ಮತ್ತೆ ಸಿಎಂ ಆಗೋ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ

Public TV
2 Min Read

– ಮತ್ತೆ ಸಿಎಂ ಆದ್ರೆ ತಿಂಗ್ಳಿಗೆ 10 ಕೆಜಿ ಅಕ್ಕಿ

ಬಳ್ಳಾರಿ: ಗದಗ ಸಮಾವೇಶದಲ್ಲಿ ನಿನ್ನೆ ಮತ್ತೆ ಸಿಎಂ ಆಗುವ ಕುರಿತು ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಸಿಎಂ ಕನಸನ್ನು ಬಿಚ್ಚಿಟ್ಟಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರ ಪರ ಪ್ರಚಾರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಸಿರಗುಪ್ಪದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ನಾನು ಮತ್ತೆ ಸಿಎಂ ಆದರೆ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದರು. ಆ ಮೂಲಕ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎನ್ನುತ್ತಲೇ ಸಿಎಂ ಆಗುವ ಕನಸು ತೆರೆದಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 5 ವರ್ಷ ಅಧಿಕಾರವನ್ನು ಪೂರೈಸಿದ್ದು, ಈ ಅವಧಿಯಲ್ಲಿ ಯುವಕರಿಗೆ, ಬಡವರಿಗೆ ಏನು ಮಾಡಿದ್ದೇನೆ ಎಂದು ಹೇಳುವುದಿಲ್ಲ. ಆದರೆ ಅವರು ಹೇಳುವುದು ಒಂದೇ ಬಾಲಾಕೋಟ್ ಎಂದು. ಅವರು ಏನು ಗನ್ ತೆಗೆದುಕೊಂಡು ಹೋಗಿದ್ದಾರಾ? ಅವರೇ ಯುದ್ಧ ಮಾಡಿದ್ದಾರಾ ಎಂದು ಪ್ರಶ್ನೆ ಮಾಡಿದರು.

ಪಾಕಿಸ್ತಾನ, ಬಾಂಗ್ಲಾದೇಶದ ಮೇಲೆ ಯುದ್ಧ ಮಾಡಿದಾಗ ಪ್ರಧಾನ ಮಂತ್ರಿ ಆಗಿದ್ದವರು ಇಂದಿರಾಗಾಂಧಿ. ವಾಜಪೇಯಿ ಅವರೇ ಲೋಕಸಭೆಯಲ್ಲಿ ಅವರನ್ನು ದುರ್ಗೆಗೆ ಹೋಲಿಸಿದ್ದಾರೆ. ಈ ಇತಿಹಾಸ ತಿಳಿದಿದ್ಯಾ ಎಂದು ಪ್ರಶ್ನಿಸಿದರು. ಅಲ್ಲದೇ ನರೇಂದ್ರ ಮೋದಿ ನನಗಿಂತ ಕಿರಿಯವನಾಗಿದ್ದು, ನಾಥೂರಾಮ್ ಗೋಡ್ಸೆ ವಂಶಕ್ಕೆ ಸೇರಿದವರು ಎಂದು ಆರೋಪಿಸಿದರು.

ಇದೇ ವೇಳೆ ಬಿಎಸ್ ಯಡಿಯೂರಪ್ಪ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಮಾಜಿ ಸಿಎಂ, ಅಂದು ಸಾಲಮನ್ನಾ ಮಾಡಿ ಎಂದರೆ ಹಣ ಎಲ್ಲಿಂದ ತರಲಿ ಎಂದು ಕೇಳಿದರು. ಆದರೆ ಈಗ ಹಸಿರು ಟವಲ್ ಹಾಕಿಕೊಂಡು ನಾನು ರೈತರ ಪರ ಹೋರಾಟ ಎನ್ನುತ್ತಿದ್ದಾರೆ. ನಾವು ಬಡವರು ಊಟ ಮಾಡಲು ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದೇವು. ಬಡವರ ಹಸಿವು ನೀಗಿಸಲು ನಾನು ಮತ್ತೆ ಮುಖ್ಯಮಂತ್ರಿ ಆದರೆ 10 ಕೆಜಿ ಅಕ್ಕಿ ಕೊಡುತ್ತೇನೆ ಘೋಷಣೆ ಮಾಡಿದರು.

ನಿನ್ನೆ ಗದಗದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಬಿಜೆಪಿಯ ಈಶ್ವರಪ್ಪ ಮುಂದಿನ ಚುನಾವಣೆಯಲ್ಲಿ ನಾನು ಸಿಎಂ ಎಂದು ಹೇಳಲಿ ಎಂದು ಸವಾಲು ಎಸೆದಿದ್ದರು. ಆದರೆ ಈಶ್ವರಪ್ಪ ಅವರಿಗೆ ಅದು ಸಾಧ್ಯವಾಗುವುದಿಲ್ಲ. ನಾನು ಬೇಕಾದರೆ ಮತ್ತೆ ಸಿಎಂ ಅಭ್ಯರ್ಥಿ ಎಂದು ಹೇಳುತ್ತೇನೆ ಎಂದರು. ಆ ಮೂಲಕ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸದೇ ಇದ್ದರೆ ಉಂಟಾಗುವ ರಾಜಕೀಯ ಬೆಳವಣಿಗೆಗಳಲ್ಲಿ ಮತ್ತೆ ಸಿಎಂ ಆಗುವ ಸಂದೇಶವನ್ನು ಹೈಕಮಾಂಡ್‍ಗೆ ರವಾನಿಸಿದ್ದಾರಾ ಎಂಬ ಚರ್ಚೆ ರಾಜಕೀಯ ವಲಯದಿಂದ ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *