ವಿಧಾನ ಪರಿಷತ್ ಚುನಾವಣೆಯಲ್ಲಿ ದಿನೇಶ್ ಗೂಳಿಗೌಡ ಗೆಲುವು ಶತಸಿದ್ಧ: ಸಿದ್ದರಾಮಯ್ಯ

Public TV
4 Min Read

ಮಂಡ್ಯ: ಈ ಬಾರಿಯ ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರು ಗೆದ್ದೆ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಮಂಡ್ಯದ ಸುಮರವಿ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ತಿನ ಚುನಾವಣೆಗೆ ನಿಂತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರಿಗೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಇವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಬಾರಿ ಪಕ್ಷದಿಂದ 20 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಬಿಜೆಪಿಯವರು ಸಹ 20 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಜೆಡಿಎಸ್ ಅವರು 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ನನಗೆ ಇಂದಿಗೂ ವಿಶ್ವಾಸವಿದ್ದು, 20 ಸ್ಥಾನಗಳಲ್ಲಿ 15 ಸ್ಥಾನಗಳನ್ನಾದರೂ ಗೆಲ್ಲುತ್ತೇವೆ. ನಾವು ಯಾರ ಮೇಲೂ ಅವಲಂಬನೆಯಾಗಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿದ್ದೇವೆ. ಆದರೆ ಬಿಜೆಪಿ ಹಾಗೂ ಜೆಡಿಎಸ್‍ನವರು ಪರೋಕ್ಷವಾಗಿ ಒಬ್ಬರಿಗೊಬ್ಬರು ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಅವರು ಒಟ್ಟಿಗೆ ಚುನಾವಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಯಾವಾಗಲೂ ಸೆಕ್ಯೂರಲಿಸಂ ತತ್ವದ ಮೇಲೆ, ಸಂವಿಧಾನದ ಮೇಲೆ ನಂಬಿಕೆ ಇಟ್ಟಿದೆ. ಕೋಮುವಾದಿಗಳ ಜೊತೆ ಯಾವುದೇ ಕಾರಣಕ್ಕೂ ಕೂಡ ಕೈ ಜೋಡಿಸುವುದಿಲ್ಲ. ಆದರೆ ಜೆಡಿಎಸ್ ಅವರು ತಮ್ಮ ಪಕ್ಷದ ಹೆಸರಿನ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಅವರು 2005ರಿಂದಲೂ ಬಿಜೆಪಿ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಬಂದಿದ್ದಾರೆ. ಈಗ ಮತ್ತೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಎಲ್ಲಾ ಮತದಾರರು ಕೂಡ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ತೀರ್ಮಾನ ಮಾಡಿದ್ದಾರೆ ಎಂದರು.

Siddaramaiah

ಈ ಬಾರಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಇಲ್ಲದೇ ಚುನಾವಣೆ ನಡೆಯುತ್ತಿದೆ. ಕಾರಣ ಸೋಲುವ ಭಯದಿಂದ ಬಿಜೆಪಿ ಅವರು ಮುಂದೂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ವಿರುದ್ಧವಾಗಿ ಗಾಳಿ ಬೀಸಲು ಪ್ರಾರಂಭವಾಗಿದೆ. ಇದಕ್ಕೆ ಕಾರಣ ಬಿಜೆಪಿ ಆಡಳಿತದಿಂದ ಚುನಾಯಿತ ಪ್ರತಿನಿಧಿಗಳು ಹಾಗೂ ಸಾಮಾನ್ಯ ಮತದಾರರು ಬೇಸತ್ತಿದ್ದಾರೆ. ಬಿಜೆಪಿ ಅವರ ಭ್ರಷ್ಟಾಚಾರದಿಂದ, ದುರಾಡಳಿತದಿಂದ, ಜನವಿರೋಧಿ, ರೈತ ವಿರೋಧಿ ನೀತಿ, ಅಭಿವೃದ್ಧಿ ಶೂನ್ಯ ದಿಂದ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಎರಡು ವರ್ಷ ಮೀರಿದೆ, ನರೇಂದ್ರ ಮೋದಿ ಬಂದು 8 ವರ್ಷ ಆಗಿದೆ. ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಬಿಜೆಪಿ ಹಾಗೂ ಜೆಡಿಎಸ್ ಕೊಡುಗೆ ಶೂನ್ಯ ಎಂದು ಹೇಳಿದರು.

ಪಂಚಾಯತ್ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷ ಎರಡು ಬಾರಿ ಶಕ್ತಿ ಕೊಡುವ ಕೆಲಸ ಮಾಡಿದೆ. ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಗಳನ್ನು ತಂದು ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾಕರಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದರು ಎಂದು ತಿಳಿಸಿದರು.

ಅಧಿಕಾರ ವಿಕೇಂದ್ರೀಕರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ನಂಬಿಕೆ ಹಾಗೂ ಬದ್ಧತೆ ಇದೆ. ಅಧಿಕಾರ 04 ವರ್ಗಗಳಲ್ಲಿ ಹಂಚಿಕೆಯಾಗಬೇಕು. ಇದರಿಂದ ಎಲ್ಲರೂ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ. ಇದನ್ನು ಪ್ರಜಾತಂತ್ರದ ವಿಕೇಂದ್ರೀಕರಣ ಎಂದು ಕರೆಯಲಾಗುತ್ತದೆ. ಈ ಅಧಿಕಾರ ವಿಕೇಂದ್ರೀಕರಣಕ್ಕೆ ಬೇರೆ ಪಕ್ಷದವರ ಕೊಡುಗೆ ಏನು ಇಲ್ಲ. ಕಾಂಗ್ರೆಸ್ ಸರ್ಕಾರ ನರೇಗಾದಂತಹ ಯೋಜನೆ ರೂಪಿಸದಿದ್ದರೆ ಹಾಹಾಕಾರ ಉಂಟಾಗುತ್ತಿತ್ತು. ಮೊದಲ ಲಾಕ್‍ಡೌನ್ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಿದ್ದೆ ಈ ನರೇಗದಿಂದ. ಈ ನರೇಗದಿಂದ ಸುಮಾರು 4 ರಿಂದ 5 ಕೋಟಿ ಹಣ ಬಿಡುಯಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಆಂಧ್ರ ಪ್ರದೇಶ ಪ್ರವಾಹ – 1 ಕೋಟಿ ರೂ. ದೇಣಿಗೆ ಕೊಟ್ಟ ಪ್ರಭಾಸ್

ಈ ಬಾರಿ ಹೆಚ್ಚು ಮಳೆಯಿಂದ ಬೆಳೆ ನಾಶವಾಗಿದೆ. ಮನೆಗಳು ನೆಲಸಮವಾಗಿದೆ. ಕೋವಿಡ್ ಕಾಲದಲ್ಲಿ ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ನಿಧನರಾದರು. ಕರ್ನಾಟಕದ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನರು ಸತ್ತರು. ಇದಕ್ಕೆ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರು ಇಬ್ಬರು ಮಾತ್ರ ಸತ್ತಿದ್ದಾರೆಂದು ಸುಳ್ಳು ಹೇಳಿದರು ಎಂದು ತಿಳಿಸಿದರು.

ಇಷ್ಟೇಲ್ಲಾ ಅನಾಹುತಗಳಾಗಿದ್ದರೂ ಪರಿಹಾರ ನೀಡಿಯೇ ಇಲ್ಲ. ಅಸೆಂಬ್ಲಿಯಲ್ಲಿ ಸಚಿವರನ್ನು ಕೇಳಿದರೆ ಹಣ ಇಲ್ಲ ಎಂದು ಸಬೂಬು ಹೇಳುತ್ತಾರೆ. ಕಂಟ್ರಾಕ್ಟರ್ ಕೆಂಪಣ್ಣ ಅವರು ಮೋದಿಗೆ ಪತ್ರ ಬರೆದು ಶೆ.40% ಕಮಿಷನ್ ಅನ್ನು ಸರ್ಕಾಕ್ಕೆ ಕೊಡಬೇಕು ಎಂದು ತಿಳಿಸಿದ್ದಾರೆ. ಇದರಿಂದ ಗುತ್ತಿಗೆದಾರರಿಗೆ ಎಷ್ಟೆಲ್ಲಾ ತೊಂದರೆಯಾಗಿದೆ ಎಂಬುದು ಮೋದಿಗೆ ಮನವರಿಕೆಯಾಗಿಲ್ಲ. ಅದಕ್ಕಾಗಿ ಅವರು ಯಾವ ಪ್ರತಿಕ್ರಿಯೆ ನೀಡಿಲ್ಲ. ಹಾಗೂ ತನಿಖೆಗೂ ಆದೇಶಿಸಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ತಂದಿರುವ ಅನೇಕ ಯೋಜನೆಗಳನ್ನು ಬಿಜೆಪಿ ನಿಲ್ಲಿಸುತ್ತಾ ಬಂದಿದೆ. ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿದ್ದ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿದ್ದಾರೆ ಎಂದರು. ಪೆಟ್ರೋಲ್, ಡಿಸೆಲ್ ಬೆಲೆ ಏರಿಸಿ ಕಾಂಗ್ರೆಸ್ ಪಕ್ಷದ ಮೇಲೆ ಅಪವಾದ ಹೊರಿಸುತ್ತಿದ್ದಾರೆ. ಸರ್ಕಾರದಲ್ಲಿ ಹಣ ಇದ್ದರೂ, ಉಳಿದಿದ್ದರೂ ಕಾಂಗ್ರೆಸ್ ಪೆಟ್ರೋಲ್, ಡಿಸೆಲ್ ಮೇಲೆ ಸಾಲ ಮಾಡಿರುವ ಕಾರಣ ಬೆಲೆ ಹೆಚ್ಚಳ ಮಾಡಿದ್ದೆವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ

ಇಷ್ಟೆಲ್ಲಾ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಈ ಗೆಲುವಿನ ಮೂಲಕ 2023ರ ವಿಧಾನ ಸಭೆ ಚುನಾವಣೆ ಗೆದ್ದೆ ಗೆಲ್ಲುತ್ತೇವೆ ಎಂದು ಹೇಳಿದರು. ವೇದಿಕೆಯಲ್ಲಿ ಮಾಜಿ ಸಚಿವರಾದ ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಎಂ.ಎಸ್.ಆತ್ಮಾನಂದ ಮಾಜಿ ಶಾಸಕಿ ಮಲ್ಲಾಜಮ್ಮ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ರಮೇಶ್ ಬಾಬು ಬಂಡಿಸಿದ್ದೆಗೌಡ, ರಾಮಕೃಷ್ಣ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ಪರಿಶಿಷ್ಟ ಜಾತಿ ಸಂಘದ ಅಧ್ಯಕ್ಷ ಸುರೇಶ್ ಕಂಠಿ ಸೇರಿದಂತೆ ಇತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *