ಅವಮಾನ ಸಹಿಸುವಷ್ಟು ಚಿಕ್ಕವನಲ್ಲ – ಸ್ಯಾಂಡಲ್‌ವುಡ್‌ನಿಂದ ಅಸಹಕಾರದ ಬೆನ್ನಲ್ಲೇ ಸೋನು ನಿಗಮ್ ರಿಯಾಕ್ಷನ್

By
3 Min Read

– ಕಾನೂನು ಸುವ್ಯವಸ್ಥೆ, ಪೊಲೀಸ್ ಇಲಾಖೆ ಮೇಲೆ ನಂಬಿಕೆಯಿದೆ

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್‌ಗೆ (Sonu Nigam) ಕನ್ನಡ ಸಿನಿಮಾಗಳಲ್ಲಿ ಹಾಡಿಸದಿರಲು ಫಿಲ್ಮ್ ಚೇಂಬರ್ ತೀರ್ಮಾನ ಕೈಗೊಂಡಿದೆ. ಈ ಬೆನ್ನಲ್ಲೇ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಗಾಯಕ, ಕಾನೂನು ಸುವ್ಯವಸ್ಥೆ, ಪೊಲೀಸ್ ಇಲಾಖೆ ಮೇಲೆ ನಂಬಿಕೆಯಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡದ ಹಾಡು ಹಾಡಿ ಎಂದಿದ್ದಕ್ಕೆ ಪಹಲ್ಗಾಮ್ ಉಗ್ರರ ಹೋಲಿಸಿದ ವಿಚಾರ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಸೋನು ನಿಗಮ್ ಸ್ಪಷ್ಟನೆ ನೀಡಿದ್ದಾರೆ.

ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ರಿಯಾಕ್ಟ್ ಮಾಡಿ, ನಮಸ್ಕಾರ,
ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ಈ ರಾಜ್ಯ ಮತ್ತು ಜನರ ಮೇಲೆ ಅಪರೂಪದ ಪ್ರೀತಿ ಹರಿಸಿರುವೆ – ಅದು ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲ, ನಾನು ಜಗತ್ತಿನ ಎಲ್ಲಿ ಇದ್ದರೂ ಸಹ. ನಿಜ ಹೇಳಬೇಕೆಂದರೆ, ನಾನು ನನ್ನ ಕನ್ನಡ ಹಾಡುಗಳನ್ನು ಹಿಂದಿ ಸೇರಿ ಇತರ ಭಾಷೆಗಳ ಹಾಡುಗಳಿಗಿಂತಲೂ ಹೆಚ್ಚು ಗೌರವದಿಂದ ನೋಡಿದ್ದೇನೆ. ಈ ಮಾತಿಗೆ ಸಾಕ್ಷಿಯಾಗಿ ನೂರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ನಾನು ಪ್ರತಿ ಬಾರಿ ಕರ್ನಾಟಕದ ಕಾರ್ಯಕ್ರಮಕ್ಕೆ ಬಂದಾಗ ಒಂದು ಗಂಟೆಗಿಂತ ಹೆಚ್ಚು ಕನ್ನಡ ಹಾಡುಗಳನ್ನು ತಯಾರಿಸಿಕೊಂಡಿರುತ್ತೇನೆ. ಆದರೆ, ನಾನು ಇನ್ನೂ ಬಾಲಕನಲ್ಲ. ಯಾರಿಂದಲೂ ಅವಮಾನ ಸಹಿಸುವ ವಯಸ್ಸಿಲ್ಲ. ನನ್ನಗೀಗ 51 ವರ್ಷ, ಜೀವನದ ಅರ್ಧದಷ್ಟು ಹೆಜ್ಜೆ ಇಟ್ಟಿದ್ದೇನೆ. ನನ್ನ ಮಗನಷ್ಟು ಕಿರಿಯವನು ನನ್ನನ್ನು ಸಾವಿರಾರು ಜನರ ಮುಂದೆ ಭಾಷೆಯ ಹೆಸರಿನಲ್ಲಿ ಬೆದರಿಸಲು ಪ್ರಯತ್ನಿಸಲಾಗಿದೆ. ಅದು ಕನ್ನಡವೇ ಆಗಿರಲಿ, ನನ್ನ ಕೆಲಸದ ಪ್ರಕಾರ ಕನ್ನಡ ನನ್ನ ಎರಡನೇ ಭಾಷೆಯಾಗಿದೆ.

ಅದು ಕೂಡ ನಾನು ಮೊದಲ ಹಾಡು ಹಾಡಿದ ತಕ್ಷಣವೇ ಕನ್ನಡ ಕನ್ನಡ ಎಂದು ಕೂಗಿದರು. ನಾನು ಅವರಿಗೆ ತುಂಬಾ ಶಾಂತಿಯುತವಾಗಿ, ಪ್ರೀತಿಯಿಂದ ಹೇಳಿದೆ, ಈಗ ಮಾತ್ರ ಕಾರ್ಯಕ್ರಮ ಪ್ರಾರಂಭವಾಗಿದೆ. ಇದು ನನ್ನ ಮೊದಲ ಹಾಡು. ನಾನು ನಿಮಗೆ ನಿರಾಸೆ ಉಂಟುಮಾಡಲ್ಲ, ಆದರೆ ನೀವು ನನಗೆ ಕಾರ್ಯಕ್ರಮವನ್ನು ನನ್ನ ಯೋಜನೆಯಂತೆ ಮುಂದುವರಿಸಲು ಅವಕಾಶ ನೀಡಬೇಕು. . ಪ್ರತಿಯೊಬ್ಬ ಕಲಾವಿದರು ಹಾಡಿನ ಪಟ್ಟಿಯನ್ನು ಸಿದ್ಧಪಡಿಸಿರುತ್ತಾರೆ, ಆದ್ದರಿಂದ ಸಂಗೀತಗಾರರು ಮತ್ತು ತಂತ್ರಜ್ಞರು ಸಿಂಕ್ ಆಗಿರುತ್ತಾರೆ. ಆದರೆ ಅವರು ಗದ್ದಲ ಸೃಷ್ಟಿಸಲು ನೋಡುತ್ತಿದ್ದರು. ಇಲ್ಲಿ ತಪ್ಪು ಯಾರು ಮಾಡಿದರು ಎಂಬುದನ್ನು ನೀವೇ ಹೇಳಿ ಎಂದು ಸೋನು ನಿಗಮ್ ಪ್ರಶ್ನಿಸಿದ್ದಾರೆ.

 

View this post on Instagram

 

A post shared by Sonu Nigam (@sonunigamofficial)

ನಾನು ದೇಶಭಕ್ತನಾಗಿದ್ದರಿಂದ, ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷ ಹುಟ್ಟಿಸುವವರನ್ನು ವಿರೋಧಿಸುತ್ತೇನೆ. ವಿಶೇಷವಾಗಿ ಪಹಲ್ಗಾಮ್‌ನಲ್ಲಿ ಸಂಭವಿಸಿದ ಘಟನೆಗಳನ್ನು ನೋಡಿದ ಬಳಿಕ. ನಾನು ಅವರಿಗೆ ಬುದ್ಧಿವಾದ ಹೇಳಬೇಕಾಯಿತು. ಆ ಘಟನೆಯ ಬಳಿಕ ಒಂದು ಗಂಟೆಗಿಂತ ಹೆಚ್ಚು ಕಾಲ ಕನ್ನಡ ಹಾಡುಗಳನ್ನು ಹಾಡಿದೆ. ಎಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ಇದೆ. ಇಲ್ಲಿ ತಪ್ಪು ಯಾರದ್ದು ಎಂಬ ನಿರ್ಧಾರವನ್ನು ಕನ್ನಡದ ವಿವೇಕವಂತ ಜನತೆಗೆ ಬಿಟ್ಟುಬಿಡುತ್ತೇನೆ. ನೀವು ಯಾವ ತೀರ್ಪು ನೀಡಿದರೂ ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ. ನಾನು ಕರ್ನಾಟಕದ ಕಾನೂನು ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ಮೇಲೆ ಪೂರ್ಣ ಗೌರವ ಮತ್ತು ನಂಬಿಕೆ ಇಟ್ಟುಕೊಂಡಿದ್ದೇನೆ ಮತ್ತು ನನ್ನಿಂದ ನಿರೀಕ್ಷಿಸಬಹುದಾದ ಎಲ್ಲ ಸಹಕಾರವನ್ನು ನಾನು ನೀಡುತ್ತೇನೆ. ನಾನು ಕರ್ನಾಟಕದಿಂದ ದೈವಿಕ ಪ್ರೀತಿಯನ್ನು ಪಡೆದಿದ್ದೇನೆ ಮತ್ತು ನಿಮ್ಮ ತೀರ್ಪು ಏನೇ ಆಗಿರಲಿ, ಯಾವುದೇ ದ್ವೇಷವಿಲ್ಲದೆ ಅದನ್ನು ಸದಾ ಗೌರವದಿಂದ ಪಾಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮೇ 2ರಂದು ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದ ಸೋನು ನಿಗಮ್ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು.

Share This Article