ಗಾಯಕ ಹನಿ ಸಿಂಗ್ 13 ವರ್ಷಗಳ ದಾಂಪತ್ಯ ಜೀವನ ಅಂತ್ಯ

Public TV
1 Min Read

ಬಾಲಿವುಡ್ ಖ್ಯಾತ ಗಾಯಕ (Singer) ಹನಿ ಸಿಂಗ್ ತಮ್ಮ ಹದಿಮೂರು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಪತ್ನಿ ಶಾಲಿನಿ ತಲ್ವಾರ್ ಮತ್ತು ಹನಿ ಸಿಂಗ್ (Honey Singh) ಅಧಿಕೃತವಾಗಿ ಬೇರೆಯಾಗಿದ್ದಾರೆ. ನಿನ್ನೆ ದೆಹಲಿ ಫ್ಯಾಮಿಲಿ ಕೋರ್ಟ್ ಈ ಜೋಡಿಗೆ ವಿಚ್ಛೇದನ ನೀಡಿದೆ. ಹನಿ ಸಿಂಗ್ ಮತ್ತು ಶಾಲಿನಿ 2011ರ ಜನವರಿಯಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು.

ಪಂಜಾಬಿ (Punjabi)ಖ್ಯಾತ ಗಾಯಕ, ಬಾಲಿವುಡ್ ನಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಹನಿ ಸಿಂಗ್ (Honey Singh) ಕೊನೆಗೂ ತಮ್ಮ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ವಿಚ್ಛೇದನ ನೀಡಿದ್ದಾರೆ. ಕಳೆದ ವರ್ಷವಷ್ಟೇ ಹನಿ ಸಿಂಗ್ ಮೇಲೆ ಅವರ ಪತ್ನಿ ದೈಹಿಕ ಹಿಂಸಾಚಾರದ ಆರೋಪ ಮಾಡಿದ್ದರು. ಪತಿಯಿಂದ ತಮಗೆ ತುಂಬಾ ಹಿಂಸೆ ಆಗುತ್ತಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೆ ಹನಿ ಸಿಂಗ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ದೆಹಲಿ (Delhi) ಕೋರ್ಟ್ ನಲ್ಲಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ (Shalini)ಯು ನ್ಯಾಯಾಧೀಶರ ಎದುರು ಸೆಟಲ್ ಮೆಂಟ್ ಮಾಡಿಕೊಂಡು, ಪತ್ನಿಗೆ ಜೀವನಾಂಶವಾಗಿ ಒಂದು ಕೋಟಿ ರೂಪಾಯಿ ನೀಡಿದ್ದಾರೆ. ಅದು ಚೆಕ್ ಮೂಲಕ ನೀಡಿದ್ದಾರೆ. 2001ರಲ್ಲಿ ಈ ಜೋಡಿ ವಿವಾಹವಾಗಿದ್ದು, ಆ ನಂತರ ಮನಸ್ತಾಪಗಳು ಬಂದಿದ್ದವು. ಕಳೆದ ವರ್ಷವಂತೂ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿದ್ದರು.

 

ತಮ್ಮ ಮೇಲೆ ಪತಿ ದೈಹಿಕವಾಗಿ ಹಿಂಸೆ ಮಾಡಿದ್ದಾನೆ ಎಂದು ಶಾಲಿನಿ ಬಹಿರಂಗವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಪತ್ರವನ್ನು ಬರೆದಿದ್ದರು. ಹನಿ ಸಿಂಗ್ ಕುಟುಂಬದ ಬಗ್ಗೆಯೂ ಆರೋಪಗಳನ್ನು ಮಾಡಿದ್ದರು. ಆನಂತರ ಹನಿ ಸಿಂಗ್ ಕೂಡ ಮಾಧ್ಯಮಗಳ ಮುಂದೆ ಬಂದು ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು. ಅಲ್ಲದೇ, ಶಾಲಿನಿಯಿಂದ  ದೂರ ಹೋಗುವುದಾಗಿಯೂ ಹೇಳಿಕೊಂಡಿದ್ದರು. ಈ ಮೂಲಕ ಅವರು ಡಿವೋರ್ಸ್ ಗೆ (Divorce) ಅರ್ಜಿ ಸಲ್ಲಿಸಿದ್ದರು.

Share This Article