ಒಂದು ದೇಶ, ಒಂದೇ ಚುನಾವಣೆ ನಡೆಸಲು ಸಿದ್ಧ: ಚುನಾವಣಾ ಆಯೋಗ

Public TV
2 Min Read

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ 2018ರ ನವೆಂಬರ್ – ಡಿಸೆಂಬರ್ ಒಳಗಡೆ ಲೋಕಸಭಾ ಮತ್ತು ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

2018ರಲ್ಲಿ ರಾಜ್ಯಗಳ ವಿಧಾನಸಭಾ ಹಾಗೂ ಸಂಸತ್ತಿನ ಲೋಕಸಭಾ ಚುನಾವಣೆಯನ್ನು ಏಕಕಾಲದಲ್ಲಿ ನಡೆದಲು ನಾವು ಸಿದ್ಧರಿದ್ದೇವೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಏಕಕಾಲದಲ್ಲಿ ಕೇಂದ್ರ ಲೋಕ ಸಭಾ ಚುನಾವಣೆಗಳು ಹಾಗೂ ರಾಜ್ಯ ವಿಧಾನ ಸಭಾ ಚುನಾವಣೆಗಳನ್ನು 2018 ರ ನವೆಂಬರ್- ಡಿಸೆಂಬರ್ ವೇಳೆ ನಡೆಸಲು ನಾವು ಸಿದ್ಧರಿದ್ದೇವೆ. ಈ ನಿರ್ಧಾರವನ್ನು ಅನುಷ್ಠಾನಕ್ಕೆ ತರಲು ಸರ್ಕಾರಗಳು ಕಾನೂನು ತಿದ್ದುಪಡಿ ಮಾಡವೇಕು ಎಂದು ಆಯೋಗದ ಆಯುಕ್ತ ಓಪಿ ರಾವತ್ ಹೇಳಿದ್ದಾರೆ.

ಒಂದೇ ಬಾರಿಗೆ ಚುನಾವಣೆ ನಡೆಸಲು ಮತಯಂತ್ರಗಳ ಅಗತ್ಯವಿದ್ದು, ಕೇಂದ್ರ ಸರ್ಕಾರ ಮತ ಯಂತ್ರ ಖರೀದಿಗೆ ಅನುದಾನ ನೀಡಿದ ಹಿನ್ನೆಲೆಯಲ್ಲಿ 40 ಲಕ್ಷ ವಿದ್ಯುನ್ಮಾನ ಮತಯಂತ್ರ ಖರೀದಿಗೆ ಬೇಡಿಕೆ ಇಟ್ಟಿದ್ದೇವೆ ಎಂದು ಅವರು ತಿಳಿಸಿದರು.

ನಿಗದಿ ಪ್ರಕಾರ 2019ರ ಲೋಕ ಸಭಾ ಚುನಾವಣೆ ಏಪ್ರಿಲ್ ನಲ್ಲಿ ನಡೆಯಬೇಕು. ಒಂದು ವೇಳೆ ಎಲ್ಲ ರಾಜಕೀಯ ಪಕ್ಷಗಳು ಆಯೋಗದ ನಿರ್ಧಾರಕ್ಕೆ ಒಪ್ಪಿಗೆ ನೀಡಿದರೆ 2018ರಲ್ಲಿ ನಡೆಯಬಹುದಾಗಿದೆ.

ಈ ಹಿಂದೆ ಒಂದೇ ದೇಶ, ಒಂದೇ ಚುನಾವಣೆಯನ್ನು ಜಾರಿಗೆ ತರಬೇಕು. ಇದರಿಂದಾಗಿ ಪಕ್ಷದ ನಾಯಕರು ಚುನಾವಣೆಗೆ ಖರ್ಚು ಮಾಡುವ ಹಣವನ್ನು ಉಳಿಸಬಹುದು ಎಂದು ಹೇಳಿದ್ದರು. ಈ ಸಂಬಂಧ ಕಳೆದ ವರ್ಷ ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮುಂದೆ ಎರಡೂ ಚುನಾವಣೆಯನ್ನು ಒಟ್ಟಿಗೆ ನಡೆಸಲು ಸಾಧ್ಯವೇ ಎಂದು ಕೇಳಿಕೊಂಡಿತ್ತು.

ಏಕಕಾಲಕ್ಕೇ ಯಾಕೆ ನಡೆಯಬೇಕು?
ಒಂದು ಚುನಾವಣೆಯ ನೀತಿ ಸಂಹಿತೆ ಘೋಷಣೆಯಾದ ಬಳಿಕ ಆಡಳಿತ ಯಂತ್ರ ಸ್ಥಗಿತಗೊಳ್ಳುತ್ತದೆ. ಸರ್ಕಾರದ ಮಂತ್ರಿಗಳು ಚುನಾವಣೆಯಲ್ಲಿ ಬಿಸಿಯಾಗಿರುತ್ತಾರೆ. ಅಷ್ಟೇ ಅಲ್ಲದೇ ಈ ಸಂದರ್ಭದಲ್ಲಿ ಯಾವುದೇ ಯೋಜನೆ, ದೊಡ್ಡ ನಿರ್ಧಾರವನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಏಕಕಾಲದಲ್ಲೇ ಚುನಾವಣೆ ನಡೆದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ವಿದ್ಯುನ್ಮಾನ ಯಂತ್ರವನ್ನು ಹ್ಯಾಕ್ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿತ್ತು. ಹೀಗಾಗಿ ಇನ್ನು ಮುಂದೆ ಈ ರೀತಿಯ ಆರೋಪ ಕೇಳಿ ಬಾರದೇ ಇರಲು ಮತ ಹಾಕಿದ ಬಳಿಕ ಮತದಾರ ನಾನು ಯಾವ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ತಿಳಿಯಲು ಮತ ಮುದ್ರಣವಾಗಿ ಬರುವಂತಹ ವ್ಯವಸ್ಥೆಯನ್ನು ಚುನಾವಣಾ ಆಯೋಗ ಅಳವಡಿಸಿದೆ. ಮುದ್ರಣವಾದ ಚೀಟಿಯನ್ನು ಮತದಾರ ನೋಡಿ ನಾನು ಹಾಕಿದ ಮತ ಸರಿಯಾಗಿದೆಯೇ ಎಂದು ತಿಳಿದು ಆ ಪೇಪರ್ ಅನ್ನು ಮುಂದುಗಡೆ ಇರುವ ಬಾಕ್ಸ್ ಗೆ ಹಾಕಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *