ಮೇಕೆದಾಟು ಯೋಜನೆಯಿಂದ ಕರ್ನಾಟಕ, ತಮಿಳುನಾಡು ಎರಡು ರಾಜ್ಯಕ್ಕೂ ಅನುಕೂಲ: ಸಿದ್ದರಾಮಯ್ಯ

Public TV
3 Min Read

ಬೆಳಗಾವಿ: ಮೇಕೆದಾಟು ಯೋಜನೆಯಿಂದ ಕರ್ನಾಟಕ, ತಮಿಳುನಾಡು ಎರಡು ರಾಜ್ಯಕ್ಕೂ ಅನುಕೂಲವಾಗಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 1968ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮೇಕೆದಾಟು ಯೋಜನೆ ಮಾಡಿತ್ತು. ಆದರೆ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದುದ್ದರಿಂದ ಯೋಜನೆ ಜಾರಿ ಆಗಿರಲಿಲ್ಲ. 2013ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿದ್ದೆವು. ಆಗ ಈ ಯೋಜನೆಯ ಅಂದಾಜು ವೆಚ್ಚ 5912 ಕೋಟಿ ರೂ., 2018 ರಲ್ಲಿ ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿದ್ದ ವೇಳೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದರು. ಆಗ 9,500 ಕೋಟಿ ರೂ. ಯೋಜನಾ ವೆಚ್ಚ ಇತ್ತು. ಬೆಂಗಳೂರು ನಗರ ಹಾಗೂ ಸುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದು ಎಂದು ತಿಳಿಸಿದರು. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿವಾದ – ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ಸಮುದ್ರ ಪಾಲಾಗಿ ವ್ಯರ್ಥವಾಗುತ್ತಿರುವ 66 ಟಿಎಂಸಿ ನೀರನ್ನು ಮೇಕೆದಾಟು ಜಲಾಶಯದಲ್ಲಿ ಶೇಖರಿಸಿ, ಕುಡಿಯುವ ನೀರಿನ ಹಾಗೂ 440 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ಬಳಕೆ ಮಾಡುವ ಉದ್ದೇಶ ಹೊಂದಿದೆ. ಈಗ ಬೆಂಗಳೂರಿನ 30% ಜನರಿಗೆ ಕಾವೇರಿ ನೀರಿನ ಪೂರೈಕೆ ಆಗುತ್ತಿಲ್ಲ. ಇಡೀ ನಗರಕ್ಕೆ ಕಾವೇರಿ ನೀರು ಸರಬರಾಜು ಆಗಬೇಕೆಂದರೆ ಈ ಯೋಜನೆ ಜಾರಿಯಾಗಲೇಬೇಕು, ಇದರ ಜೊತೆಗೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ ಎಂದರು.

ಈ ಯೋಜನೆಯಿಂದ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಹಲವು ಅನುಕೂಲ ಆಗಲಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ನಡುವಿನ ಜಲವಿವಾದ ಇತ್ಯರ್ಥಗೊಂಡಿದ್ದು, ಸ್ವಾಭಾವಿಕ ವರ್ಷವೊಂದರಲ್ಲಿ ನಾವು 177.25 ಟಿಎಂಸಿ ನೀರು ಕೊಡಬೇಕು ಎಂದು ತೀರ್ಪು ಬಂದಿದೆ. ಈಗ ವ್ಯಾಜ್ಯ ಬಗೆಹರಿದಿರುವುದರಿಂದ ತಮಿಳುನಾಡಿನವರಿಗೆ ಅವರ ಪಾಲಿನ ನೀರನ್ನು ಪಡೆಯುವ ಹಕ್ಕು ಬಿಟ್ಟರೆ, ಯೋಜನೆಯ ಬಗ್ಗೆ ತಕರಾರು ಮಾಡುವ ಬೇರಾವ ಕಾನೂನಾತ್ಮಕ ಹಕ್ಕು ಅವರಿಗಿಲ್ಲ. ಹಸಿರು ನ್ಯಾಯಾಧಿಕರಣದವರು ಕೂಡಾ ಈ ಯೋಜನೆಯ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಿದ್ದಾಗ ಯಾವುದೇ ತಕರಾರು ಇಲ್ಲದಿದ್ದರೂ, ಯೋಜನಾ ವರದಿ ಸಿದ್ಧವಾಗಿದ್ದರೂ, ತಮಿಳುನಾಡಿಗೆ ಕಾನೂನಾತ್ಮಕವಾಗಿ ವಿರೋಧಿಸುವ ಹಕ್ಕು ಇಲ್ಲದಿದ್ದರೂ ಯೋಜನೆ ಅನುಷ್ಠಾನ ಆಗಿಲ್ಲ. ಡಬಲ್ ಇಂಜಿನ್ ಸರ್ಕಾರ ಎನ್ನುವ ಬಿಜೆಪಿ ಅವರು ಇಷ್ಟೊತ್ತಿಗೆ ಯೋಜನೆ ಕೈಗೆತ್ತಿಕೊಳ್ಳಬೇಕಿತ್ತಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ – ಮೇಕೆದಾಟು ಯೋಜನೆಗೆ ಕೇರಳ, ಪುದುಚೆರಿಯಿಂದಲೂ ಕ್ಯಾತೆ

ಜನವರಿ 9ರಿಂದ ಪಾದಯಾತ್ರೆ: ಪ್ರವಾಹ, ಅತಿವೃಷ್ಟಿ ಮುಂತಾದ ಕಾರಣಗಳಿಂದ ಹರಿವು ಹೆಚ್ಚಾದ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿ ಬೇಸಿಗೆ ಸಮಯದಲ್ಲಿ ವಿವಿಧ ನಾಲೆಗಳ ಮೂಲಕ ಕೃಷಿ, ವಿದ್ಯುತ್ ಉತ್ಪಾದನೆ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುವುದಾಗಿದೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರು ಕೂಡ ತಮಿಳು ನಾಡಿಗೆ ಹೋಗಲಿದೆ. ಇದು ಅವರಿಗೆ ಇನ್ನೊಂದು ಲಾಭದ ವಿಚಾರ. ನಾವು ಅಧಿಕಾರದಲ್ಲಿ ಇದ್ದಿದ್ದರೆ ಈ ಯೋಜನೆಯನ್ನು ಈಗಾಗಲೇ ಆರಂಭ ಮಾಡುತ್ತಿದ್ದೆವು. ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷ ಜನವರಿ 9 ರಿಂದ 19 ರ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.

ಮೊದಲು ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ, ಮತ್ತೆ ಸುತ್ತಮುತ್ತಲಿನ ಹತ್ತಾರು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡುತ್ತೇವೆ. ಒಟ್ಟು ಹತ್ತು ದಿನ ಪಾದಯಾತ್ರೆ ಮಾಡುತ್ತೇವೆ. ಬೆಂಗಳೂರಿನಲ್ಲಿರುವ ಇತರೆ ಸಂಘ, ಸಂಸ್ಥೆಗಳು ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತೇವೆ, ಆಸಕ್ತರು ಭಾಗವಹಿಸಬಹುದು. ಇದು ಪಕ್ಷದ ಕಾರ್ಯಕ್ರಮವಲ್ಲ, ರಾಜ್ಯದ ಹಿತದೃಷ್ಟಿಯಿಂದ ರೂಪಿಸಿರುವ ಹೋರಾಟ. ಸುಮಾರು ಹತ್ತು ಜಿಲ್ಲೆಗಳ 2.5 ಕೋಟಿ ಜನರಿಗೆ ಯೋಜನೆ ಜಾರಿಯಿಂದ ಅನುಕೂಲ ಆಗಲಿದೆ. ಹೀಗಾಗಿ ಕೂಡಲೇ ಸರ್ಕಾರ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂಬುದು ನಮ್ಮ ಆಗ್ರಹ ಎಂದರು. ಇದನ್ನೂ ಓದಿ: ಮೇಕೆದಾಟು ಯೋಜನೆ – ಮೂರು ಮಹತ್ವದ ನಿರ್ಣಯಗಳಿಗೆ ತಮಿಳುನಾಡು ಅಂಗೀಕಾರ

Share This Article
Leave a Comment

Leave a Reply

Your email address will not be published. Required fields are marked *