ಬಿಜೆಪಿ ದ್ವೇಷದ ರಾಜಕಾರಣ ಖಂಡಿಸಿ ನಾಳೆ ರಾಜಭವನ ಮುತ್ತಿಗೆ: ಡಿಕೆಶಿ

Public TV
3 Min Read

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ ಅಧಿಕಾರ ದುರುಪಯೋಗ, ಸಂವಿಧಾನಿಕ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ನಡೆಸುತ್ತಿರುವ ದ್ವೇಷದ ರಾಜಕಾರಣ ಹಾಗೂ ಪ್ರತಿಭಟನೆ ನಿರತರ ಮೇಲೆ ದೌರ್ಜನ್ಯ ಖಂಡಿಸಿ ಗುರುವಾರ ಬೆಳಗ್ಗೆ 10 ಗಂಟೆಗೆ ಕೆಪಿಸಿಸಿ ಕಚೇರಿಯಿಂದ ರಾಜಭವನ ಚಲೋ, ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆಶಿ, ದೇಶದಲ್ಲಿ ಸಂವಿಧಾನ, ಕಾನೂನನ್ನು ಗಾಳಿಗೆ ತೂರಿ, ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಕಳೆದ 3 ದಿನಗಳಿಂದ ರಾಹುಲ್ ಗಾಂಧಿ ಅವರಿಗೆ ಇ.ಡಿ ನೋಟಿಸ್ ಕೊಟ್ಟು ವಿಚಾರಣೆ ಮಾಡುತ್ತಿದೆ. 2-3 ಗಂಟೆಯಲ್ಲಿ ಮಾಡುವ ವಿಚಾರಣೆಯನ್ನು 10ರಿಂದ 14 ಗಂಟೆಗಳ ಕಾಲ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಚಾರದ ಬಗ್ಗೆ ಮಾತನಾಡುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ತಲೆಯಲ್ಲಿ ಮೂರು ಕಾಸಿನ ಬುದ್ಧಿ ಇಲ್ಲ, ಕೇವಲ ಸಗಣಿ ಇದೆ. ಅವರು ಬೇಕಾದರೆ ಈ ಬಗ್ಗೆ ಚರ್ಚೆಗೆ ಕರೆಯಲಿ, ಪಕ್ಷದ ಅಧ್ಯಕ್ಷ ಎಂಬುದನ್ನು ಮರೆತು ಚರ್ಚೆಗೆ ಸಿದ್ದನಿದ್ದೇನೆ ಎಂದರು.

ಹೋರಾಟಕ್ಕೆ ಸಂವಿಧಾನ, ಕಾನೂನಿನಲ್ಲಿ ಹಕ್ಕಿದೆ. ಹೋರಾಟದ ವೇಳೆ ನಮ್ಮ ಧ್ವಜ ಹಿಡಿಯಬೇಡಿ ಎನ್ನುತ್ತಾರೆ. ಕಾಂಗ್ರೆಸ್ ಕಚೇರಿ ನಮ್ಮ ಪಾಲಿಗೆ ದೇವಾಲಯವಿದ್ದಂತೆ. ಅಲ್ಲಿ ಪಕ್ಷದ ನಾಯಕರು ಸಭೆ ನಡೆಸಲು ಹೋದರೆ ಅವರನ್ನು ಬಂಧಿಸಿ, ಸಭೆ ನಡೆಸಲು ಅವಕಾಶ ನೀಡುತ್ತಿಲ್ಲ. ಯಾವ ರಾಜ್ಯ ನಿರ್ಮಾಣ ಮಾಡಲು ಹೊರಟಿದ್ದೀರಿ? ಇದರ ವಿರುದ್ಧ ಹಳ್ಳಿ-ಹಳ್ಳಿಯಲ್ಲೂ ಹೋರಾಟ ಮಾಡುತ್ತೇವೆ. ನಿಮ್ಮ ಅಧಿಕಾರ ದುರ್ಬಳಕೆ ಖಂಡಿಸಿ ಧೈರ್ಯವಾಗಿ ಜನರ ಮುಂದೆ ನಿಲ್ಲುತ್ತೇವೆ ಎಂದರು. ಇದನ್ನೂ ಓದಿ: ಒಟ್ಟು 648 ಕೇಸ್ – 4 ಸಾವಿರದ ಆಸುಪಾಸಿನಲ್ಲಿ ಸಕ್ರಿಯ ಪ್ರಕರಣ

