– ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ವಿರೋಧ
– ಮೈತ್ರಿ ಸರ್ಕಾರದ ವಿರುದ್ಧವೇ ಮಾಜಿ ಸಿಎಂ ಗುಡುಗು
– ಪೊಲೀಸರ ಬಗ್ಗೆ ಜೋಕ್ ಮಾಡಿದ ಸಿದ್ದರಾಮಯ್ಯ
ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ನನ್ನ ವಿರೋಧವಿದೆ. ನಾನು ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ರಾಜಿ ಆಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ನೃಪತುಂಗ ಕಲಾ-ವಾಣಿಜ್ಯ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಾವು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಿಕೊಂಡಿದ್ದೇವೆ. ಅದರಲ್ಲಿ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಯ ವಿಚಾರವಿಲ್ಲ. ಆದ್ದರಿಂದ ಸಿಎಂ ಕುಮಾರಸ್ವಾಮಿ ಅವರ ಜೊತೆಗೆ ನಾನು ಮಾತನಾಡುತ್ತೇನೆ ಎಂದು ಮೈತ್ರಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪೋಷಕರಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಆರ್ಥಿಕವಾಗಿ ಹಿಂದುಳಿದವರೂ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿಯಲಿ ಎಂದು ಆಸೆ ಪಡುತ್ತಾರೆ. ಇಂಗ್ಲಿಷ್ ಅನ್ನು ಭಾಷೆಯನ್ನಾಗಿ ಕಲಿಯಲು ಯಾರ ವಿರೋಧವೂ ಇಲ್ಲ. ಆದರೆ ಇಂಗ್ಲಿಷ್ ಮಾಧ್ಯಮ ಬೇಡ ಎನ್ನುತ್ತಿದ್ದೇವೆ. ಈ ಬಗ್ಗೆ ಕೆಲವರಿಗೆ ಗೊಂದಲವಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ನಿರರ್ಗಳವಾಗಿ ಮಾತನಾಡಬಹುದೇ ಹೊರತು, ಅದು ಎಂದಿಗೂ ಹೃದಯದ ಭಾಷೆ ಆಗಲಾರದು ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದ್ದರಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಆಗಬೇಕಾದರೆ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗುತ್ತಲೇ ಇದೆ. ಜಾತಿ ಜಾತಿಗಳ ನಡುವೆ ಸಮಾನತೆ ಬಾರದೇ ಹೋದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಕೆಳ ಜಾತಿಗಳಿಗೆ ಸಾಮಾಜಿಕ, ಶೈಕ್ಷಣಿಕ ಸಮಾನತೆ ಸಿಕ್ಕರೆ ಜಾತಿ ವ್ಯವಸ್ಥೆ ಕ್ರಮೇಣವಾಗಿ ಕಡಿಮೆಯಾಗುಗುತ್ತದೆ ಎಂದು ಅಭಿಪ್ರಾಯ ತಿಳಿಸಿದರು.
ನನ್ನನ್ನು ಲಿಂಗಾಯತ ವಿರೋಧಿ ಎನ್ನುತ್ತಾರೆ. ಬಸವಣ್ಣ ಹೇಳಿರುವುದನ್ನು ನಾನು ಹೇಳಿದ್ದೇನೆ. ವಿರಕ್ತ ಪರಂಪರೆಯವರು ಬಂದು ಲಿಂಗಾಯತ ಧರ್ಮ ಮಾಡಿ ಎಂದು ಕೇಳಿಕೊಂಡಿದ್ದರು. ಗುರು ಪರಂಪರೆಯವರು ವೀರಶೈವ ಲಿಂಗಾಯತ ಎಂದು ಮಾಡಿ ಎಂದಿದ್ದರು. ಈ ಕುರಿತು ಕ್ಯಾಬಿನೆಟ್‍ನಲ್ಲಿ ಚರ್ಚಿಸಿ, ತಿದ್ದುಪಡಿ ಮಾಡಿ ಕಳುಹಿಸಿದ್ದೇವೆ. ಆದರೆ ನನಗೆ ಯಾಕೆ ಲಿಂಗಾಯತ ವಿರೋಧಿ ಅಂತ ಪಟ್ಟ ಕಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಪೊಲೀಸರು ಹೊರಗಡೆ ಒಂದು ರೀತಿಯಲ್ಲಿ ಮಾತನಾಡುತ್ತಾರೆ. ಠಾಣೆಗೆ ಹೋದರೆ ಒಂದು ರೀತಿಯಲ್ಲಿ ಮಾತನಾಡುತ್ತಾರೆ. ಅವರನ್ನು ನಂಬುವುದಕ್ಕೆ ಆಗುವುದಿಲ್ಲ. ಒಳ್ಳೆಯ ಭಾಷೆ ಮಾತನಾಡುವ ಪೊಲೀಸರ ಸಂಖ್ಯೆ ಕಡಿಮೆ. ಒಳ್ಳೆಯ ಭಾಷೆಯಲ್ಲಿ ಮಾತನಾಡಿದರೆ ಕೆಲಸ ಆಗಲ್ಲ ಅಂತ ಕೆಟ್ಟ ಭಾಷೆಯಲ್ಲಿ ಮಾತನಾಡಬೇಕು ಎಂದು ಟ್ರೈನಪ್ ಆಗಿಬಿಟ್ಟಿದ್ದಾರೋ ಏನೋ? ಹಿಂದೆ ಪೊಲೀಸರು ಹೊಡೆಯುತ್ತಿದ್ದರು. ಈಗ ಅದು ಕಡಿಮೆಯಾಗಿದೆ, ಪೊಲೀಸರು ಬದಲಾಗಿಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಹಾಸ್ಯ ಚಟಾಕಿ ಹಾರಿಸಿದರು.