ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ: ಸಿದ್ದು ಸಿಡಿಮಿಡಿ

Public TV
3 Min Read

ಬೆಂಗಳೂರು: ವಿಧಾನಸಭೆಯಲ್ಲಿಂದು (Vidhan Sabha) ಮಳೆ ಹಾನಿ ಕುರಿತಾಗಿ ಚರ್ಚಿಸುತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮಳೆ ಹಾನಿ (RainFall) ಪರಿಶೀಲನೆಗೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಹೋಗಿದ್ದೆ. ಕೊಡಗಿಗೆ (Kodagu) ಹೋಗುತ್ತಿದ್ದಾಗ ನನಗೆ ಕಪ್ಪು ಬಾವುಟ ತೋರಿಸಿ ಮೊಟ್ಟೆ ಹೊಡೆಯಲು ಶುರುಮಾಡಿದರು ಎಂದು ವಿಷಯ ಪ್ರಸ್ತಾಪಿಸಿದರು.

ಈ ವೇಳೆ ಸ್ಪೀಕರ್ ಕಾಗೇರಿ (vishweshwar hegde kageri) ಮಧ್ಯಪ್ರವೇಶಿಸಿ ಅದು ಬೇರೆ ಯಾವುದೋ ಕಾರಣಕ್ಕೆ ಎಂದು ಮಾಧ್ಯಮಗಳಲ್ಲಿ ಬರುತ್ತಿತ್ತು ಎಂದರು. ಆಗ ನಿಮಗೆ ಗೊತ್ತಾ ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದರು. ಈ ವೇಳೆ ಸ್ಪೀಕರ್ ಕೊಡಗಿನವರು ಅತಿವೃಷ್ಟಿ ಪರಿಶೀಲನೆ ಮಾಡಲು ಬಂದಾಗ ಹೀಗೆ ಮಾಡಿದ್ರಾ ಎಂದು ಸ್ಪೀಕರ್ (Speaker) ಪ್ರಶ್ನೆ ಮಾಡಿದರು. ಇದಕ್ಕೆ, ಸಾವರ್ಕರ್, ಟಿಪ್ಪು ಬಗ್ಗೆ ಮಾತನಾಡಿದ್ದೀರಿ ಎಂದು ಬಿಜೆಪಿ ಶಾಸಕ (MLA) ಕೆ.ಜಿ ಬೋಪಯ್ಯ ತಿರುಗೇಟು ನೀಡಿದರು. ಈ ವೇಳೆ ಶಾಸಕ ಅಪ್ಪಚ್ಚು ರಂಜನ್ ಕೂಡ ಸಾಥ್ ನೀಡಿದರು. ಇದನ್ನೂ ಓದಿ: ಯಾವುದೇ ಮುಲಾಜಿಲ್ಲದೆ ರಾಜಕಾಲುವೆ ತೆರವು: ಬೊಮ್ಮಾಯಿ‌

ಇದಕ್ಕೆ ಸಿಡಿಮಿಡಿ ಸಿದ್ದರಾಮಯ್ಯ, ಕಪ್ಪು ಬಾವುಟ, ಮೊಟ್ಟೆ ಹೊಡೆಯುವುದು ನಮಗೂ ಗೊತ್ತು. ನಾವು ಹಿಂದೆ ಇದೇ ಮಾಡಿರುವುದು. ಇದಕ್ಕೆಲ್ಲಾ ನಾನು ಹೆದರೋದಿಲ್ಲ. ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ ನಾವು. ಅದೇ ಮೊಟ್ಟೆ ಎಸೆಯೋ ಕೆಲಸ ಇಡೀ ರಾಜ್ಯಾದ್ಯಂತ ಮಾಡಿಸಬಲ್ಲೆ. ಆದ್ರೆ ಅಂತ ಕೆಲಸ ಮಾಡಲ್ಲ ಎಂದರು.

ಮಧ್ಯಪ್ರವೇಶ ಮಾಡಿದ ಶಾಸಕ ಅಪ್ಪಚ್ಚು ರಂಜನ್, (Appachu Ranjan) ಮೊಟ್ಟೆ ಹೊಡೆದಿದ್ದು ನಿಮ್ಮ ಪಕ್ಷದವರೇ ಎಂದರು. ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ, ಕೂತ್ಕೊಳ್ರಿ, ಹೋಗಿ ಬಿಡಿಸಿಕೊಂಡು ಬಂದವರು ನೀವೇ ತಾನೆ ಎಂದು ಅಪ್ಪಚ್ಚು ರಂಜನ್ ತರಾಟೆಗೆ ತೆಗೆದುಕೊಂಡರು. ನಿಮ್ಮ ಜೊತೆಗಿರುವ ಫೋಟೋ ಇದೆ ನಾಚಿಕೆ ಆಗಲ್ವಾ? ಎಲ್ಲ ಅಪ್ಪಚ್ಚು ರಂಜನ್ ಅವರೇ ಮಾಡಿಸಿದ್ದು ಎಂದು ಆರೋಪಿಸಿದರು. ಈ ಸಂದರ್ಭ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಹಿಂದೆ ಟಿಪ್ಪು ಪೇಟಾ ಹಾಕೊಂಡು ಖಡ್ಗ ಹಿಡಿದಿದ್ರಲ್ಲ ಆಗ ನಾಚಿಕೆ ಆಗಲಿಲ್ವಾ? ಕೊಡಗಿನಲ್ಲಿ ಒಂದು ರೂಪಾಯಿ ಅಭಿವೃದ್ಧಿ ಆಗಿಲ್ಲ. ಕೊಡಗಿನ ಜನ ಒಳ್ಳೆಯವರು ನಿಮ್ಮ ನಡವಳಿಕೆಯಿಂದ ಕೊಡಗು ಹಾಳಾಗುತ್ತಿದೆ. ಘಟನೆ ಆದಾಗ ಪೊಲೀಸರು ನಿಷ್ಕ್ರಿಯರಾಗಿದ್ದರು. ಅದಕ್ಕಾಗಿ ಅಲ್ಲಿನ ಎಸ್‌ಪಿ ಕೆಲಸ ಮಾಡಲು ನಾಲಾಯಕ್ ಎಂದು ಹೇಳಿದ್ದೆ ಎಂದು ವಿವರಿಸಿದರು. ಇದನ್ನೂ ಓದಿ: BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

ಬಳಿಕ ಮಧ್ಯಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, (Araga Jnanendra) ಪೊಲೀಸರು ನಿಷ್ಕ್ರಿಯರಾಗಿರಲಿಲ್ಲ. ಸೂಕ್ತ ಬಂದೋಬಸ್ತ್ ಹಾಗೂ ಎಲ್ಲ ರೀತಿಯಲ್ಲಿ ರಕ್ಷಣೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಆಗ ಸಿದ್ದರಾಮಯ್ಯ ಮೊಟ್ಟೆ ಎಸೆದವರನ್ನು ಪೊಲೀಸ್ ಠಾಣೆಯಿಂದ ಬಿಡಿಸಲು ಶಾಸಕ ಅಪ್ಪಚ್ಚು ರಂಜನ್ ಏಕೆ ಹೋದರು? ಎಂದು ಗರಂ ಆದರು.

ನಾವು ಪೊಲೀಸ್ (Police) ಸ್ಟೇಷನ್ ಗೆ ಹೋಗಿದ್ದು ಕಪ್ಪು ಬಾವುಟ ಹಿಡಿದವರ ಬಿಡಿಸೋಕೆ ಹೋಗಿದ್ದು ಎಂದು ಅಪ್ಪಚ್ಚು ರಂಜನ್ ಸಮಜಾಯಿಶಿ ನೀಡಿದರು. ಇವರು ಕುಮ್ಮಕ್ಕು ಕೊಡದೇ ಮೊಟ್ಟೆ ಎಸೆದ್ರಾ? ಈ ಇಸ್ ಗಿಲ್ಟಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜನಾರ್ದನ ರೆಡ್ಡಿ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿದ ಹಾಗೆ ಕೊಡಗಿಗೆ ಬನ್ನಿ ಎಂದು ಬೋಪಯ್ಯ ಸವಾಲೆಸೆದರು. 144 ಸೆಕ್ಷನ್ ನೀವು ಹಾಕದೇ ಇರಬೇಕಾಗಿತ್ತು. ಬೇಕಿದ್ದರೆ ನಾಳೆನೇ ಬರ್ತೀನಿ ನಿಮ್ಮ ಕೊಡಗಿಗೆ, ನಿಮ್ಮ ಮನೆಗೇ ಬರ್ತೀನಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಏನು ಕೊಡಗು ನಿಮ್ಮದಾ? ನಿಮ್ಮ ಸಂಸ್ಥಾನನಾ? ಎಂದು ಪ್ರಶ್ನಿಸಿದರು.

ಇದೇ ವೇಳೆ ಬೋಪಯ್ಯ ಸಮರ್ಥನೆ ಮಾಡುತ್ತಾ, ನಿಮ್ಮ ವಕ್ತಾರರು ಸವಾಲು ಹಾಕಿದ್ರು ಅದ್ಕೆ ನಾನು ಹೇಳಿದ್ದು ನಿಜ. ಬನ್ನಿ ನಮ್ಮ ಮನೆಗೆ, ನಾಯಿ ಸ್ವಾಗತ ಮಾಡುತ್ತೆ ಎಂದಿದ್ದೆ ಎಂದು ಬೋಪಯ್ಯ ಒಪ್ಪಿಕೊಂಡರು. ಅದಕ್ಕೆ ಸಿದ್ದರಾಮಯ್ಯ ನಾಳೆಯೇ ಬರ್ತೀನಿ ಅಂದ್ರು. ಬೋಪಯ್ಯ ಏನೂ ಪ್ರತಿಕ್ರಿಯಿಸದೇ ಬನ್ನಿ ನಮ್ಮ ಮನೆಗೆ ಎಂದು ನಕ್ಕು ಕುಳಿತರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *