ನಾವು ಮತ್ತೆ ಅಧಿಕಾರಕ್ಕೆ ಬಂದ್ರೆ 7 ಕೆಜಿ ಅಲ್ಲ, ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ: ಸಿದ್ದು

Public TV
2 Min Read

ಬೆಳಗಾವಿ: 2023ಕ್ಕೆ ಜನರು ಆಶೀರ್ವಾದ ಮಾಡಿದರೆ, ನಾವು ಮತ್ತೆ ಅಧಿಕಾರಕ್ಕೆ ಬಂದರೆ 7 ಕೆಜಿ ಅಲ್ಲ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.

ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಮಾಡಿದ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಹದಿನೈದು ಲಕ್ಷ ಮನೆಗಳನ್ನ ಕಟ್ಟಿಸಿದ್ದೇನೆ. ಬಸವಣ್ಣನವರ ಜಯಂತಿ ದಿನ ಪ್ರಮಾಣ ವಚನ ಸ್ವೀಕರಿಸಿ ಜನರ ಭರವಸೆ ಈಡೇರಿಸಿದ್ದೇನೆ. ಸಾಕಷ್ಟು ಭಾಗ್ಯಗಳನ್ನು ಕೊಟ್ಟಿದ್ದೇನೆ. 2023ಕ್ಕೆ ಮತ್ತೆ ನಾವು ಅಧಿಕಾರಕ್ಕೆ ಬಂದರೆ 7 ಕೆಜಿ ಅಲ್ಲ ತಲಾ 10 ಕೆಜಿ ಕೊಡುತ್ತೇವೆ ಎಂದರು.

ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಏನೂ ಇಲ್ಲ, ಸತ್ತೋಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಆಯ್ಕೆ ಆಗಿಲ್ಲ, ಅವರನ್ನು ನೇಮಕ ಮಾಡಲಾಗಿದೆ. ಆರ್‍ಎಸ್‍ಎಸ್‍ನವರು ಮುಖ್ಯಮಂತ್ರಿ ಮಾಡಿದ್ದಾರೆ. ಅವರು ಹೇಳಿದ್ದನ್ನ ಕೇಳುತ್ತಾರೆ. ಇಂತಹ ಸರ್ಕಾರ ಇರಬೇಕಾ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಪಿಎಸ್‍ಐ ನೇಮಕಾತಿಯಲ್ಲಿ 300 ಕೋಟಿ ಹೊಡೆದಿದ್ದಾರೆ. ಇಂತಹ ಬಿಜೆಪಿ ಸರ್ಕಾರ ಇರಬೇಕಾ? ಯಾವ ಕಾರಣಕ್ಕೆ ಇರಬೇಕು? ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ಇದನ್ನು ಬೇರು ಸಹಿತ ಕಿತ್ತು ಒಗೆಯಬೇಕು. ಈ ಸರ್ಕಾರ ಏನೂ ಮಾಡಲ್ಲ. ಘೇಂಡಾಮೃಗದ ದಪ್ಪ ಚರ್ಮದಂತ ಸರ್ಕಾರ ಇದು. ಇಂತಹ ಕೆಟ್ಟ, ಭ್ರಷ್ಟ, ಜನವಿರೋಧಿ ಸರ್ಕಾರವನ್ನು ನಾನು ಯಾವ ಕಾಲದಲ್ಲೂ ನೋಡಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಎಲ್ಲಾ ಮಾಡೋಣ. ದಯಮಾಡಿ ಕೈಜೋಡಿಸಿ ಪ್ರಾರ್ಥನೆ ಮಾಡ್ತೇನೆ ಕಾಂಗ್ರೆಸ್‍ಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಜನವಿರೋಧಿ ಸರ್ಕಾರವಿದೆ. ರಾಜ್ಯ ಮತ್ತು ನಾವು ಉಳಿಯಲಿಕ್ಕೆ ಬಿಜೆಪಿ ಸರ್ಕಾರವನ್ನು ತೊಲಗಿಸಬೇಕು. ಹೀಗಾಗಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಒಳ್ಳೆಯ ನಿರ್ಧಾರ ಮಾಡಿ ಎಂದು ಜನತೆಗೆ ಹೇಳಿದರು.

ನಾನು ಬಹಳ ಸಂತೋಷದಿಂದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಮಾಡಿದ್ದೇನೆ. ಸಂಗೊಳ್ಳಿ ರಾಯಣ್ಣ ಆಕಸ್ಮಿಕವಾಗಿ ಕುರುಬರ ಜಾತಿಯಲ್ಲಿ ಹುಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣ ಅವರಿಗೆ ದೇಶಪ್ರೇಮ, ನಾಡಿನ ಪ್ರೇಮ ಹೆಚ್ಚಿತ್ತು. ಹೀಗಾಗಿ ಅವರು ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ನಾವೆಲ್ಲರೂ ದೇಶಭಕ್ತಿ ಮನೋಭಾವ ಬೆಳೆಸಿಕೊಳ್ಳಬೇಕು. ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *