– ಯಾವ ಧರ್ಮವೂ ಇನ್ನೊಬ್ಬರನ್ನ ದ್ವೇಷ ಮಾಡಿ ಅಂತ ಹೇಳಲ್ಲ
– ಸೌಹಾರ್ದತೆಯ ಪಾಠ ಹೇಳಿದ ಸಿಎಂ
ಮಂಗಳೂರು: ಜಾತಿ, ಧರ್ಮದ ಹೆಸರಿನಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂ.1 ಇತ್ತು. ಈಗ ಅದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ ಎಂದು ಪುತ್ತೂರು ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah,) ಹೇಳಿದರು.
ಪುತ್ತೂರು ಶಾಸಕ ಅಶೋಕ್ ರೈ (Ashok Rai) ಮಾಲೀಕತ್ವದ ರೈ ಎಸ್ಟೇಟ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ʻಅಶೋಕ ಜನಮನ -2025ʼ ಹಾಗೂ ದೀಪಾವಳಿ ಪ್ರಯುಕ್ತ ವಸ್ತ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಜನರಿಗೆ ಸೌಹಾರ್ದತೆಯ ಪಾಠ ಮಾಡಿದರು. ಇದನ್ನೂ ಓದಿ: ಮೊದಲ ದಿನ ಸಾಧ್ಯವಾಗದ ಹಾಸನಾಂಬೆ ದರ್ಶನ – ಇಂದು ಮತ್ತೆ ದೇವಾಲಯಕ್ಕೆ ಬಂದ ಸುಳ್ಯ ಶಾಸಕಿ
ಕೆಲವರು 5 ಗ್ಯಾರಂಟಿ ಯೋಜನೆ (Guarantee Scheme) ಟೀಕೆ ಮಾಡ್ತಾರೆ. ಸರ್ಕಾರದ ಬಳಿ ದುಡ್ಡಿಲ್ಲ ಅಂತ, ದುಡ್ಡಿಲ್ಲದಿದ್ದರೆ ಪುತ್ತೂರಿಗೆ ಮೆಡಿಕಲ್ ಕಾಲೇಜ್ ಕೊಡೋಕೆ ಆಗ್ತಿತ್ತಾ? ಜಾತಿ, ಧರ್ಮದ ಹೆಸರಿನಲ್ಲಿ ಜಗಳ ಮಾಡೋದ್ರಲ್ಲಿ ನಿಮ್ಮ ಜಿಲ್ಲೆ ನಂಬರ್ ವನ್ ಇತ್ತು. ಆದರೆ ಈಗ ಅದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ. ಏಕೆಂದ್ರೆ ಎತ್ತಿಕಟ್ಟೋರ ಮಕ್ಕಳು ಯಾರೂ ಈ ಜಗಳದಲ್ಲಿ ಇರಲ್ಲ. ಮೇಲ್ಜಾತಿ, ಶ್ರೀಮಂತರ ಮಕ್ಕಳು ಯಾರೂ ಸಾಯಲ್ಲ. ನಾನು ಯಾರ ಮಾತನ್ನೂ ಕೇಳಿಲ್ಲ, ಕಮಿಷನರ್, ಎಸ್ಪಿ ದಕ್ಷರನ್ನ ನೇಮಕ ಮಾಡಿದೆ. ಈಗ ಸುಧಾರಣೆ ಆಗಿಲ್ವಾ? ದಕ್ಷ ಅಧಿಕಾರಿಗಳು ಇದ್ರೆ ಬದಲಾವಣೆ ಸಾಧ್ಯ. ಯಾವತ್ತಿಗೂ ನಾವು ಅಮಾಯಕರ ಮಕ್ಕಳನ್ನ ಸಾಯಿಸೋ ಕೆಲಸ ಮಾಡಬಾರದು. ಬೇರೆ ಧರ್ಮದವರನ್ನ ದ್ವೇಷ ಮಾಡೋ ಕೆಲಸ ಮಾಡಬಾರದು, ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಮನುಷ್ಯರಾಗೋಕೆ ಪ್ರಯತ್ನ ಮಾಡಬೇಕು. ಕೋಮು ಸೌಹಾರ್ದತೆ ಇದ್ದರೆ ರಾಜ್ಯ, ಜಿಲ್ಲೆ ಅಭಿವೃದ್ಧಿಯಾಗುತ್ತೆ. ಅದಕ್ಕಾಗಿ ನಾವು ಕೋಮು ಸೌಹಾರ್ದ ಕಾಪಾಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೌಹಾರ್ದಕ್ಕೆ ವಿಶೇಷ ಗಮನ ಕೊಡಬೇಕು. ಸುಳ್ಳು ಹೇಳಿದ್ರೆ ಕಾನೂನು ತಂದು ಕೇಸ್ ಹಾಕ್ತೀವಿ. ಪ್ರಿಯಾಂಕ್ ಖರ್ಗೆ ಮತ್ತು ಹೆಚ್.