ವೈರಲ್ ಆಯ್ತು ಅಪ್ಪನ ಜೊತೆಗಿನ ಸಿದ್ದಾರ್ಥ್ ಫೋಟೋ

Public TV
3 Min Read

-ಎಸ್ಟೇಟ್‍ನಲ್ಲಿ ನೀರವ ಮೌನ
-ಸಾವಿನ ಸುತ್ತ 10 ಅನುಮಾನದ ಹುತ್ತ

ಚಿಕ್ಕಮಗಳೂರು: ಕಾಫಿ ಡೇ ಮಾಲೀಕ, ಸಾವಿರಾರು ಕೋಟಿ ಒಡೆಯ ವಿ.ಜಿ.ಸಿದ್ದಾರ್ಥ್ ಸಾವಿನಿಂದ ಚಿಕ್ಕಮಗಳೂರಿನಲ್ಲಿರುವ ಸಿದ್ದಾರ್ಥ್ ಅವರ ಚೇತನಹಳ್ಳಿ ಎಸ್ಟೇಟ್‍ನಲ್ಲಿ ನೀರವ ಮೌನ ಆವರಿಸಿದೆ.

ಈ ಮಧ್ಯೆ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿರುವ ಅಪ್ಪ ಗಂಗಯ್ಯ ಹೆಗ್ಡೆ ಅವರ ಜೊತೆಗಿನ ಕೊನೆಯ ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ಅವರ ತಂದೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು, ಪಕ್ಕದಲ್ಲಿ ಅಪ್ಪ ತಮ್ಮೊಂದಿಗೆ ಮಾತನಾಡುತ್ತಿಲ್ಲ ಎಂದು ಚಿಂತೆಯಿಂದ ಸಿದ್ದಾರ್ಥ್ ಕೂತಿರುವಂತೆ ಕಾಣುತ್ತಿದೆ. ಈ ಫೋಟೋ ಎಲ್ಲರ ಮನಕಲಕುತ್ತಿದೆ.

ಸಿದ್ದಾರ್ಥ್ ಅವರ ಕಾಫಿ ಎಸ್ಟೇಟ್ ಮನೆಯಲ್ಲಿ ನೀರವ ಮೌನ ಅವರಿಸಿದ್ದು, ಪ್ರತಿದಿನ ಕಾರ್ಮಿಕರಿಂದ ತುಂಬಿರುತ್ತಿದ್ದ ಎಸ್ಟೇಟ್‍ನಲ್ಲಿ ಮೌನ ಆವರಿಸಿದೆ. ಕಾರ್ಮಿಕರನ್ನು ಕೆಲಸಗಾರರಂತೆ ನೋಡದೆ ತಮ್ಮ ಮನೆಯ ಸದಸ್ಯರಂತೆ ಕಾಣುತ್ತಿದ್ದ ಮಾಲೀಕ ಅನ್ನದಾತ ಇಲ್ಲವೆಂಬುವುದನ್ನು ಕಲ್ಪನೆ ಮಾಡಲು ಸಾಧ್ಯವಾಗುತ್ತಿಲ್ಲ. ಕುಟುಂಬ ಸದಸ್ಯರು ಇಂದು ಹಾಗೂ ನಾಳೆ ಎಲ್ಲಾ ಕಾರ್ಮಿಕರಿಗೆ ರಜೆ ನೀಡಿದ್ದಾರೆ. ಕುಟುಂಬ ಸದ್ಯಸರು ಮಾತ್ರ ಮನೆಯಲ್ಲಿದ್ದಾರೆ.

ಹಿಂದೂ ಸಂಪ್ರದಾಯದಂತೆ ಸಿದ್ದಾರ್ಥ್ ಅವರ ಅಸ್ಥಿಗಳನ್ನು ಇಂದು ಮುಂಜಾನೆ ಕುಟುಂಬ ಕೆಲ ಸದಸ್ಯರು ಸಂಗ್ರಹಿಸಿದರು. ಶುಕ್ರವಾರ ಅಸ್ಥಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಸಿದ್ದಾರ್ಥ್ ಅವರ ತಾಯಿ ವಾಸಂತಿ ಮತ್ತು ಪತ್ನಿ ಮಾಲವಿಕ ಹಾಗೂ ಪುತ್ರ ಮನೆಯಲ್ಲಿದ್ದಾರೆ. ಮುಂದಿನ ಕಾರ್ಯಕ್ರಮಗಳ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಲಿದ್ದಾರೆ.

ಸಿದ್ಧಾರ್ಥ್ ತಂದೆ:
ಸಿದ್ಧಾರ್ಥ್ ಅವರ ತಂದೆ ಗಂಗಯ್ಯ ಹೆಗಡೆ ಅವರು ಕೋಮಾ ಪರಿಸ್ಥಿತಿಯಲ್ಲಿದ್ದು, ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗಯ್ಯ ಹೆಗಡೆ ದಾಖಲಾತಿಯನ್ನು ಆಸ್ಪತ್ರೆ ಸಿಬ್ಬಂದಿ ಗೌಪ್ಯವಾಗಿಟ್ಟಿದ್ದರು. ಗೋಪಾಲಗೌಡ ಆಸ್ಪತ್ರೆ ಮಾಲೀಕ ಸಂತೃಪ್ತ ಹೆಗ್ಡೆ ಅವರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಸಂಬಂಧಿ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಹಾಗೂ ಸಾರ್ವಜನಿಕರಿಗೆ ಸಿದ್ಧಾರ್ಥ್ ತಂದೆ ಕುರಿತು ಮಾಹಿತಿ ನೀಡದೇ ಗೌಪ್ಯವಾಗಿ ಇಟ್ಟಿದ್ದರು.

