ಷನ್ ಆಗಿದ್ದಾರೆ. ಆತನ ಮಾತು ನಂಬಿ ಕಳೆದ 20 ದಿನಗಳಿಂದ ಧರ್ಮಸ್ಥಳದ ಅರಣ್ಯದಲ್ಲಿ ಉತ್ಖನನ ನಡೆದಿತ್ತು. ಎಲ್ಲೂ ಏನೂ ಸಿಗದೇ ಇರೋದ್ರಿಂದ ಉತ್ಖನನವನ್ನ ಬಹುತೇಕ ಅಂತ್ಯಗೊಳಿಸಲು ಇದೀಗ ಎಸ್‌ಐಟಿ ನಿರ್ಧರಿಸಿದೆ. ಈ ನಡುವೆ ಬುರುಡೆಯನ್ನು ತಂದು ಬುರುಡೆ ಬಿಟ್ಟಿದ್ದ ಅನಾಮಿಕನಿಗೆ ಅದೇ ಬುರುಡೆ ಕಂಟಕವಾಗೋ ಸಾಧ್ಯತೆ ಇದೆ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ನಿಗೂಢ ಪ್ರಕರಣ (Dharmasthala Mass Burials) ಇನ್ನರೆಡು ದಿನದಲ್ಲಿ ಎಲ್ಲವೂ ಬಹಿರಂಗಗೊಳ್ಳಲಿದೆ. ಅನಾಮಿಕನ ಮಾತು ನಂಬಿ 15 ದಿನದಲ್ಲಿ 25ಕ್ಕೂ ಹೆಚ್ಚು ಗುಂಡಿ ತೋಡಿದರೂ ಯಾವುದೇ ಸಾಕ್ಷಿ ಸಿಗದ ಹಿನ್ನೆಲೆ ಎಸ್‌ಐಟಿ ಅಧಿಕಾರಿಗಳಿಗೆ ಮೋಸ ಹೋದಂತಿದೆ. ಹಾಗಾಗಿ, ಎಸ್‌ಐಟಿ ಅಧಿಕಾರಿಗಳು ಗುಂಡಿ ತೆಗೆದು ಮಣ್ಣು ಮುಚ್ಚುವುದನ್ನು ಕೈಬಿಟ್ಟು, ತನಿಖೆಯ ದಾರಿಯನ್ನೇ ಬದಲಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಧರ್ಮಸ್ಥಳದ ಜೊತೆಗಿರುತ್ತೆ, ದಿಕ್ಕು ತಪ್ಪಿಸಿದವರನ್ನ ನಾವು ಬಿಡಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

ತನಿಖೆಗಾಗಿ ಅಧಿಕಾರಿಗಳು ಆತ ಹೇಳಿದಂತೆಲ್ಲಾ ನೆಲ ಅಗೆದಿದ್ರು. ಜಿಪಿಆರ್ ಕೂಡ ತರಿಸಿದ್ರು. ಆದರೆ ಒಂದೇ ಒಂದು ಕಳೇಬರದ ತುಂಡು ಸಹ ಸಿಕ್ಕಿಲ್ಲ. ಹಾಗಾಗಿ, ಮುಂದಕ್ಕೆ ಮತ್ತೆ ನೆಲ ಅಗೆದರೆ ಉಪಯೋಗವಿಲ್ಲ ಅಂತ ಐಪಿಎಸ್ ಅಧಿಕಾರಿಗಳು ಅನಾಮಿಕನಿಗೆ ಆರಂಭದಲ್ಲೇ ಮಾಡಬೇಕಿದ್ದ ಮಂಪರು ಪರೀಕ್ಷೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಇನ್ನು ಉತ್ಖನನ ನಡೆಸದಿರಲು ತೀರ್ಮಾನಿಸಿದ್ದು, ಇಂದೇ ಬಹುತೇಕ ಉತ್ಖನನ ಕಾರ್ಯ ಕೊನೆಗೊಳ್ಳಲಿದೆ. ಇದನ್ನೂ ಓದಿ: ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