Congress

ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ನೀವು ಎಷ್ಟೇ ಸುಳ್ಳು ಕೇಸ್ ದಾಖಲಿಸಬಹುದು, ಆದರೆ ಸತ್ಯಾಂಶ ಹೊರಗೆ ಬಂದೇ ಬರಲಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಣ್ಣ ಅಧಿಕಾರವಿಲ್ಲದೇ ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ಅಂತಹವರಿಗೆ ನೀವು ಕಿರುಕುಳ ನೀಡಲು ಹೊರಟಿದ್ದು, ಇದನ್ನು ದೇಶದ ಜನ ಸಹಿಸುವುದಿಲ್ಲ. ಸೂರ್ಯ ಹುಟ್ಟಿ ಮುಳುಗುವುದು ಎಷ್ಟು ಸತ್ಯವೋ, ನಿಮ್ಮ ಪಕ್ಷ ಅಧಿಕಾರದಿಂದ ಕೆಳಗಿಳಿಯುವುದು ಅಷ್ಟೇ ಸತ್ಯ ಎಂದರು.

ನಮ್ಮ ನಾಯಕರು ಏನು ಮಾಡಿದ್ದಾರೆ ಎಂದು ದೆಹಲಿಯಲ್ಲಿ ಅವರನ್ನು ಎಳೆದುಕೊಂಡು ಹೋಗುತ್ತಿದ್ದೀರಿ? ಡಿ.ಕೆ ಸುರೇಶ್, ದಿನೇಶ್ ಗುಂಡೂರಾವ್, ಶ್ರೀನಿವಾಸ್, ಹೆಚ್.ಕೆ ಪಾಟೀಲ್, ಚಿದಂಬರಂ, ವೇಣುಗೋಪಾಲ್ ಅವರನ್ನು ದನಗಳನ್ನು ಎಳೆದುಕೊಂಡು ಹೋಗುವಂತೆ ಎಳೆದುಕೊಂಡು ಹೋಗುತ್ತಿದ್ದೀರಿ. ಇದು ಬಿಜೆಪಿಯ ದುರಾಡಳಿತ. ನಿಮಗೆ ತಾಕತ್ತಿದ್ದರೆ ಕಾನೂನುಬದ್ಧ ಹೋರಾಟ ಮಾಡಿ, ಅದನ್ನು ಎದುರಿಸಲು ನಾವು ಸಿದ್ಧವಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬೂಟು ನೆಕ್ಕುವ ಕಲ್ಚರ್ ಇರೋದು ಕಾಂಗ್ರೆಸ್‌ನಲ್ಲಿ: ಬಿ.ವಿ ಶ್ರೀನಿವಾಸ್‌ಗೆ ಸಿ.ಟಿ ರವಿ ಟಾಂಗ್

bjP

ಸರ್ಕಾರದ ಈ ನಡೆ ವಿರುದ್ಧ ಪಕ್ಷದ ಕಚೇರಿಯಿಂದ ರಾಜಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಡಿದ್ದು ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ನೀವು ಜೈಲಿಗಾದರೂ ಹಾಕಿ, ಎಷ್ಟು ಕೇಸಾದರೂ ಹಾಕಿ. ನಾವು ಹೆದರುವುದಿಲ್ಲ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.

ನಾವು ನಮ್ಮ ನೀರು ಹಾಗೂ ನಮ್ಮ ಹಕ್ಕಿನ ವಿಚಾರ, ರೈತರ ವಿಚಾರಕ್ಕೆ ಹೋರಾಟ ಮಾಡಿದ್ದಕ್ಕೆ ನಮ್ಮ ಮೇಲೆ ಕೇಸ್ ದಾಖಲಿಸಿದ್ದಾರೆ. ಇಂದು ನಾವು 20 ಜನ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದು ಬಂದಿದ್ದೇವೆ. ಬಿಜೆಪಿಯವರು ಅನೇಕ ಬಾರಿ ಕಾನೂನು ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಯಂಗ್ ಇಂಡಿಯಾ ಸಂಸ್ಥೆ ಕಾರ್ಯಕರ್ತರ ಸಂಸ್ಥೆಗಳು, ನಮ್ಮ ನಾಯಕರು ಅದರ ಟ್ರಸ್ಟಿಗಳಾಗಿದ್ದಾರೆ. ನಮ್ಮ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಲು ನೀವು ಎಷ್ಟೇ ಪ್ರಯತ್ನಿಸಿದರೂ ನಾವು ಕುಗ್ಗುವುದಿಲ್ಲ. ಜನರೇ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Live Tv

Share This Article
Leave a Comment

Leave a Reply

Your email address will not be published. Required fields are marked *