ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ: ಸಿದ್ದರಾಮಯ್ಯ ಕಿಡಿ

Public TV
2 Min Read

ಬೆಂಗಳೂರು: ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡುವುದರ ಜೊತೆಗೆ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ ಅವರು, ಇಂದಿನಿಂದ ಜ.19ರವರೆಗೆ ಪಾದಯಾತ್ರೆ ನಡೆಯುತ್ತದೆ. ಪಾದಯಾತ್ರೆಯ ಬಗ್ಗೆ ಡಿಕೆಶಿ ಹಾಗೂ ನಾನು ಸೇರಿ ವಿವಿಧ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೆವು. ಈ ಬಗ್ಗೆ 2 ತಿಂಗಳ ಹಿಂದೆಯೇ ಘೋಷಣೆ ಮಾಡಿದ್ದೆವು. ಆದರೆ ಈ ಪಾದಯಾತ್ರೆ ಹತ್ತಿಕ್ಕಲು ಸರ್ಕಾರ ಬಹಳ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಕಫ್ರ್ಯೂವನ್ನು ಜಾರಿಗೊಳಿಸಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷವಾಗಿದೆ. ಆದರೆ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡುತ್ತಿದೆ. ಜೊತೆಗೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಏನೂ ಮಾಡಿಲ್ಲ ಎಂದು ತಪ್ಪು ಮಾಹಿತಿ ನೀಡಿ, ಇದರಿಂದಲೇ ಮೇಕೆದಾಟು ಯೋಜನೆ ವಿಳಂಬವಾಗಿದೆ ಎಂದು ಜಾಹೀರಾತು ನೀಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಬಿಎಸ್‍ವೈ, ಜಗದೀಶ್ ಶೆಟ್ಟರ್, ಸದಾನಂದಗೌಡ ಸಿಎಂ ಆಗಿದ್ದರು. ಆಗ ಅದನ್ನು ಕೈಗೆತ್ತಿಕೊಳ್ಳಲಿಲ್ಲ, ಪ್ರಾರಂಭವನ್ನು ಮಾಡಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮೇಕೆದಾಟು ಯೋಜನೆಯನ್ನು ಕೈಗೆತ್ತುಕೊಂಡೆವು. 2013ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಸಭೆ ಮಾಡಿ ಡಿಪಿಆರ್ ತಯಾರು ಮಾಡಬೇಕು ಎಂದು ತೀರ್ಮಾನ ಮಾಡಿದೆವು. ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಡಿಪಿಆರ್ ತಯಾರು ಆಯಿತು. ಆಗಿನ ಜಲಸಂನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ರಿವೈಸ್ಡ್ ಡಿಪಿಆರ್ ಸಲ್ಲಿಸಿದ್ದಾರೆ. ನಮ್ಮ ಕಾಲದಲ್ಲಿ ಎಲ್ಲೂ ಸಹ ವಿಳಂಬವಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಜನಸಾಮಾನ್ಯರಿಗೊಂದು, ಕಾಂಗ್ರೆಸ್‍ಗೆ ಒಂದು ಕಾನೂನು ಇಲ್ಲ: ಆರಗ ಜ್ಞಾನೇಂದ್ರ

ಮೇಕೆದಾಟು ಯೋಜನೆ ಕೋರ್ಟ್‍ನಲ್ಲಿ ವಿಚಾರಣೆಗಿದೆ. ಹಾಗಾಗಿ ಏನು ಮಾಡಲು ಆಗುವುದಿಲ್ಲ ಎಂದು ನಿರಾವರಿ ಸಚಿವ ಗೋವಿಂದ ಕಾರಜೋಳ ಹೇಳುತ್ತಿದ್ದಾರೆ. ಆದರೆ 2 ವರ್ಷದಿಂದ ಕ್ಲಿಯರೆನ್ಸ್ ತೆಗೆದುಕೊಂಡಿಲ್ಲ ಅಂದರೆ ಜನರಿಗೆ ಮಾಡಿರುವ ದ್ರೋಹವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ

ಕುಡಿಯುವ ನೀರಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಈ ಯೋಜನೆ ಜಾರಿಯಾದರೆ ಇನ್ನು 50 ವರ್ಷದವರೆಗೆ ಕುಡಿಯುವ ನೀರಿಗೆ ಸಮಸ್ಯೆ ಇರಲ್ಲ. ಇದರಿಂದಾಗಿ ಎರಡೂವರೆ ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ತಮಿಳುನಾಡಿಗೆ ತಕರಾರು ತೆಗಿಯಲು ಯಾವುದೇ ಆಧಾರವಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈ ರೀತಿ ಮಾಡುತ್ತಿದೆ. ಬಿಜೆಪಿ ಅಧ್ಯಕ್ಷ ಅಣ್ಣಮಲೈ, ಸಿ.ಟಿ.ರವಿ ಕರ್ನಾಟಕದವರು ಎಂದು ಅವರು ಬೆಂಬಲ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ನಿಯಮಕ್ಕೆ ಗೌರವ ಕೊಡಬೇಕು. ನಮಗೂ ಜವಬ್ದಾರಿ ಇದೆ. ಆ ಜವಾಬ್ದಾರಿಯನ್ನು ನಿರ್ವಹಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ. ಬಿಜೆಪಿ ಎಷ್ಟೇ ತಡೆಯಲು ಪ್ರಯತ್ನಿಸಿದರೂ ನಾವು ನಿಲ್ಲಲ್ಲ. ಬೇರೆ ಬೇರೆ ಜಿಲ್ಲೆಯವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ನಾಳೆ ಚಾಮರಾಜನಗರ, ನಾಡಿದ್ದು ಮೈಸೂರಿನವರು ಬರುತ್ತಾರೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಪಾದಾಯಾತ್ರೆಯಲ್ಲಿ ಪಾಲ್ಗೊಂಡಿರುವ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ವಾಮೀಜಿ, ರೈತ ಸಂಘ ಹಾಗೂ ಬೇರೆ ಬೇರೆ ಕ್ಷೇತ್ರದವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *