ನಾನು ಮತ್ತೆ ಸಿಎಂ ಆಗ್ತೀನಿ- ಕಾಂಗ್ರೆಸ್ಸಿನಲ್ಲಿ ಮತ್ತೆ ಬಣ ರಾಜಕೀಯ: ಯಾರು ಏನು ಹೇಳಿದ್ರು?

Public TV
2 Min Read

ಬೆಂಗಳೂರು: ಕುಮಾರಸ್ವಾಮಿ ಸರ್ಕಾರ 100 ದಿನ ಪೂರೈಸಿದ ಬೆನ್ನಲ್ಲೆ ಕೆಲ ಕೈ ಶಾಸಕರು ಬೆಂಬಲವನ್ನು ವಾಪಸ್ ಪಡೆಯುತ್ತಾರೆ ಎನ್ನುವ ವದಂತಿಯ ಹರಿದಾಡುತ್ತಿದ್ದು, ಈಗ ಮಾಜಿ ಸಿಎಂ ಸಿದ್ದರಾಮಯ್ಯ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಮಾಜಿ ಸಿಎಂ ಪರವಾಗಿ ಹೇಳಿಕೆ ನೀಡಿದರೆ ಡಿಕೆಶಿವಕುಮಾರ್ ಅವರು ಟಾಂಗ್ ನೀಡಿ ಪ್ರತಿಕ್ರಿಯಿಸಿದ್ದಾರೆ.

ಯಾರು ಏನು ಹೇಳಿದ್ದಾರೆ?
ದುಷ್ಟರು ಆರಂಭದ ಯುದ್ಧದಲ್ಲಿ ಗೆಲ್ಲಬಹುದು. ಆದರೆ ಅಂತಿಮ ಯುದ್ಧದಲ್ಲಿ ಅಲ್ಲ. ನೀವು ಜನನಾಯಕನಾಗಿರುವ ಕಾರಣ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದೀರಿ. ಬಂಡೆಕಲ್ಲಿನಂತೆ ನಾವು ನಿಮ್ಮ ಜೊತೆ ಇದ್ದೇವೆ ಎಂದು ಸುಧಾಕರ್ ಅವರು ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಅಧಿಕಾರ ಪಡೆಯಬೇಕು ಎನ್ನುವ ಆಸೆ ಇರಬಹುದು. ಆದರೆ ಎಲ್ಲದಕ್ಕೂ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಸಮ್ಮಿಶ್ರ ಸರ್ಕಾರ ಬರಲು ಎಐಐಸಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲ ಮುಖಂಡರ ಜೊತೆ ಚರ್ಚಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿಯೇ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.

ನೀವೇ ಸಿಎಂ ಸ್ಥಾನ ತೆಗೆದುಕೊಳ್ಳಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದರು. ಆದರೆ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕಿದೆ. ಹೀಗಾಗಿ ನಿಮ್ಮವರೇ ಮುಖ್ಯಮಂತ್ರಿಯಾಗಲಿ ಅಂತಾ ನಾವು ಮಾತು ಕೊಟ್ಟಿದ್ದೇವು. ಈಗ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಗೊಂದಲ ಬೇಡ, ಅವರು ಕಾರ್ಯಕರ್ತರಿಗೆ ಧೈರ್ಯ ಹೇಳುವ ಕೆಲಸ ಮಾಡಿರಬಹುದು ಅಷ್ಟೇ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ, ನನಗೆ ಸಂತೋಷವಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಖ ತಿರುಗಿಸಿ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಸಿಎಂ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮಗಳ ಪ್ರಶ್ನಿಸುತ್ತಿದ್ದಂತೆ ಸ್ಥಳದಿಂದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎನ್ನುವುದಕ್ಕೆ ನನ್ನ ಬೆಂಬಲವಿದೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಳಗಿಳಿಸಿ ಅವರು ಸಿಎಂ ಆಗುವುದಿಲ್ಲ. ನಾನು ಮತ್ತು ಸಿದ್ದರಾಮಯ್ಯ 30 ವರ್ಷಗಳಿಂದ ಸ್ನೇಹಿತರು. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರ ಹೇಳಿಕೆ ಬಗ್ಗೆ ಗೊಂದಲ ಮೂಡಿಸದೇ ಸಮ್ಮಿಶ್ರ ಸರ್ಕಾರ ನಡೆಸುವುದಕ್ಕೆ ಬಿಡಿ ಎಂದು ಮಾಧ್ಯಮಗಳ ಮೇಲೆಯೇ ಕಂದಾಯ ಸಚಿವ ಆರ್‍ವಿ. ದೇಶಪಾಂಡೆ ಗರಂ ಆದರು.

ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಯಾವ ಸಂದರ್ಭದಲ್ಲಿ ಹೇಳಿರುವರೋ ಗೊತ್ತಿಲ್ಲ. ಸಿಎಂ ಸ್ಥಾನವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಗಾಳಿ ಸುದ್ದಿ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದರು.

ಸರ್ಕಾರ ಬರುವುದು, ಹೋಗುವುದು ನಿರಂತರ ಪ್ರಕ್ರಿಯೆ. ಹೀಗಾಗಿ ಮುಂದೆ ಮತ್ತೆ ಆಗುತ್ತೇನೆ ಅಂತಾ ಹೇಳಿರಬಹುದು. ಆದರೆ ಅವರ ಹೇಳಿಕೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಅವರು ಮುಂದೆ ಸಿಎಂ ಆಗಲೂಬಹುದು ಎಂದು ಅರಣ್ಯ ಸಚಿವ ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *