ಗಂಭೀರ ಆರೋಪಗಳಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸಂತೋಷ್‌ ಹೆಗ್ಡೆ

Public TV
1 Min Read

ಮಂಗಳೂರು: ಸಿಎಂ ಸಿದ್ದರಾಮಯ್ಯರ (Siddaramaiah) ವಿರುದ್ಧ ಇಂತಹ ಗಂಭೀರ ಆರೋಪಗಳಿರುವಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ (Santosh Hegde) ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು, ಈ ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಇದೇ ರೀತಿ ರಾಜೀನಾಮೆ ಕೊಡಬೇಕೋ ಕೊಡಬೇಡವೋ ಅನ್ನೋದು ಸಿಎಂ‌ ಹಾಗೂ ಅಧಿಕಾರಿಗಳಿಗೆ ಬಿಟ್ಟಿದ್ದು. ಕೊಡದೇ ಇದ್ದರೆ ಕಾನೂನಿನಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತನಿಖೆ ಎದುರಿಸಲು ಸಿದ್ಧನಿದ್ದೇನೆ: ಕೋರ್ಟ್ ಆದೇಶಕ್ಕೆ ಸಿಎಂ ಪ್ರತಿಕ್ರಿಯೆ

ಈಗ ಅನುಮತಿ ಕೊಟ್ಟಿದ್ದು, ಮುಡಾದ ವಿಚಾರದಲ್ಲಿ ಮಾತ್ರ. ಹೈಕೋರ್ಟ್ ಕೂಡ ಮೇಲ್ನೋಟಕ್ಕೆ ಇದರಲ್ಲಿ ಪುರಾವೆ ಇದೆ ಅಂತಾ ಹೇಳಿದೆ. ಆ ಹಿನ್ನೆಲೆಯಲ್ಲಿ ರಾಜೀನಾಮೆ ಕೊಡಬೇಕು ಅಂತಾ ನನಗೆ ಅನ್ನಿಸುತ್ತಿದೆ. ರಾಜೀನಾಮೆ ಕೊಡಬೇಕು ಅನ್ನೋದು ಈಗ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ಅವರು ಆರೋಪಿಯಲ್ಲ ಅಂತಾ ತೀರ್ಪು ಬಂದರೆ ಮತ್ತೆ ಹುದ್ದೆಗೆ ವಾಪಾಸ್ ಬರಬಹುದು. ಹೈಕೋರ್ಟ್ ತೀರ್ಪು ಬರುವ ಮೊದಲು ನಾನು ತಪ್ಪೇ ಮಾಡಿಲ್ಲ ಅಂತಾ ಹೇಳಿದ್ರು. ಹೀಗಾಗಿ ಸದ್ಯ ಅವರು ಹೇಳಿದ್ದು, ಸರಿ ಇಲ್ಲ ಅಂತಾ ಆಯ್ತಲ್ಲ ಎಂದು ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: MUDA Scam| ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್‌ ಆದೇಶ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿದೆ. ಲೋಕಾಯುಕ್ತ ಪ್ರಕರಣದ ತನಿಖೆ ನಡೆಸಿ ಡಿ.24ರ ಒಳಗೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

Share This Article