ಪ್ರಾಣಿ ಸಂಪತ್ತನ್ನು ಕೊಲ್ಲುವವರು ಎಷ್ಟೇ ದೊಡ್ಡವರಾಗಿದ್ರೂ ಕಠಿಣ ಕ್ರಮ: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರು ಎಷ್ಟೇ ದೊಡ್ಡವರಾಗಿದ್ರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಮುಖ್ಯಮಂತ್ರಿ ಪದಕ ವಿತರಿಸಿದರು. ಬಳಿಕ ಮಾತನಾಡಿದ ಅವರು, ಸಾಕು ಹಸುವನ್ನು ತಿಂದಿದೆ ಎನ್ನುವ ಕಾರಣಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ (Male mahadeshawara hill) ಹುಲಿಗಳಿಗೆ ವಿಷ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಯಾರೇ ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲಲು ಮುಂದಾದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅವರು ಎಷ್ಟೇ ದೊಡ್ಡವರಾಗಿದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗಿವುದು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: `ನಟ್ಟು ಬೋಲ್ಟು’ ಹೇಳಿಕೆಗೂ ಬಿಗ್‌ಬಾಸ್ ಬಂದ್‌ಗೂ ಸಂಬಂಧವಿಲ್ಲ – ಈಶ್ವರ್ ಖಂಡ್ರೆ 

ಮಾನವ-ವನ್ಯಜೀವಿ ಸಹಬಾಳ್ವೆಯ ಪರಿಸರ ಪೂರಕವಾದ ಆಶಯ ಮತ್ತು ಉದ್ದೇಶಕ್ಕಾಗಿ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆ ಆದಷ್ಟೂ, ಮನುಷ್ಯ ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಅರಣ್ಯದ ಉಳಿವು ಭೂಮಿಯ ಉಳಿವು ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ. ಇದನ್ನೂ ಓದಿ: ಸಮೀಕ್ಷೆಗಾಗಿ ದಸರಾ ರಜೆ ವಿಸ್ತರಣೆ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟ: ನಿಖಿಲ್

ಆನೆ ಮತ್ತು ಹುಲಿ ಸಂಪತ್ತಿನಲ್ಲಿ ನಮ್ಮ ರಾಜ್ಯ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಇದರ ಜೊತೆಗೆ ಪ್ರಾಣಿ ಮತ್ತು ಮನುಷ್ಯರ ಸಂಘರ್ಷ ತಪ್ಪಿ ಸಹಬಾಳ್ವೆ ಏರ್ಪಡಬೇಕು. ಇದಕ್ಕಾಗಿ ಪ್ರಾಣಿಗಳು ಕಾಡು ಬಿಟ್ಟು ಹೊರಗೆ ಏಕೆ ಬರುತ್ತಿವೆ ಎನ್ನುವ ಬಗ್ಗೆ ಅಧ್ಯಯನಗಳು ನಡೆದು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಹುಲಿ, ಆನೆಗಳ ಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ, ಅರಣ್ಯಾಧಿಕಾರಿಗಳು ಈ ಬಗ್ಗೆ ಹೆಚ್ಚು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಹುಲಿ ಹತ್ಯೆ ಮಾಡಿದವರು ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ. ದಿನೇ ದಿನೇ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದರೆ ಮನುಷ್ಯ ಕುಲ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಅರಣ್ಯದ ಉಳಿವು ಮನುಷ್ಯನ ಉಳಿವು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ಅರಣ್ಯ ರಾಯಭಾರಿ ಅನಿಲ್ ಕುಂಬ್ಳೆ, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವರು ಉಪಸ್ಥಿತರಿದ್ದರು.

Share This Article