ಎಸ್‌ಐಟಿ ತನಿಖೆಯ ಹಾದಿ ಬದಲಿಸೋಕೆ ನಿರ್ಧರಿಸಿಯೇ ಇಷ್ಟು ದಿನ ಮಣ್ಣು ಮಾತ್ರ ಅಗೆಯುತ್ತಿದ್ದ ಅಧಿಕಾರಿಗಳು ಇದೀಗ ಮಹಜರು ಆರಂಭಿಸಿದ್ದಾರೆ. 20 ವರ್ಷಗಳ ಹಿಂದೆ ಅನಾಮಿಕ ಧರ್ಮಸ್ಥಳದಲ್ಲಿ ವಾಸವಿದ್ದ ಜಾಗದ ಸ್ಥಳ ಮಹಜರು ಕೂಡ ನಡೆಸಿರೋದು ಅಧಿಕಾರಿಗಳು ತನಿಖೆಯ ಗೊಂದಲಕ್ಕೆ ಬಂದಿರೋದು ಸ್ಪಷ್ಟವಾಗಿದೆ. ಈಗಾಗಲೇ ಒಂದೆಡೆ 20 ದಿನದಿಂದ ಒಂದೂ ಸಾಕ್ಷಿಯೂ ಸಿಗದ ಕಾರಣ ಧರ್ಮಸ್ಥಳದ ಭಕ್ತರು-ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದ್ರೆ, ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಖಾಲಿ ಡಬ್ಬ, ಷಡ್ಯಂತ್ರ, ಕುತಂತ್ರ ಎಂದಿರೋದು ತನಿಖೆಯ ಹಾದಿಯ ಬದಲಾವಣೆಗೆ ಕಾರಣವಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಇಬ್ಬರು ಸಾವು, ಇಂದು ರೆಡ್ ಅಲರ್ಟ್ ಘೋಷಣೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಸೋಮವಾರ ಮಾತನಾಡ್ತೀನಿ ಎಂದಿರೋದ್ರಿಂದ ಎಸ್‌ಐಟಿ, ನೆಲ ಅಗೆಯೋ ತನಿಖೆ ಕೈಬಿಟ್ಟು ಸರ್ಕಾರಕ್ಕೆ ವರದಿ ನೀಡೋದು ದಟ್ಟವಾಗಿದೆ. ಈ ನಡುವೆ ಆರಂಭದಲ್ಲಿ ಅನಾಮಿಕ ತಂದ ತಲೆ ಬುರುಡೆಯ ರಹಸ್ಯ ಬೇಧಿಸಲು ಆರಂಭಿಸಿರೋ ಎಸ್‌ಐಟಿ ಈ ಕೇಸ್‌ನಲ್ಲಿ ಆತನನ್ನು ಬಂಧಿಸಿ ತನಿಖೆ ನಡೆಸಲಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನಗಳ ಬಳಿಕವಾದ್ರೂ ಎಸ್‌ಐಟಿ ಅಧಿಕಾರಿಗಳು ಸುಖಾಸುಮ್ಮನೇ ಮಣ್ಣು ಅಗೆಯೋ ಕೆಲಸ ಕೈಬಿಡಲು ನಿರ್ಧರಿಸಿದ್ದಾರೆ. ಆದರೆ, ಅನಾಮಿಕನನ್ನು ಯಾವ ರೀತಿಯ ತನಿಖೆಗೆ ಒಳಪಡಿಸುತ್ತಾರೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸದ್ಯದಲ್ಲೇ ಮಂಪರು ಪರೀಕ್ಷೆ ಮಾಡ್ತಾರೋ, ಬಂಧಿಸ್ತಾರೋ ಅನ್ನೋದು ನಿಗೂಢವಾಗಿದೆ. ಏನೇ ಇರಲಿ, ನಿಷ್ಪಕ್ಷಪಾತವಾದ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅನ್ನೋದು ಎಲ್ಲರ ಆಶಯವಾಗಿದೆ.

Share This Article