ಲೋಕ ಸಮರದ ಬಳಿಕ ಮೌನಕ್ಕೆ ಶರಣಾದ ಸಿದ್ದರಾಮಯ್ಯ!

Public TV
1 Min Read

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯವನರೇ ತಮ್ಮ ಶಿಷ್ಯರ ಮೂಲಕ ಮೈತ್ರಿ ಸರ್ಕಾರವನ್ನು ಬೀಳಿಸುತ್ತಾರೆ ಎಂಬ ಮಾತುಗಳು ಕೈ ಪಡಸಾಲೆಯಲ್ಲಿ ಬಲವಾಗಿ ಕೇಳಿ ಬಂದಿದ್ದವು. ಆದ್ರೆ ಫಲಿತಾಂಶದಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿದ್ದು, ರಾಜ್ಯದಲ್ಲಿ ಸರ್ಕಾರ ಉಳಿಸಲು ಕೈ ಹೈಕಮಾಂಡ್ ಪ್ರಯತ್ನಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಮೌನಕ್ಕೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಮರದಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದ್ದು, ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದು ಹೆಚ್ಚಾಗುತ್ತಿದೆ. ಹಾಗಾಗಿ ಮೈತ್ರಿ ನಾಯಕರಿಗೆ ತಮ್ಮ ಶಾಸಕರನ್ನು ಕಾಪಾಡಿಕೊಳ್ಳುವ ಕೆಲಸವೇ ತಲೆನೋವಾಗಿದೆ. ಹೀಗಾಗಿ ಬಂಡಾಯದ ಬಾವುಟ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಹಿಡಿದಿಟ್ಟುಕೊಳ್ಳಲು ದೋಸ್ತಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.

ಆಪರೇಷನ್ ಕಮಲದ ಸದ್ದಿನಲ್ಲಿ ಸರ್ಕಾರದ ವಿರುದ್ಧ ಆಪ್ತರಿಗೆ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸಂದೇಶ ರವಾನಿಸಿದ್ದಾರೆ. ಇಷ್ಟೆಲ್ಲದರ ಮಧ್ಯೆ ಬಿಜೆಪಿ ಆಪರೇಷನ್ ಕಮಲದ ಭೀತಿ ರಾಜ್ಯದಲ್ಲಷ್ಟೆ ಅಲ್ಲದೆ ಬೇರೆ ರಾಜ್ಯಗಳಲ್ಲೂ ಆವರಿಸಿದೆ. ಈ ಸಮಯದಲ್ಲಿ ಜಾತ್ಯಾತೀತ ಶಕ್ತಿಗಳ ಒಗ್ಗಟ್ಟು ಕಾಪಾಡಿಕೊಳ್ಳಬೇಕು ಎಂಬ ಅಂಶ ಸಿದ್ದರಾಮಯ್ಯರನ್ನ ಕೈ ಕಟ್ಟಿ ಹಾಕಿದೆ. ಹೀಗೆ ದೋಸ್ತಿ ಜೆಡಿಎಸ್ ವಿರುದ್ದ ಒಳಗೊಳಗೆ ಅಸಮಧಾನ ಹೊಂದಿದ್ದ ಸಿದ್ದರಾಮಯ್ಯ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಸಮಧಾನದ ಬದಲು ಮೌನವೇ ಮದ್ದು ಎಂದು ಸೈಲೆಂಟಾಗುವ ಮೂಲಕ ಕುಮಾರಸ್ವಾಮಿ ಸರ್ಕಾರದ ದೊಡ್ಡ ಗಂಡಾಂತರವೊಂದು ಶಮನವಾಗಿದೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *