ಬಿಎಸ್‌ವೈಗೆ ಎಷ್ಟು ನಾಲಿಗೆ ಇದೆ?, ಟಿಪ್ಪು ಹೈದರಾಲಿ ಇಲ್ಲದ ಚರಿತ್ರೆ ಅಪೂರ್ಣ- ಸಿದ್ದರಾಮಯ್ಯ

Public TV
2 Min Read

ಉಡುಪಿ: ಪ್ರಧಾನಿ ಮೋದಿ ಒಬ್ಬ ಮಹಾನ್ ಸುಳ್ಳುಗಾರ. ಸಿಎಂ ಯಡಿಯೂರಪ್ಪಗೆ ಎಷ್ಟು ನಾಲಿಗೆ ಇದೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ನಡೆದ ಗಾಂಧೀಜಿ 150ರ ಸಮಾವೇಶಲ್ಲಿ ಮಾತನಾಡಿದ ಅವರು, ಹಲವಾರು ವಿಚಾರ ಇಟ್ಟುಕೊಂಡು ಬಿಜೆಪಿಯ ನಾಯಕರ ಮೇಲೆ ಮಾತಿನ ಪ್ರಹಾರ ಮಾಡಿದರು.

ಟಿಪ್ಪು ಇಲ್ಲದೆ ಚರಿತ್ರೆ ಅಪೂರ್ಣ:
ಬಿಜೆಪಿಯವರು ಟಿಪ್ಪು ವಿಚಾರವನ್ನು ಪಠ್ಯಕ್ರಮದಿಂದ ತೆಗೆಯುತ್ತಾರೆ. ಇದರಿಂದ ಇತಿಹಾಸವೇ ಅಪೂರ್ಣ ಆಗುತ್ತೆ. ಟಿಪ್ಪು, ಹೈದರಾಲಿ ಇರದ ಮೈಸೂರು ಚರಿತ್ರೆ ಅಪೂರ್ಣ. ಇದೇ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಟಿಪ್ಪುವಿನ ಪೇಟ ಹಾಕಿಕೊಂಡು, ಟಿಪ್ಪು ಬಟ್ಟೆ ತೊಟ್ಕೊಂಡು ಪಕ್ಕದಲ್ಲಿ ಶೋಭಾ ನಿಲ್ಲಿಸ್ಕೊಂಡು ಫೊಟೋ ತೆಗಿಸ್ಕೊಂಡಿಲ್ವಾ ಎಂದು ಚಾಟಿ ಬೀಸಿದರು. ಕೆಜೆಪಿಯಲ್ಲಿ ಇದ್ದಾಗ ಇವರಿಗೇನು ಬೇರೆ ನಾಲಿಗೆ ಇತ್ತಾ? ಯಡಿಯೂರಪ್ಪನಿಗೆ ಎಷ್ಟು ನಾಲಿಗೆ ಎಂದು ಪ್ರಶ್ನೆ ಮಾಡಿದ ಮಾಜಿ ಸಿಎಂ, ನಾನು ಟಿಪ್ಪು ಜಯಂತಿ ಮಾತ್ರ ಮಾಡಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡರ ಜಯಂತಿ ಮಾಡಿದೋನೂ ನಾನೇ ಮಾಡಿರುವುದಾಗಿ ಹೇಳಿದರು.

ಬಿಜೆಪಿಗರು ಡೋಂಗಿ ಹಿಂದೂಗಳು:
ಬಿಜೆಪಿಯವರು ನನ್ನ ಬಗ್ಗೆ ಏನೇನೋ ಅಪಪ್ರಚಾರ ಮಾಡುತ್ತಾರೆ. ಸಿದ್ದರಾಮಯ್ಯ ಮುಸಲ್ಮಾನರ ಪರ ಅಂತ ಅಪಪ್ರಚಾರ ಮಾಡುತ್ತಾರೆ. ಯಾಕೆ ನಾನೇನೂ ಹಿಂದೂ ಅಲ್ವಾ. ನಾನೂ ಒಬ್ಬ ಹಿಂದೂ, ಆದರೆ ಇವರ ಹಾಗೆ ಡೋಂಗಿ ಹಿಂದೂವಲ್ಲ ಎಂದು ವಾಗ್ದಾಳಿ ನಡೆಸಿದರು.

ಟ್ರಂಪ್ ವಿರುದ್ಧ ಮೋದಿ ಪ್ರತಿಭಟಿಸಬೇಕಿತ್ತು:
ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ಅಧ್ಯಕ್ಷ ಟ್ರಂಪ್ ಮೋದಿಯವರನ್ನು ರಾಷ್ಟçಪಿತ ಅಂದ್ರು. ಆದರೆ ಈ ದೇಶದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಒಬ್ಬರೇ. ನರೇಂದ್ರ ಮೋದಿಯವರನ್ನು ಜನ ರಾಷ್ಟçಪಿತ ಅಂತ ಕರೆದಿಲ್ಲ. ಟ್ರಂಪ್ ವಿರುದ್ಧ ಮೋದಿ ಅಲ್ಲೇ ಪ್ರತಿಭಟನೆ ಮಾಡಬೇಕಿತ್ತು. ದೇಶಕ್ಕೊಬ್ಬರೇ ಮಹಾತ್ಮ ಅಂತ ಹೇಳಬೇಕಿತ್ತು. ಆದರೆ ಈ ಆಸಾಮಿ ಸುಮ್ನೆ ತಲೆ ಆಡಿಸ್ಕೊಂಡು ಬಂದಿದ್ದಾರೆ. ಇವರ ಪಾರ್ಟಿಯಲ್ಲಿ ಒಬ್ಬರೂ ಸ್ವಾತಂತ್ರ÷್ಯ ಹೋರಾಟಗಾರರಿಲ್ಲ. ಅದಕ್ಕೆ ಈಗ ವಲ್ಲಭಬಾಯಿ ಪಟೇಲರನ್ನು ಹಿಡ್ಕೊಂಡಿದ್ದಾರೆ. ಸರ್ದಾರ್ ಪಟೇಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ, ಆರ್‌ಎಸ್‌ಎಸ್ ವಿರೋಧಿ. ಸಾವರ್ಕರ್ ಸೇರಿದಂತೆ ಯಾರೂ ಸ್ವಾತಂತ್ರ÷್ಯ ಹೋರಾಟ ಮಾಡಿದವರಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ಸಿಗರಿಗೂ ಮೋದಿ ಇಷ್ಟ:
ನಮ್ಮವರೇ ಕೆಲವರು ಪ್ರಧಾನಿ ಮೋದಿ ಪರವಾಗಿಲ್ಲ ಅಂತಾರೆ. ಈ ದೇಶಕ್ಕೆ ಮೋದಿಯ ಕೊಡುಗೆ ಏನು ಅಂತ ಮೊದಲು ಉತ್ತರಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ವಪಕ್ಷೀಯರ ಕಿವಿ ಹಿಂಡಿದ್ದಾರೆ. ಕಾಂಗ್ರೆಸ್ ಇತಿಹಾಸ, ಬಿಜೆಪಿ ಆರ್‌ಎಸ್‌ಎಸ್ ಇತಿಹಾಸ ಅಧ್ಯಯನ ಮಾಡಿ ಫೀಲ್ಡ್ ಗೆ ಹೋಗಿ ಅಂತ ನಾಯಕರಿಗೆ ಕಾರ್ಯಕರ್ತರಿಗೆ ಹೆಡ್ ಮಾಸ್ಟರ್ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡರು.

Share This Article
Leave a Comment

Leave a Reply

Your email address will not be published. Required fields are marked *