ಗಾಯಕಿ ಮಂಗ್ಲಿಗೆ ನಾಯಕಿಯಾಗುವ ಕನಸು ಭಗ್ನ: ಅದಕ್ಕೆ ಕಾರಣ ಯಾರು?

Public TV
2 Min Read

ತೆಲುಗು ಚಿತ್ರರಂಗದ ಹೆಸರಾಂತ ಗಾಯಕಿ, ಕನ್ನಡದಲ್ಲೂ ಹಲವಾರು ಗೀತೆಗಳನ್ನು ಹಾಡಿರುವ ಮಂಗ್ಲಿ (Mangli), ‘ಪಾದರಾಯ’ (Padaraya) ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಬೇಕಿತ್ತು. ನಟ, ನಿರ್ದೇಶಕ ನಾಗಶೇಖರ್ (Nagasekhar) ನಾಯಕನಾಗಿ ನಟಿಸಲಿರುವ ಪಾದರಾಯ ಚಿತ್ರಕ್ಕೆ ಮಂಗ್ಲಿ ನಾಯಕಿಯಾಗಿ ಆಯ್ಕೆ ಕೂಡ ಆಗಿದ್ದರು. ಈ ಮಾಹಿತಿಯನ್ನು ಚಿತ್ರತಂಡ ಮತ್ತು ಸ್ವತಃ ಮಂಗ್ಲಿ ಕೂಡ ಹೇಳಿಕೊಂಡಿದ್ದರು. ಚಿತ್ರತಂಡದಲ್ಲಿ ಹಲವು ಬೆಳವಣಿಗೆಗೆಳು ನಡೆದಿವೆ. ಹಾಗಾಗಿ ಮಂಗ್ಲಿ ನಟನೆಯ ಮೊದಲ ಸಿನಿಮಾ ನಿಂತಿದೆ.

ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿರುವ ನಿರ್ದೇಶಕ ಡಿ.ಜೆ ಚಕ್ರವರ್ತಿ, ನಾಗಶೇಖರ್ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಪಾದರಾಯ ಸಿನಿಮಾವನ್ನು ಬೇರೆಯವರ ಜೊತೆ ಮಾಡುವ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ‘ಪಾದರಾಯ ಸಿನಿಮಾವನ್ನು ನಾಗಶೇಖರ್ ಜೊತೆ ಮಾಡುವುದಿಲ್ಲ. ಹಾಗಾಗಿ ಮಂಗ್ಲಿ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ತಗೆದುಕೊಂಡಿಲ್ಲ. ನಿರ್ಮಾಪಕರು ಕೂಡ ಬದಲಾಗಲಿದ್ದಾರೆ. ನಾಯಕ ಯಾರು ಅನ್ನುವುದರ ಮೇಲೆ ನಾಯಕಿಯ ನಿರ್ಧಾರ ಆಗಲಿದೆ’ ಎಂದಿದ್ದಾರೆ ಚಕ್ರವರ್ತಿ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

ಪಾದರಾಯ ಚಿತ್ರಕ್ಕೆ ನಾಯಕ ಯಾರು ಎನ್ನುವುದರ ಮೇಲೆ ನಾಯಕಿಯ ತೀರ್ಮಾನ ಆಗುವುದಾಗಿ ಸ್ವತಃ ನಿರ್ದೇಶಕರೇ ಹೇಳಿರುವುದರಿಂದ ಮಂಗ್ಲಿ ಮುಂದಿನ ದಿನಗಳಲ್ಲಿ ಈ ಚಿತ್ರದಲ್ಲಿ ಇರುತ್ತಾರಾ ಎನ್ನುವುದು ಯಕ್ಷಪ್ರಶ್ನೆ. ಹಾಗಾಗಿ ಮಂಗ್ಲಿಗೆ ಪಾದರಾಯ ಮೊದಲ ಚಿತ್ರ ಆಗುವುದು ಬಹುತೇಕ ಅನುಮಾನ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಅವರು, ಕನ್ನಡ ಚಿತ್ರೋದ್ಯಮದ ಮೂಲಕ ನಾಯಕಿಯೂ ಆಗಲಿದ್ದರು. ಸಹಜವಾಗಿಯೇ ಅದು ಅವರಿಗೆ ಖುಷಿ ತಂದಿತ್ತು.

ನಾಗಶೇಖರ್ ಮತ್ತು ಚಕ್ರವರ್ತಿ ನಡುವೆ ಹಲವು ಬೆಳವಣಿಗೆಗಳು ನಡೆದಿವೆ. ಸ್ವತಃ ಚಕ್ರವರ್ತಿ ಚಂದ್ರಚೂಡ ಅವರೇ ಎರಡ್ಮೂರು ದಿನಗಳ ಹಿಂದೆ ಇದೇ ಸಿನಿಮಾದ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದ್ದರು. ಅದರಲ್ಲೂ ಕೂಡ ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಆ ಎಲ್ಲ ಆರೋಪಗಳಿಗೂ ನಾನು ಈಗಲೂ ಬದ್ಧನಾಗಿದ್ದೇನೆ ಎನ್ನುವುದು ಅವರ ಮಾತು. ಹಾಗಂತ ಈ ಸಿನಿಮಾ ನಿಲ್ಲುವುದಿಲ್ಲ, ಬೇರೆ ನಿರ್ಮಾಪಕರೊಟ್ಟಿಗೆ ಸಿನಿಮಾ ಮಾಡುತ್ತೇನೆ ಎನ್ನುವುದು ಅವರ ಸ್ಪಷ್ಟನೆ. ಈ ಸಿನಿಮಾದಲ್ಲಿ ಮಂಗ್ಲಿ ಇರುತ್ತಾರಾ ಎನ್ನುವ ಕುತೂಹಲವೂ ಇದೆ.

Share This Article
Leave a Comment

Leave a Reply

Your email address will not be published. Required fields are marked *