ಕೆ ಪಾಟೀಲ್ ಆ ಕೆಲಸದಲ್ಲಿ ತೊಡಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಅಶೋಕ್ ರೈ ಶಾಸಕರಾಗಿ ಬಹಳ ಉತ್ತಮ ರೀತಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ. ಜೊತೆಯಲ್ಲಿ ಟ್ರಸ್ಟ್ ವತಿಯಿಂದ ದೀಪಾವಳಿ ಸಂಧರ್ಭದಲ್ಲಿ ವಸ್ತ್ರದಾನ ಮಾಡ್ತಾ ಇದ್ದಾರೆ. ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಇವತ್ತು ಒಂದು ಲಕ್ಷ ಜನರಿಗೆ ದಾನ ಮಾಡ್ತಾ ಇದ್ದಾರೆ. ಅಶೋಕ್ ರೈ ಸಮಾಜದ ಶ್ರೀಮಂತ ಜನರಿಗೆ ಮಾರ್ಗದರ್ಶಕರಾಗಲಿ, ಮನುಷ್ಯ ತಾನು ಗಳಿಸಿದ್ದನ್ನ ನಿರ್ಗತಿಕರಿಗೆ ಹಂಚುವುದು ಬಹಳ ಒಳ್ಳೆಯ ಕೆಲಸ. ಸಮಾಜದಲ್ಲಿ ಶ್ರೀಮಂತರು, ಬಡವರು, ಮೇಲ್ಜಾತಿ, ಕೆಳ ಜಾತಿ ಎಲ್ಲರೂ ಇದ್ದಾರೆ. ಸಮಾನತೆಯ ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದೇ ಇರೋರಿಗೆ ಸಹಾಯ ಮಾಡಬೇಕು. ಬಸವಣ್ಣ ಕೂಡ ಕಾಯಕ ಮತ್ತು ದಾಸೋಹದ ಬಗ್ಗೆ ಹೇಳಿದ್ದಾರೆ. ನಮ್ಮಲ್ಲಿ ಅಸಮಾನತೆ, ತಾರತಮ್ಯ ಇದೆ, ಇಲ್ಲಿ ಸಮ ಸಮಾಜ ನಿರ್ಮಾಣ ಆಗಬೇಕು. ನಾನು ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದಿಸ್ತಾ ಇದ್ದೇನೆ. ಸಂವಿಧಾನ ಅರಿಯದೇ ಇದ್ದರೆ ಸಮ ಸಮಾಜ ನಿರ್ಮಾಣ ಅಸಾಧ್ಯ ಎಂದು ತಿಳಿಸಿದರು. ಇದನ್ನೂ ಓದಿ: ದೇವಿರಮ್ಮ ಬೆಟ್ಟ ಏರುವಾಗ ಇಬ್ಬರು ಅಸ್ವಸ್ಥ – ಬೆಟ್ಟದಿಂದ ಹೊತ್ತುತಂದ ಅಗ್ನಿಶಾಮಕ ಸಿಬ್ಬಂದಿ
ಯಾವ ಧರ್ಮವೂ ದ್ವೇಷಿಸಿ ಅನ್ನಲ್ಲ
ನಮ್ಮ ಸಮಾಜದಲ್ಲಿ ಅನೇಕ ಜಾತಿ ಮತ್ತು ಧರ್ಮಗಳಿವೆ. ಯಾವ ಧರ್ಮವೂ ದ್ವೇಷ ಮಾಡಿ ಅಂತ ಯಾರಿಗೂ ಹೇಳಲ್ಲ. ಪ್ರತಿಯೊಬ್ಬನ ಪ್ರೀತಿಸಿ ಅಂತ ಹೇಳುತ್ತೆ, ವೈವಿಧ್ಯತೆಯಲ್ಲಿ ಏಕತೆ ಮಾಡಿಕೊಳ್ಳಬೇಕು. ಧರ್ಮದ ತತ್ವ, ಆದರ್ಶ ಪಾಲನೆ ಮಾಡಲಿ, ಸರ್ವ ಜನಾಂಗದ ಶಾಂತಿಯ ತೋಟದ ಬದಲು ದ್ವೇಷ, ಕಚ್ಚಾಟ ಇರಬಾರದು ಎಂದು ಹೇಳಿದರು.