ಲಂಗ ದಾವಣಿಯಲ್ಲಿ ‘ಸಿಂಗ’ನ ಸಖಿಯಾದ ನಾಗಿಣಿ!

Public TV
1 Min Read

ಬೆಂಗಳೂರು: ಚಿರಂಜೀವಿ ಸರ್ಜಾ ಸಿನಿ ಯಾನದಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗುವ ಭರವಸೆ ಬಿತ್ತಿರೋ ಚಿತ್ರ ಸಿಂಗ. ವಿಜಯ್ ಕಿರಣ್ ನಿರ್ದೇಶನದ, ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಸಿಂಗ ಇದೇ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಅದಾಗಲೇ ಪ್ರೇಕ್ಷಕ ವಲಯದಲ್ಲಿ ನೋಡಲೇ ಬೇಕೆಂಬಂಥಾ ತಹ ತಹವನ್ನು ಹುಟ್ಟು ಹಾಕಿರೋ ಈ ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಹೊಸತನದ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ತಾಕಲು ಅಣಿಯಾಗಿದ್ದಾರೆ. ಅವರಿಗಿಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿದ್ದಾರೆ.

ಅದಿತಿ ಪ್ರಭುದೇವ ಕಿರುತೆರೆ ಧಾರಾವಾಹಿಯ ಮೂಲಕವೇ ನಟಿಯಾಗಿ ಪರಿಚಯವಾಗಿ ಇದೀಗ ಹಿರಿತೆರೆಯಲ್ಲಿ ನಾಯಕಿಯಾಗಿ ಮಿಂಚುತ್ತಿರುವವರು. ಅದಾಗಲೇ ಅವರು ನಾಯಕಿಯಾಗಿರೋ ಮೂರ್ನಾಲಕ್ಕು ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಲು ಸರದಿಯಲ್ಲಿ ನಿಂತಿವೆ. ಏಕತಾನತೆಯನ್ನು ಮೀರಿಕೊಂಡು ಥರ ಥರದ ಪಾತ್ರಗಳಲ್ಲಿ ನಟಿಸೋ ಆಸೆ ಹೊಂದಿರೋ ಅದಿತಿಗೆ ಈವರೆಗೂ ಅಂಥಾದ್ದೇ ಪಾತ್ರಗಳು ಸಿಕ್ಕಿವೆ. ಸಿಂಗ ಚಿತ್ರದಲ್ಲಿ ಅವರಿಗೆ ಸಿಕ್ಕಿರೋ ಪಾತ್ರವೂ ಅಷ್ಟೇ ಭಿನ್ನವಾದದ್ದು.

ನಟಿಯಾಗಿ ಮಿಂಚುತ್ತಿದ್ದರೂ ತನ್ನದೇ ಪುಟ್ಟ ಖಾಸಗಿ ಪ್ರಪಂಚವನ್ನು ಧೇನಿಸುವ ಮನಸ್ಥಿತಿ ಹೊಂದಿರುವವರು ಅದಿತಿ ಪ್ರಭುದೇವ. ಅವರು ಈವರೆಗೂ ಬಯಸಿದ್ದಂಥಾ ಪಾತ್ರವೇ ಸಿಂಗ ಚಿತ್ರದಲ್ಲಿ ಸಿಕ್ಕಿದೆಯಂತೆ. ಇಲ್ಲಿ ಅವರು ಲಂಗ ದಾವಣಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸವಾಲಿನ ಗುಣಲಕ್ಷಣಗಳನ್ನು ಹೊಂದಿರೋ ಈ ಪಾತ್ರವನ್ನು ಅದಿತಿ ಸಲೀಸಾಗಿಯೇ ನಿರ್ವಹಿಸಿದ್ದಾರಂತೆ. ಈಗಾಗಲೇ ಶ್ಯಾನೇ ಟಾಪಾಗವ್ಳೇ ಹಾಡಿನ ಮೂಲಕ ಅದಿತಿಯ ಗೆಟಪ್ಪಿನ ಝಲಕ್ ಜಾಹೀರಾಗಿದೆ. ಅಂತೂ ಈ ಸಿನಿಮಾ ಮೂಲಕ ಅದಿತಿಯ ಸಿನಿ ಯಾನ ಮತ್ತಷ್ಟು ವೇಗ ಪಡೆದುಕೊಳ್ಳೋ ಸಾಧ್ಯತೆಗಳೇ ದಟ್ಟವಾಗಿವೆ.

Share This Article
Leave a Comment

Leave a Reply

Your email address will not be published. Required fields are marked *