ಈ ಬಗ್ಗೆ ಆಸ್ಪತ್ರೆಯಲ್ಲಿ ಮಾಹಿತಿ ವಿಚಾರಿಸಿದಾಗ ಗಂಗಯ್ಯ ಹೆಗಡೆ ಅವರು ಭಾನುವಾರವೇ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ಸದ್ಯ ಗಂಗಯ್ಯ ಅವರಿಗೆ ಆಸ್ಪತ್ರೆ ಸಿಬ್ಬಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಗಂಗಯ್ಯ ಹೆಗಡೆ ಅವರು ಸಿದ್ದಾರ್ಥ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿದು ಬಂದಿತ್ತು.

ಸಿದ್ದಾರ್ಥ್ ಸಾವಿನ ಸುತ್ತ 10 ಅನುಮಾನ:
ಕಾಫಿ ಡೇ ಮಾಲೀಕ, ಸಾವಿರಾರು ಕೋಟಿ ಒಡೆಯ ವಿ.ಜಿ.ಸಿದ್ದಾರ್ಥ್ ದುರಂತ ಸಾವು ಅಚ್ಚರಿನ ಜೊತೆಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿದ್ದಾರ್ಥ ಸಾವು ಆಕಸ್ಮಿಕವೋ, ಆತ್ಮಹತ್ಯೆಯೋ ಅನ್ನುವ ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದು, ತನಿಖೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಬೆಂಗಳೂರಿಗೂ ಒಂದು ತಂಡ ಬಂದೋಗಿದೆ.

ಸಿದ್ದಾರ್ಥ್ ಸಾವಿನ ಸುತ್ತ 10 ಅನುಮಾನದ ಹುತ್ತ
ಅನುಮಾನ 1: ಸಿದ್ದಾರ್ಥ್ ಧರಿಸಿದ್ದರು ಎನ್ನಲಾದ ಟೀಶರ್ಟ್ ನಾಪತ್ತೆ ಯಾಕೆ?
ಅನುಮಾನ 2: ಪ್ಯಾಂಟ್, ಜೇಬ್‍ನಲ್ಲಿದ್ದ ಮೊಬೈಲ್ ಯಾಕೆ ನಾಪತ್ತೆಯಾಗಿಲ್ಲ?
ಅನುಮಾನ 3: ಮೃತದೇಹ 35 ಗಂಟೆ ನೀರಲ್ಲೇ ಇದ್ದರೂ ಯಾಕೆ ಊದಿಕೊಂಡಿಲ್ಲ, ಕೊಳೆಯಲಿಲ್ಲ?
ಅನುಮಾನ 4: ಮೃತದೇಹ 35 ಗಂಟೆ ನೀರಲ್ಲೇ ಇದ್ದು, ದಡ ಸೇರಿದಾಗ ಮುಖದಲ್ಲಿ ರಕ್ತದ ಕಲೆಗಳು ಹೇಗೆ ಉಳಿದುಕೊಂಡವು?
ಅನುಮಾನ 5: ನೀರಲ್ಲೇ ಇದ್ದ ಮೃತದೇಹದಲ್ಲಿದ್ದ ರಕ್ತದ ಕಲೆಗಳು ಹಸಿ ಹಸಿಯಾಗಿಯೇ ಇದ್ದದ್ದು ಹೇಗೆ?
ಅನುಮಾನ 6: ಟೀಶರ್ಟ್ ನಾಪತ್ತೆಯಾಗಿದ್ರೆ ಕಾಲಿನಲ್ಲಿದ್ದ ಶೂ ಯಾಕೆ ಕಾಲಲ್ಲೇ ಉಳಿದಿತ್ತು.
ಅನುಮಾನ 7: ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಿದ್ದರೆ ಬೆಂಗಳೂರಿನಿಂದ ಮಂಗಳೂರಿನ ನೇತ್ರಾವತಿ ನದಿಯನ್ನೇ ಯಾಕೆ ಆಯ್ಕೆ ಮಾಡಿಕೊಂಡ್ರು?
ಅನುಮಾನ 8: ವಾಹನಗಳು, ಜನ ಓಡಾಡುವ ಸೇತುವೆಯಲ್ಲಿ ಸಂಜೆ 7 ಗಂಟೆಗೆ ಅದೇಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು?
ಅನುಮಾನ 9: ದೊಡ್ಡ ಮಟ್ಟದ ಶೋಧ ಕಾರ್ಯ ನಡೆದಾಗಲೂ ಸಿಗದ ಮೃತದೇಹ, ಮೀನುಗಾರರಿಗೇ ಹೇಗೆ ಸಿಕ್ತು?
ಅನುಮಾನ 10: ಯಾವಾಗ್ಲೂ ಜೊತೆಗಿರುತ್ತಿದ್ದ ಗನ್‍ಮ್ಯಾನ್ ಆ ದಿನ ಮಾತ್ರ ಯಾಕೆ ಇರಲಿಲ್ಲ?

https://www.youtube.com/watch?v=7JQjQIj9a1Y

Share This Article
Leave a Comment

Leave a Reply

Your email address will not be published. Required fields are marked *