ವಿರೋಧ ಪಕ್ಷದಲ್ಲಿ ಕೂರಿಸೋದಕ್ಕೆ ಜನ ನಿಮಗೆ ಮತ ಹಾಕಿದ್ದು: ಬಿಎಸ್‍ವೈಗೆ ಸಿದ್ದರಾಮಯ್ಯ ಟಾಂಗ್

Public TV
2 Min Read

ಮಂಡ್ಯ: ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲಿ ಅಂತಾ ಜನ ನಿಮಗೆ ಮತ ಹಾಕಿದ್ದಾರೆ. ರಾಜ್ಯ ಜನರು ನಿಮ್ಮನ್ನ 113 ಕ್ಷೇತ್ರದ ಜನ ಗೆಲ್ಲಿಸಿಲ್ಲ. ಹೀಗಾಗಿ ನೀವು ಗಂಭೀರವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಕನಕ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ, ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ, ಹಣ, ಅಧಿಕಾರ ಆಮಿಷ ಒಡ್ಡುತ್ತಿದ್ದಾರೆ. ವಿಪಕ್ಷ ನಾಯಕರಾಗಿ ಇರುವುದನ್ನು ಬಿಟ್ಟು ಬಿ.ಎಸ್.ಯಡಿಯೂರಪ್ಪ ಅವರು ಹಿಂಬಾಗಿಲಿನಿಂದ ಮುಖ್ಯಮಂತ್ರಿ ಆಗಬೇಕು ಅಂದುಕೊಂಡಿದ್ದಾರೆ. ಯಡ್ಡಿಯೂರಪ್ಪ ಅವರೇ ನೀವು ಎರಡೂವರೆ ದಿನ ಸಿಎಂ ಆಗಿದ್ದೀರಿ, ಈಗ ಸುಮ್ಮನಿರಬೇಕು ಎಂದು ವ್ಯಂಗ್ಯವಾಡಿದರು.

ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಯಾವುದೇ ಜಾತಿಗೆ ಸೇರಿದ ಮನುಷ್ಯರಲ್ಲಿ ಹರಿಯುವುದು ಒಂದೇ ರಕ್ತ. ನಾವು ಸಾವು ಬದುಕಿನ ಮಧ್ಯೆ ಹೋರಾಡುವಾಗ ಯಾವುದೇ ಜಾತಿಯ ವ್ಯಕ್ತಿಯ ರಕ್ತ ಸಿಕ್ಕರೂ ಹಾಕಿಸಿಕೊಂಡು ಬದುಕುತ್ತೇವೆ. ಆದರೆ ಬಿಜೆಪಿಯವರು ಇದನ್ನು ಮರೆತು ಕೋಮುವಾದಿ ಧೋರಣೆ ತೋರುತ್ತಿದ್ದಾರೆ. ಇದೇ ಕಾರಣಕ್ಕೆ ನಾವು ಸಮ್ಮಿಶ್ರ ಸರ್ಕಾರ ರಚಿಸಿ, ಅವರನ್ನು ದೂರ ಇಟ್ಟಿದ್ದು ಎಂದು ಹೇಳಿದರು.

ನಾನು ಅಹಿಂದ ಪರವಾಗಿರುವುದು ನಿಜ. ಶೋಷಿತರ ಪರ ಧ್ವನಿಯಾಗುವುದು ನಿಲ್ಲುವುದು ನನ್ನ ಕರ್ತವ್ಯ. ಆದರೆ ಅಹಿಂದ ಪರ ಕೆಲಸ ಮಾಡುತ್ತಾರೆ ಎನ್ನುವುದು ಆರೋಪ ಸಲ್ಲದು. ನನ್ನ ಅಧಿಕಾರಿ ಅವಧಿಯಲ್ಲಿ ಎಲ್ಲಾ ಸಮುದಾಯದ ದಾರ್ಶನಿಕರ ಜಯಂತಿಗೆ ಒತ್ತು ನೀಡಿದ್ದೇನೆ. ಬಸವಣ್ಣ, ಕೆಂಪೇಗೌಡ ಜಯಂತಿಯನ್ನೂ ಜಾರಿಗೆ ತಂದಿದ್ದೇನೆ. ಜಾತಿವಾರು ಜನಗಣತಿ ಉದ್ದೇಶ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ಒದಗಿಸುವುದು. ಈಗಾಗಲೇ ವರದಿ ಸಿದ್ಧವಾಗಿದೆ ಎಂದರು.

ಕನಕಭವನ ಕೇವಲ ಮದುವೆ ಕಾರ್ಯಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಬಾಡಿಗೆ ನೀಡಿ. ಬಡ ಕುಟುಂಬಗಳ ಮದುವೆಗೆ ರಿಯಾಯ್ತಿ ದರದಲ್ಲಿ ಬಾಡಿಗೆ ನೀಡುವಂತಾಗಲಿ. ನಾನು ಸಿಎಂ ಆಗಿದ್ದಾಗ ಎಲ್ಲ ಸಮುದಾಯದ ಸಮುದಾಯ ಭವನ ನಿರ್ಮಾಣಕ್ಕೆ ಹಣ ನೀಡಿದ್ದೇನೆ. ಇನ್ನು ಬಾಕಿ ಇರುವ ಸಮುದಾಯ ಭವನಗಳ ನಿರ್ಮಾಣಕ್ಕೆ ಇಲಾಖೆಯಿಂದ ಹಣ ಕೊಡಿಸುವಂತೆ ಸಚಿವ ಪುಟ್ಟರಂಗಶೆಟ್ಟಿ ಹೇಳಿರುವೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *