ಜನವರಿಯಿಂದ ಹಡಗುಗಳಲ್ಲೂ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ – ಉಲ್ಲಂಘಿಸಿದ್ರೆ ಜೈಲು

Public TV
2 Min Read

ನವದೆಹಲಿ: ಜನವರಿ 1ರಿಂದ ಭಾರತದ ಎಲ್ಲ ಹಡಗುಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದ್ದು, ಈ ಕುರಿತು ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ ಎಲ್ಲ ಬಂದರುಗಳಿಗೆ ಸೂಚನೆ ನೀಡಿದೆ.

ಒಂದು ಬಾರಿ ಬಳಸುವ ಐಸ್ ಕ್ರೀಂ ಕಪ್, ಇತರೆ ಪ್ಲಾಸ್ಟಿಕ್ ಕಪ್‌ಗಳು, ಮೈಕ್ರೋವೇವ್ ಡಿಶಸ್ ಹಾಗೂ ಆಲೂಗಡ್ಡೆ ಚಿಪ್ಸ್ನ ಕವರ್‌ಗಳು ಸೇರಿದಂತೆ ಎಲ್ಲ ರೀತಿಯ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ. ಏಕ ಬಳಕೆ ಪ್ಲಾಸ್ಟಿಕ್‌ನಿಂದ ಭಾರತವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ‘ಮೊದಲ ದಿಟ್ಟ ಹೆಜ್ಜೆಯನ್ನಿಡಬೇಕು’ ಎಂದು ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭಾರತೀಯ ಹಡಗುಗಳಲ್ಲಿ ಹೆಚ್ಚಿನ ಸಂಖ್ಯೆಯ ಏಕ ಬಳಕೆ ಪ್ಲಸ್ಟಿಕ್‌ಗಳನ್ನು ನಿಷೇಧಿಸಲಾಗುವುದು. ಮಾತ್ರವಲ್ಲದೆ, ಭಾರತೀಯ ನೀರಿನಲ್ಲಿ ಸಂಚರಿಸುವಾಗ ವಿದೇಶಿ ಹಡಗುಗಳಲ್ಲಿಯೂ ಸಹ ಪ್ಲಾಸ್ಟಿಕ್ ನಿಷೇಧಿಸಲಾಗುವುದು.

ಈ ಪಟ್ಟಿಯಲ್ಲಿ ಚೀಲಗಳು, ಟ್ರೇ, ಪ್ಲಾಸ್ಟಿಕ್ ಪಾತ್ರೆ, ಫುಡ್ ಪ್ಯಾಕೇಜಿಂಗ್ ಫಿಲ್ಮ್, ಹಾಲಿನ ಬಾಟಲಿಗಳು, ಫ್ರೀಜರ್ ಚೀಲಗಳು, ಶ್ಯಾಂಪೂ ಬಾಟಲಿಗಳು, ಐಸ್ ಕ್ರೀಮ್ ಬಾಕ್ಸ್, ನೀರು ಹಾಗೂ ಇತರೆ ಪಾನೀಯ ಬಾಟಲಿಗಳು ಸೇರಿದಂತೆ ವಿವಿಧ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.

ತಪಾಸಣೆ ಹಾಗೂ ಲೆಕ್ಕಪರಿಶೋಧನೆ ವೇಳೆ ಯಾವುದೇ ಭಾರತೀಯ ಹಡಗಿನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡುವುದಿಲ್ಲ. ಪ್ಲಾಸ್ಟಿಕ್ ಬಳಸದ ಕುರಿತು ಹಾಗೂ ಸಂಗ್ರಹಿಸದ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದನ್ನು ಪಾಲಿಸದೆ ಪದೇ ಪದೆ ಅಪರಾಧ ಎಸಗಿದಲ್ಲಿ ಅಂತಹವರನ್ನು ಬಂಧಿಸುವಂತೆ ಸೂಚಿಸಲಾಗಿದೆ.

ಭಾರತೀಯ ಸಮುದ್ರದಲ್ಲಿ ಪ್ರವೇಶಿಸುವ ವಿದೇಶಿ ಹಡುಗುಗಳು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಬೇಕು. ಒಂದು ಬಾರಿ ಬಳಸುವ ಪ್ಲಾಸ್ಟಿಕ್ ವಸ್ತುಗಳು ಕಂಡು ಬಂದಲ್ಲಿ ಅಂತಹ ವಸ್ತುಗಳನ್ನು ಭಾರತೀಯ ಬಂದರುಗಳ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಏಕ ಬಳಕೆಯ ಪ್ಲಾಸ್ಟಿಕ್ ಅಂಶ ಮಣ್ಣು, ನದಿ ಅಥವಾ ಯಾವುದೇ ಜಲಮೂಲಗಳನ್ನು ಸೇರಿದರೆ ಸರಿಪಡಿಸಲಾಗದಷ್ಟು ಕಲುಷಿತಗೊಳ್ಳುತ್ತದೆ. ಇಂಟರ್‌ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್(ಐಎಂಒ) ಸಾಗರದ ಕಸವು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದೆ. ಈ ರೀತಿ ಮುಂದುವರಿದರೆ 2050ರ ವೇಳೆಗೆ ಸಾಗರದಲ್ಲಿನ ಪ್ಲಾಸ್ಟಿಕ್ ಪ್ರಮಾಣವು ಅಲ್ಲಿನ ಮೀನುಗಳನ್ನು ಮೀರಿಸುತ್ತದೆ ಎಂದು ಕೆಲವು ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *