ಲಿಫ್ಟ್ ಬೇಕು ಲಿಫ್ಟ್- ಶಿವಮೊಗ್ಗ ಸಿಮ್ಸ್ ಡಾಕ್ಟರ್‍ಗಳ ಗೋಳು

By
2 Min Read

ಶಿವಮೊಗ್ಗ: ನಮಗೆ ಲಿಫ್ಟ್ ಬೇಕು ಎಂದು ನಗರದ ಸಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ಗೆ ಸುಸಜ್ಜಿತ ಕಾಲೇಜು ಕಟ್ಟಡವಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಆರು ಮಹಡಿಯ ಹಾಸ್ಟೆಲ್ ಇದ್ದು ಸುಮಾರು 600 ಮಂದಿ ಇದ್ದಾರೆ. ಒಂಬತ್ತು ಮಹಡಿಯ ಭವ್ಯ ಕ್ವಾರ್ಟಸ್ ಇದ್ದು, ಇದರ ಏಳು ಮಹಡಿವರೆಗೂ ವೈದ್ಯ ಕುಟುಂಬಗಳು ವಾಸವಾಗಿವೆ. ಈ ಯಾವುದೇ ಕಟ್ಟಡಗಳಿಗೆ ಲಿಫ್ಟ್ ಇಲ್ಲದ ಕಾರಣ ಇಲ್ಲಿನ ವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಐದು, ಆರು, ಏಳನೇ ಮಹಡಿಯಲ್ಲಿರುವ ಮನೆಗೆ ಹೋಗಿ ಬರುವಷ್ಟರಲ್ಲಿ ವೈದ್ಯರೇ ರೋಗಿಗಳಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕುಟುಂಬದಲ್ಲಿ ಇರುವ ಮಹಿಳೆಯರು, ಮಕ್ಕಳು, ವೃದ್ಧರ ಗೋಳು ಹೇಳತೀರದಾಗಿದೆ. ಆರು- ಏಳನೇ ಮಹಡಿಯಲ್ಲಿ ಯಾರಿಗಾದರೂ ಆರೋಗ್ಯ ಏರುಪೇರಾದಲ್ಲಿ ಅವರನ್ನು ಹೊತ್ತುಕೊಂಡು ಕೆಳಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಗ್ಗಂಟಾಗಿರುವ ಲಿಫ್ಟ್: ಈ ಕಟ್ಟಡಗಳು ಸುಮರು 60 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡು ಎರಡು ವರ್ಷವಾಗಿದೆ. ಕಟ್ಟಡಕ್ಕಾಗಿ ಮೀಸಲಿಟ್ಟಿದ್ದ ಹಣ ಪೂರ್ಣ ಬಳಕೆಯೂ ಆಗಿದೆ. ಇದರಲ್ಲಿ ಲಿಫ್ಟ್ ಗಾಗಿ ಮೀಸಲಿಟ್ಟಿದ್ದ ಹಣವನ್ನು ಗುತ್ತಿಗೆದಾರನಿಗೆ ಪಾವತಿ ಮಾಡಲಾಗಿದೆ. ಆದರೂ, ಈ ಕಟ್ಟಡಗಳಿಗೆ ಲಿಫ್ಟ್ ಭಾಗ್ಯ ದೊರಕಿಲ್ಲ. ಇಡೀ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಇನ್ನೂ ಕೊಟ್ಟಿಲ್ಲ.

ತಮ್ಮ ಸಿಬ್ಬಂದಿಗೆ ಕ್ವಾರ್ಟಸ್ ಕೊಟ್ಟು ಕೈ ತೊಳೆದುಕೊಂಡಿರುವ ಸಿಮ್ಸ್ ಆಡಳಿತ ಮಂಡಳಿ ಅವರಿಗೆ ಲಿಫ್ಟ್ ಸೌಲಭ್ಯ ಕೊಡುವಲ್ಲಿ ಬೇಜವಾಬ್ದಾರಿತನ ತೋರುತ್ತಿದೆ. ಪಿಡಬ್ಲ್ಯುಡಿ, ಮೆಸ್ಕಾಂ, ಕೆಪಿಟಿಸಿಎಲ್ ಕಂಟ್ರಾಕ್ಟರ್ ಮೇಲೆ ಜವಾಬ್ದಾರಿ ಹೊರಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಲಿಫ್ಟ್ ಸೇವೆ ಸಿದ್ಧ ಎಂಬ ಸಿದ್ದ ಉತ್ತರವನ್ನೇ ಸಿಮ್ಸ್ ನಿರ್ದೇಶಕರು ನೀಡುತ್ತಿದ್ದಾರೆ.

ಈ ಕ್ವಾರ್ಟಸ್ ಗಳ ಮಹಡಿಗಳಲ್ಲಿ ಮನೆ ಮಾಡಿದವರು ಲಿಫ್ಟ್ ಇಲ್ಲದೆ ಬವಣೆ ಪಡುತ್ತಿದ್ದಾರೆ. ಲಿಫ್ಟ್ ಬೇಕು ಲಿಫ್ಟ್ ಎನ್ನುತ್ತಿದ್ದಾರೆ. ಆದರೆ ಸಿಮ್ಸ್ ಆಡಳಿತ ಅಸೀಮ ನಿರ್ಲಕ್ಷ್ಯ ಮುಂದುವರೆಸಿದೆ. ಭವ್ಯ ಕಟ್ಟಡ ನಿರ್ಮಿಸಿದರೆ ಸಾಲದು ಅದಕ್ಕೆ ತಕ್ಕ ಸೌಲಭ್ಯಗಳನ್ನೂ ಒದಗಿಸುವುದು ತಮ್ಮ ಜವಾಬ್ದಾರಿ ಎಂಬುದನ್ನು ಮರೆತಿದೆ. ಈ ನಿರ್ಲಕ್ಷ್ಯದ ವಿರುದ್ಧ ಲಿಫ್ಟ್ ಅಗತ್ಯ ಇರುವ ವೈದ್ಯರು ಪ್ರತಿಭಟನೆ ಹಾದಿ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *