ಅಂದು ಬಾಡಿಗೆ ಮನೆಯಲ್ಲಿ, ಇಂದು ಭವ್ಯವಾದ ಬಂಗಲೆ ಒಡತಿಯಾದ ಗಾಯಕಿ ನೇಹಾ

Public TV
2 Min Read

ಹೈದರಾಬಾದ್: ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಉತ್ತರಾಖಂಡದ ರಿಷಿಕೇಶದಲ್ಲಿ ಒಂದು ವಿಸ್ತಾರವಾದ ಬಂಗಲೆಯನ್ನು ಖರೀದಿಸಿದ್ದಾರೆ. ಜೊತೆಗೆ ಕಠಿಣ ಶ್ರಮದಿಂದ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ.

ನೇಹಾ ಕಕ್ಕರ್ ಅವರು ತಾವು ಹುಟ್ಟಿ, ಬೆಳೆದ ಹಳೆಯ ಮನೆಯ ಫೋಟೋದೊಂದಿಗೆ ತಮ್ಮ ಹೊಸ ಬಂಗಲೆ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ನೇಹಾ ಅವರು ತಮ್ಮ ಇಡೀ ಕುಟುಂಬವು ಬಾಡಿಗೆ ಮನೆಯಲ್ಲಿ ಹೇಗೆ ವಾಸಿಸುತ್ತಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಕಠಿಣ ಪರಿಶ್ರಮದಿಂದ ಅಂದಿನ ಬಾಡಿಗೆ ಮನೆಯಲ್ಲಿ ಬೆಳೆದು ಇಂದು ಅದೇ ನಗರದಲ್ಲಿ ಬಂಗಲೆಯ ಮಾಲೀಕರಾಗಿರುವುದರ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇನ್ಸ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿದೆ?
“ಈ ಬಂಗಲೆಯನ್ನು ನಾವು ಈಗ ರಿಷಿಕೇಶದಲ್ಲಿ ಖರೀದಿಸಿದ್ದೇವೆ. ಜೊತೆಗೆ ನಮ್ಮ ಹಳೆಯ ಮನೆಯ ಫೋಟೋ ನೋಡಲು ಬಲಕ್ಕೆ ಸ್ವೈಪ್ ಮಾಡಿ. ಅದೇ ಮನೆಯಲ್ಲಿ ನಾನು ಹುಟ್ಟಿದ್ದು, ಒಂದು ರೂಮಿನಲ್ಲಿ ನಾವು ವಾಸಿಸುತ್ತಿದ್ದೆವು. ಆ ಸಣ್ಣ ಕೋಣೆಯಲ್ಲಿ ನಮ್ಮ ತಾಯಿ ಒಂದು ಟೇಬಲ್ ಇಟ್ಟಿದ್ದರು. ಅದೇ ನಮ್ಮ ಅಡುಗೆ ಮನೆಯಾಗಿತ್ತು. ಆ ರೂಮ್ ಕೂಡ ನಮ್ಮದಲ್ಲ, ಅದಕ್ಕೆ ನಾವು ಬಾಡಿಗೆ ಕೊಡುತ್ತಿದ್ದೆವು. ಈಗ ನಾನು ಅದೇ ನಗರದಲ್ಲಿ ನಮ್ಮ ಸ್ವಂತ ಬಂಗಲೆಯನ್ನು ಹೊಂದಿದ್ದೇನೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಅವರ ಕುಟುಂಬಕ್ಕೆ ಮತ್ತು ತಮ್ಮ ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ನೇಹಾ ಭಾವನಾತ್ಮಕ ಪೋಸ್ಟ್ ಮಾಡಿದ ನಂತರ ಅದಕ್ಕೆ ಅವರ ಸಹೋದ್ಯೋಗಿಗಳಾದ ಗೀತಾ ಕಪೂರ್, ಆದಿತ್ಯ ನಾರಾಯಣ್, ವಿಶಾಲ್ ದಾದ್ಲಾನಿ ಮತ್ತು ಮನೀಶ್ ಪಾಲ್ ಇತರರು ಕಮೆಂಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜೀವನದಲ್ಲಿ ಕಠಿಣ ಪರಿಶ್ರಮದಿಂದ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನೇಹಾ ಒಂದು ಉದಾಹರಣೆ ಎಂದು ವಿಶಾಲ್ ಹೇಳಿದ್ದಾರೆ. ನೇಹಾ ಅವರು ಬೆಳೆದು ಬಂದ ಹಾದಿ ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸದಂತೆ ಇತರರಿಗೆ ಪ್ರೇರಣೆ ನೀಡುತ್ತದೆ ಎಂದು ಆದಿತ್ಯ ಕಮೆಂಟ್ ಮಾಡಿದ್ದಾರೆ.

ನೇಹಾ ಜನಪ್ರಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ನೇಹಾ ಅವರ ಸಹೋದರಿ ಸೋನು ಕಕ್ಕರ್ ಮತ್ತು ಸಹೋದರ ಟೋನಿ ಕಕ್ಕರ್ ಕೂಡ ಗಾಯಕರಾಗಿದ್ದು, ಕೆಲವು ಹಿಟ್ ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ.

https://www.instagram.com/p/B9Y80pXHICf/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *