ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

Public TV
1 Min Read

ನವದೆಹಲಿ: ಪಂಜಾಬ್‍ನ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿರುವ ಸತೀಂದರ್‌ಜೀತ್ ಸಿಂಗ್ ಅಲಿಯಾಸ್‌ ಗೋಲ್ಡೀ ಬ್ರಾರ್ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

ಸಿಧು ಮೂಸೆವಾಲ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾಗಿಲ್ಲ. ಬದಲಾಗಿ ಈ ಹಿಂದೆ ನಡೆದ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿಯಾಗಿದೆ. ಸಿಧು ಮೂಸೆವಾಲ ಹತ್ಯೆಯ ನಂತರ ಈ ಕೃತ್ಯವನ್ನು ನಾವು ನಡೆಸಿದ್ದೇವೆ ಎಂದು ಗೋಲ್ಡೀ ಬ್ರಾರ್ ಹೇಳಿಕೊಂಡಿದ್ದ.

ನೋಟಿಸ್‌ ಯಾಕೆ?
2020ರ ನವೆಂಬರ್‌ 11 ರಂದು ಫರೀದಾಕೋಟ್‌ನ ಕಟಾರಿಯಾ ಪೆಟ್ರೋಲ್ ಪಂಪ್ ಬಳಿ ಶೂಟೌಟ್‌ ನಡೆದಿತ್ತು. 2021ರ ಫೆಬ್ರವರಿ 18ರಂದು ಫರೀದಾಕೋಟ್‌ನಲ್ಲಿ ಹತ್ಯೆ ನಡೆದಿತ್ತು. ಈ ಎರಡು ಪ್ರಕರಣದ ತನಿಖೆ ನಡೆದು ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಎರಡೂ ಪ್ರಕರಣದಲ್ಲಿ ಆರೋಪಿಯಾಗಿರುವ ಗೋಲ್ಡೀ ಬ್ರಾರ್ ವಿರುದ್ಧ ಈಗ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾಗಿದೆ.

ಪಂಜಾಬ್‌ ಪೊಲೀಸರು ಸಿಧು ಹತ್ಯೆಯಾಗುವ 10 ದಿನದ ಮೊದಲೇ ಸಿಬಿಐಗೆ ಪತ್ರ ಬರೆದಿದ್ದರು. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಸಿಬಿಐ ಇಂಟರ್‌ಪೋಲ್‌ ಕೇಂದ್ರ ಕಚೇರಿ ಲಿಯಾನ್‌ಗೆ ಜೂನ್‌ 3 ರಂದು ಕಳುಹಿಸಿತ್ತು. ಈಗ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

ಗೋಲ್ಡೀ ಬ್ರಾರ್ ಶ್ರೀಮುಕ್ತ್ಸರ್ ಸಾಹೀಬ್ ನ ಮೂಲದವನಾಗಿದ್ದು, 2017 ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಕೆನಡಾಗೆ ತೆರಳಿದ್ದ ಈತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಸದಸ್ಯನಾಗಿದ್ದಾನೆ.

ಏನಿದು ರೆಡ್‌ ಕಾರ್ನರ್‌ನೋಟಿಸ್‌?
ಇಂಟರ್‌ ಪೋಲ್‌ ತನ್ನ 192 ಸದಸ್ಯ ರಾಷ್ಟ್ರಗಳಿಗೆ ಆರೋಪಿ ತಮ್ಮ ದೇಶದಲ್ಲಿ ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸೂಚಿಸುವ ಆದೇಶವೇ ರೆಡ್‌ ಕಾರ್ನರ್‌ ನೋಟಿಸ್‌. ಚಾರ್ಜ್‌ಶೀಟ್‌ ಸಲ್ಲಿಕೆಯಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪರಾರಿಯಾಗಿರುವ ಆರೋಪಿಗಳ ಇತರ ದೇಶಗಳಿಗೆ ಎಚ್ಚರಿಸುವುದು ರೆಡ್ ಕಾರ್ನರ್ ನೋಟಿಸ್‌ ನೀಡುವುದರ ಉದ್ದೇಶ.

ಈ ನೋಟಿಸ್‌ ಜಾರಿಯಾದ ಬಳಿಕ ಆರೋಪಿಗಳು ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಯಾಣಿಸುವುದು ಅಸಾಧ್ಯವಾಗಲಿದೆ. ಬಂಧನದ ಬಳಿಕ ಆ ದೇಶದಿಂದ ಆರೋಪಿಗಳನ್ನು ಇನ್ನೊಂದು ದೇಶಕ್ಕೆ ಕಳುಹಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *